ರಾಜ್ಯದ ಮಾರುಕಟ್ಟೆಯಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ನಂತಹ ಅಪಾಯಕಾರಿ ರಾಸಾಯನಿಕ ಬಳಸಿ ಮಾಗಿಸಿದ ಮಾವಿನ ಹಣ್ಣು ಸೇರಿದಂತೆ ಹಲವು ಹಣ್ಣು ಭರ್ಜರಿ ಮಾರಾಟ ನಡೆಯುತ್ತಿದೆ
ಕೊಪ್ಪಳ: ರಾಜ್ಯಾದ್ಯಂತ ರಾಸಾಯನಿಕ ಬಳಸಿ ಹಣ್ಣಾಗಿಸಿದ ಮಾವು ಸೇರಿದಂತೆ ವಿವಿಧ ಹಣ್ಣುಗಳ ಭರ್ಜರಿ ಮಾರಾಟ ನಡೆಯುತ್ತಿದ್ದು, ತಡೆಗಟ್ಟಲು ಹಾಗೂ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಈ ಕುರಿತಂತೆ ಜಿಲ್ಲಾಧಿಕಾರಿ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿರುವ ಮುಖಂಡರು, ಪ್ರಸ್ತುತ ರಾಜ್ಯದಲ್ಲಿ ಮಾವಿನ ಹಣ್ಣಿನ ಸೀಸನ್ ಆರಂಭವಾಗಿದ್ದು, ರಾಜ್ಯದ ಮಾರುಕಟ್ಟೆಯಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ನಂತಹ ಅಪಾಯಕಾರಿ ರಾಸಾಯನಿಕ ಬಳಸಿ ಮಾಗಿಸಿದ ಮಾವಿನ ಹಣ್ಣು ಸೇರಿದಂತೆ ಹಲವು ಹಣ್ಣು ಭರ್ಜರಿ ಮಾರಾಟ ನಡೆಯುತ್ತಿದೆ. ಎಲ್ಲ ಅಧಿಕಾರಿಗಳಿಗೂ ಗೊತ್ತಿದ್ದರೂ ಸಹ ಏನು ತಿಳಿಯದಂತೆ ಸುಮ್ಮನಿದ್ದಾರೆ. ಹೆಚ್ಚು ಲಾಭದ ಆಸೆಗೆ ಬಿದ್ದ ಬಹುತೇಕ ವ್ಯಾಪಾರಿಗಳು ಮತ್ತು ಮಧ್ಯವರ್ತಿಗಳು ಕ್ಯಾಲ್ಸಿಯಂ ಕಾರ್ಬೈಡ್‌ನಂತಹ ಅಪಾಯಕಾರಿ ರಾಸಾಯನಿಕ ಬಳಸಿ ಮಾವಿನಹಣ್ಣು ಸೇರಿದಂತೆ ವಿವಿಧ ಹಣ್ಣು ಕೃತಕವಾಗಿ ಹಣ್ಣಾಗಿಸುತ್ತಿದ್ದಾರೆ. ಕೃತಕವಾಗಿ ರಾಸಾಯನಿಕದಿಂದ ಮಾಗಿಸಿದ ಹಣ್ಣು ಸೇವಿಸುವುದರಿಂದ ಜನರಲ್ಲಿ ಕ್ಯಾನ್ಸರ್,ನರಮಂಡಲದ ಕಾಯಿಲೆ ಮತ್ತು ಜೀರ್ಣಾಂಗವ್ಯೂಹದ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ. ಆಹಾರ ಸುರಕ್ಷತಾ ಇಲಾಖೆ ಹಾಗೂ ಸಂಬಂಧಪಟ್ಟ ಸ್ಥಳೀಯ ಆಡಳಿತದ ಅಧಿಕಾರಿಗಳು ಈ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣುತ್ತಿದೆ. ಕೂಡಲೇ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.ರಾಸಾಯನಿಕ ಬಳಸಿ ಮಾಗಿಸಿದ ಹಣ್ಣುಗಳ ಮಾರಾಟ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಮುಖಂಡರು ಆಗ್ರಹಿಸಿದ್ದಾರೆ.
ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್, ದಲಿತ ಯುವ ವೇದಿಕೆ ಜಿಲ್ಲಾ ಸಂಚಾಲಕ ಸುಂಕಪ್ಪ ಮೀಸಿ, ಪ್ರಜಾಶಕ್ತಿ ಕನ್ನಡಪರ ವೇದಿಕೆಯ ಜಿಲ್ಲಾ ಖಜಾಂಚಿ ಡಿ.ಮುದ್ದುರಾಜ್ ಚನ್ನದಾಸರ್, ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಮೊಹಮ್ಮದ್ ಗೌಸ್ ನೀಲಿ, ಬಿಬಿಎಸ್ ಮುಖಂಡ ಕಾಶಪ್ಪ ಚಲವಾದಿ, ಶಿವರಾಜ್ ಚಲವಾದಿ ಸೇರಿದಂತೆ ಮೊದಲಾದವರು ಮನವಿ ಸಲ್ಲಿಕೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.