ಹಿಂದೂಸ್ತಾನ ಉಳಿದರೆ ಮಾತ್ರ ಸಂಸ್ಕೃತಿ ರಕ್ಷಣೆ

KannadaprabhaNewsNetwork |  
Published : Feb 11, 2026, 01:30 AM IST
ಹಿಂದೂ ಧರ್ಮವನ್ನು ನಾವು ರಕ್ಷಿಸಿದರೆ ನಮ್ಮನ್ನು ಹಿಂದೂ ಧರ್ಮ ರಕ್ಷಿಸುತ್ತದೆ : ಲೋಕೇಶ್ವರ | Kannada Prabha

ಸಾರಾಂಶ

ಹಿಂದೂ, ಹಿಂದೂಸ್ತಾನ, ಹಿಂದೂ ಸಂಸ್ಕೃತಿ ಉಳಿದು ಬೆಳೆದರೆ ಮಾತ್ರ ಭಾರತದ ಸಂಸ್ಕಾರ ಪರಂಪರೆ ಉಳಿಯಲು ಸಾಧ್ಯ ಎಂದು ಹಿಂದೂ ಸಮಾಜೋತ್ಸವ ಸಮಿತಿ ಮುಖಂಡ ಲೋಕೇಶ್ವರ ಹೇಳಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಹಿಂದೂ, ಹಿಂದೂಸ್ತಾನ, ಹಿಂದೂ ಸಂಸ್ಕೃತಿ ಉಳಿದು ಬೆಳೆದರೆ ಮಾತ್ರ ಭಾರತದ ಸಂಸ್ಕಾರ ಪರಂಪರೆ ಉಳಿಯಲು ಸಾಧ್ಯ ಎಂದು ಹಿಂದೂ ಸಮಾಜೋತ್ಸವ ಸಮಿತಿ ಮುಖಂಡ ಲೋಕೇಶ್ವರ ಹೇಳಿದರು.

ನಗರದಲ್ಲಿ ಹಿಂದೂ ಸಮಾಜೋತ್ಸವ ಅಂಗವಾಗಿ ನಡೆದ ಶೋಭಾಯಾತ್ರೆ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ವಿಶ್ವದಲ್ಲೇ ಶ್ರೇಷ್ಠ ಇತಿಹಾಸ ಹೊಂದಿದೆ. ಇತಿಹಾಸ ಅರ್ಥ ಮಾಡಿಕೊಂಡರೆ ಭಾರತೀಯರ ಪರಂಪರೆ ಏನು ಎಂದು ತಿಳಿಯುತ್ತದೆ. ಹಿಂದೂ ಧರ್ಮದಲ್ಲಿ ಮಾನವೀಯತೆ, ಸಮಾನತೆ, ಸಹಭಾಳ್ವೆ, ಧರ್ಮಮಾರ್ಗ ಎಲ್ಲವೂ ಹಾಸುಹೊಕ್ಕಾಗಿದ್ದು ಹಿಂದೂ ಧರ್ಮವನ್ನು ನಾವು ರಕ್ಷಿಸಿದರೆ ನಮ್ಮನ್ನು ಹಿಂದೂ ಧರ್ಮ ರಕ್ಷಿಸುತ್ತದೆಯಾದ್ದರಿಂದ ನಮ್ಮಲ್ಲಿ ಒಗ್ಗಟ್ಟು ಬಹಳ ಮುಖ್ಯವಾಗಿದ್ದು ನಾವೆಲ್ಲ ಒಂದೇ, ಒಂದೇ ಕುಟುಂಬ ಎಂಬುದನ್ನು ನಮ್ಮ ಭವಿಷ್ಯದ ಯುವಪೀಳಿಗೆಗೆ ಅರ್ಥಮಾಡಿಸುವ ಜವಾಬ್ದಾರಿಯನ್ನು ಎಲ್ಲರೂ ಪ್ರಾಮಾಣಿಕವಾಗಿ ಮಾಡಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪರಿಷತ್ ಮುಖಂಡರಾದ ಮಾಚೇನಹಳ್ಳಿ ಪೃಥ್ವಿಕುಮಾರ್ ಮಾತನಾಡಿ ಭಾರತ ದೇಶ ಹಿಂದೂಗಳಿರುವ ಏಕೈಕ ದೇಶವಾಗಿದೆ. ಈ ದೇಶದ ಹಿಂದುಗಳು ಮೂಲ ಮಾಲೀಕರಾಗಿದ್ದಾರೆ. ಅನ್ಯ ಧರ್ಮದವರು ಬಾಡಿಗೆ ಮನೆಯಲ್ಲಿ ಇದ್ದಾರೆ. ನೆರೆ ರಾಷ್ಟ್ರಗಳಲ್ಲಿ ಅನ್ಯಧರ್ಮೀಯರ ದಬ್ಬಾಳಿಕೆಯಿಂದ ಹಿಂದೂಗಳ ಜನಸಂಖ್ಯೆ ಕುಸಿದಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ದೇಶದ ೧೧೪೫ ಶಾಖೆಗಳಲ್ಲಿ ಸಾಮಾಜಿಕ ಕಾರ್ಯ ಮಾಡುತ್ತಿದೆ. ಹಿಂದೂಗಳು ಒಂದಾಗುತ್ತಾರೆ ಎಂಬ ಭಯದಿಂದ ಇತರೆ ರಾಜಕೀಯ ಪಕ್ಷಗಳು ಸಂಘವನ್ನು ದೂಷಿಸುತ್ತಿವೆ. ನೂರಾರು ವರ್ಷಗಳಿಂದ ಅನ್ಯ ಧರ್ಮದ ದಾಳಿಯಿಂದ ಈ ದೇಶದ ಸಂಪತ್ತು ಕೂಡ ಲೂಟಿಯಾಗಿದೆ. ಶ್ರೀರಾಮನೇ ಸ್ವತಃ ಓಡಾಡಿದ ಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಜಗತ್ತಿನಲ್ಲಿ ಸಮಾಜಕ್ಕೆ ಸರ್ವಸ್ವವನ್ನೂ ಕೊಟ್ಟಿದ್ದು ಹಿಂದೂ ಸಮಾಜ ಮಾತ್ರ. ನಮ್ಮ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯನ್ನು ನೀಡುವ ಕೆಲಸ ಮಾತೆಯರಿಂದ ಆಗಬೇಕಾಗಿದೆ. ರಾಷ್ಟ್ರದ ಹಿತಕ್ಕಾಗಿ ಪ್ರತಿಯೊಬ್ಬರು ಕೆಲಸ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಮಾತೃಶಕ್ತಿ ನುಡಿಗಳನ್ನಾಡಿದ ಲಕ್ಷ್ಮಿಸತ್ಯನಾರಾಯಣ ಭಾರತ ದೇಶದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಪೂರ್ವಜನ್ಮದ ಪುಣ್ಯವಾಗಿದೆ. ಭಾರತೀಯ ಕುಟುಂಬದಲ್ಲಿ ಮಹಿಳೆಗೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ಎಲ್ಲಿ ಮಹಿಳೆಗೆ ಗೌರವ ಕೊಡುತ್ತಾರೋ ಅಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ. ಈ ದೇಶದ ಮಾತೆಯರು ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಿದ್ದಾರೆ. ಗರ್ಭದಲ್ಲಿದ್ದಾಗಲೇ ಸಂಸ್ಕಾರ ಮಹತ್ವವಾದದ್ದು. ಮಾತೃಶಕ್ತಿ ಮಕ್ಕಳಲ್ಲಿ ಸಂಬಂಧಗಳ ಸುರಕ್ಷತೆ ಬಗ್ಗೆ ತಿಳಿಸಿಕೊಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಶಿಡ್ಲಹಳ್ಳಿ ಮಹಾಸಂಸ್ಥಾನ ಮಠದ ಶ್ರೀ ಗುರುಕುಲ ನಂದಾಶ್ರಮದ ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮಿಜಿ ಆಶೀರ್ವಚನ ನೀಡುತ್ತಾ ಜಗತ್ತಿನಲ್ಲಿ ಹಿಂದೂ ಧರ್ಮ ತನ್ನದೇ ಆದ ವ್ಯಾಖ್ಯಾನವನ್ನು ನೀಡಿದೆ. ಗಾಳಿ, ನೀರು, ಬೆಂಕಿ ತನ್ನ ಶಕ್ತಿಯನ್ನು ಎಲ್ಲಾ ಕಡೆಯಲ್ಲೂ ಒಂದೇ ಆಗಿ ತೋರಿಸಿವೆಯೋ ಹಾಗೆ ಮತ ವೈಯಕ್ತಿಕ, ಧರ್ಮ ಸಾರ್ವತ್ರಿಕವಾಗಿದೆ. ಹಿಂದೂಗಳಲ್ಲಿ ಸಂಘಟನೆ ಆಗಬೇಕು. ಭಾರತ ಬಹುತ್ವವನ್ನು ಒಪ್ಪಿಕೊಂಡಿರುವ ದೇಶವಾಗಿದೆ. ಸಂವಿಧಾನ ಕೂಡ ಬಹುತ್ವವನ್ನು ಒಪ್ಪಿಕೊಂಡಿದ್ದು ಅದು ಈ ದೇಶದ ಶಕ್ತಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ರವೀಂದ್ರ ಹಿಂದೂ ಸಮಾಜೋತ್ಸವ ಸಮಿತಿಯ ಮುಖಂಡರಾದ ಪ್ರಸನ್ನ ಕುಮಾರ್, ಸೊಪ್ಪು ಗಣೇಶ್, ತರಕಾರಿ ಗಂಗಾಧರ್ ಶ್ರೀಧರ್ ಲಕ್ಕವಳ್ಳಿ, ರಾಜೀವಲೋಚನ ಮತ್ತಿತರರು ಇದ್ದರು. ಮನ್ವಿತಾ ಸುಹಾಸ್ ಪ್ರಾರ್ಥಿಸಿದರು, ಸಿರಿಗಂಧಗುರು ಸ್ವಾಗತಿಸಿದರು, ಓಹಿಲಾ ಗಂಗಾಧರ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಯಕ್ರಮಕ್ಕೆ ಮುನ್ನ ಶೋಭಾ ಯಾತ್ರೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಹಿಂದೂ ಬಾಂಧವರು ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5,06,582 ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆ
ರಾಜ್ಯ ರಾಜಕಾರಣಕ್ಕೆ ಡಾ.ಕೆ.ಸುಧಾಕರ್ ಬರಲಿ: ಎ.ಗಜೇಂದ್ರ