ಅಕ್ರಮಗಳಿಗೆ ಕಡಿವಾಣ ಹಾಕಿ, ದಲಿತರಿಗೆ ನ್ಯಾಯ ಕೊಡಿಸಿ

KannadaprabhaNewsNetwork |  
Published : Feb 10, 2025, 01:49 AM IST
ಫೋಟೋ 9ಪಿವಿಡಿ3ಪಾವಗಡ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಎಸ್‌ಸಿ ಎಸ್‌ಟಿ ಕುಂದುಕೊರತೆಗಳ ಸಭೆಯಲ್ಲಿ ಅಕ್ರಮ ಚಟವಟಿಕೆಗಳ ಕುರಿತು ಮುಖಂಡ ಡಿಜೆಎಸ್‌ ನಾರಾಯಣಪ್ಪ ಡಿವೈಎಸ್‌ಪಿ ಗಮನಕ್ಕೆ ತಂದರು. | Kannada Prabha

ಸಾರಾಂಶ

ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಅಕ್ರಮ ಚಟವಟಿಕೆಗಳು ನಡೆಯುತ್ತಿದ್ದು ಅಲ್ಲಿನ ಎಸ್ ಬಿ. ಕಾನ್‌ಸ್ಟೇಬಲ್‌ವೊಬ್ಬರು ಮಟ್ಕಾ ಮತ್ತು ಇಸ್ಪೀಟ್ ದಂಧೆ ಕೋರರ ಜೊತೆ ಶಾಮೀಲಾಗಿದ್ದು ರಾಜಾರೋಷವಾಗಿ ಈ ಅಕ್ರಮ ದಂಧೆಗಳು ನಡೆಯುತ್ತಿರುವ ಪರಿಣಾಮ ಈ ಭಾಗದ ಅನೇಕ ಮಂದಿ ಬಡ ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ಎಂದು ಜಿಲ್ಲಾ ಅಟ್ರಾಸಿಟಿ ಸಮಿತಿಯ ಸದಸ್ಯ ಪಾವಗಡದ ಡಿಜೆಎಸ್ ನಾರಾಯಣಪ್ಪ ಆರೋಪಿಸಿದ್ದಾರೆ.

ಕನ್ನಡಪ್ರಭವಾರ್ತೆ ಪಾವಗಡ

ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಅಕ್ರಮ ಚಟವಟಿಕೆಗಳು ನಡೆಯುತ್ತಿದ್ದು ಅಲ್ಲಿನ ಎಸ್ ಬಿ. ಕಾನ್‌ಸ್ಟೇಬಲ್‌ವೊಬ್ಬರು ಮಟ್ಕಾ ಮತ್ತು ಇಸ್ಪೀಟ್ ದಂಧೆ ಕೋರರ ಜೊತೆ ಶಾಮೀಲಾಗಿದ್ದು ರಾಜಾರೋಷವಾಗಿ ಈ ಅಕ್ರಮ ದಂಧೆಗಳು ನಡೆಯುತ್ತಿರುವ ಪರಿಣಾಮ ಈ ಭಾಗದ ಅನೇಕ ಮಂದಿ ಬಡ ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ಎಂದು ಜಿಲ್ಲಾ ಅಟ್ರಾಸಿಟಿ ಸಮಿತಿಯ ಸದಸ್ಯ ಪಾವಗಡದ ಡಿಜೆಎಸ್ ನಾರಾಯಣಪ್ಪ ಆರೋಪಿಸಿದ್ದಾರೆ.

ಪಾವಗಡ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಭಾನುವಾರ ಮಧ್ಯಾಹ್ನ ಹಮ್ಮಿಕೊಂಡಿದ್ದ ಎಸ್ಸಿ ಎಸ್ಟಿ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನ ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಸರ್ಕಾರದ ನಿಯಮನುಸಾರ ಪ್ರತಿ ತಿಂಗಳಿಗೊಮ್ಮೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ (ಎಸ್‌ಸಿಎಸ್‌ಟಿ) ಕುಂದುಕೊರತೆ ಸಭೆ ನಡೆಸಬೇಕು. ಆದರೆ ಸರ್ಕಾರಕ್ಕೆ ವರದಿ ಸಲ್ಲಿಸುವ ಹಿನ್ನೆಲೆಯಲ್ಲಿ ಬರೀ ಕೇವಲ ನಾಲ್ಕು ಮಂದಿ ಸೇರಿಸಿ ಬೇಕಾಬಿಟ್ಟಿಯಾಗಿ ತಮಗೆ ಬೇಕಾದ ರೀತಿಯಲ್ಲಿ ಎಸ್‌ಸಿ ಎಸ್‌ಟಿ ಸಭೆ ನಡೆಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಇಲ್ಲಿನ ಪೊಲೀಸರು ಎಸ್‌ಸಿ ಎಸ್‌ಟಿ ಸಮಸ್ಯೆ ಕುರಿತು ಈ ಭಾಗದ ಜನರಿಗೆ ಜಾಗೃತಿ ಮೂಡಿಸುವಲ್ಲಿ ವಿಫಲರಾದ ಪರಿಣಾಮ ದೌರ್ಜನ್ಯ ಹಾಗೂ ಇತರೆ ಅಪರಾಧ ಸಮಸ್ಯೆಗಳ ಸಂದರ್ಭದಲ್ಲಿ ದಲಿತರು ಠಾಣೆಗೆ ಹೋಗಿ ಪೊಲೀಸರಿಗೆ ದೂರು ನೀಡಲು ಭಯಾಭೀತರಾಗಿದ್ದಾರೆ. ದೌರ್ಜನ್ಯಕ್ಕೆ ತುತ್ತಾದ ವೇಳೆ ರಾಜಕೀಯ ಮುಖಂಡರ ಸಮ್ಮುಖದಲ್ಲಿ ಠಾಣೆಗೆ ಹೋಗಿ ದೂರು ನೀಡಿದರೆ, ನ್ಯಾಯಯುತವಾಗಿದ್ದರೂ ಸ್ಥಳೀಯರ ಕುತಂತ್ರಕ್ಕೆ ಮಣಿದು ದೂರು ಸ್ವೀಕರಿಸದೆ ಅನ್ಯಾಯ ಮಾಡುತ್ತಿದ್ದಾರೆ. ಅಲ್ಲದೇ ದಲಿತರಿಗೆ ಸಂಬಂಧಪಟ್ಟ ಯಾವುದೇ ದೂರನ್ನು ನೀಡಿದರೆ ಆ ದೂರುಗಳನ್ನೇ ಬಂಡವಾಳ ಮಾಡಿಕೊಂಡು ಪೊಲೀಸರೆ ಡೀಲ್ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.

ಈ ಭಾಗದಲ್ಲಿ ರಾಜರೋಷವಾಗಿ ಆನ್‌ಲೈನ್‌ ಮಟ್ಕಾ, ಇಸ್ಪೀಟ್‌, ಬಿಲ್ಲು ಎತ್ತುವುದು ಹಾಗೂ ಮರಳು ದಂಧೆಗಳು ವ್ಯಾಪಕವಾಗಿ ನಡೆಯುತ್ತಿವೆ. ಇದಕ್ಕೆಲ್ಲ ಇಲ್ಲಿನ ಠಾಣೆಯ ಎಸ್ ಬಿ ಪೊಲೀಸ್‌ ಪೇದೆ ಶಾಮೀಲಿನಿಂದ ನಡೆಯುತ್ತಿದೆ ಎಂದು ಮಧುಗಿರಿ ಡಿವೈಎಸ್ಪಿ ಮಂಜುನಾಥ್ ಅವರಿಗೆ ಸಭೆಯಲ್ಲಿ ತಿಳಿಸಿ ಪರಿಶೀಲಿಸಿ ತಡೆಗಟ್ಟುವಂತೆ ದೂರು ನೀಡಿದರು.ಅದೇ ರೀತಿ ತಾಲೂಕಿನ ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯ ಪೇದೆಯೊಬ್ಬರು ಸಹ ಮರಳು ದಂಧೆಕೋರರ ಜೊತೆ ಶಾಮಿಲಾಗಿದ್ದು ಈ ಪೊಲೀಸಪ್ಪ ಸಮರ್ಪಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ ಎಂದು ಸಭೆಯಲ್ಲಿ ಅನೇಕ ಜನ ಎಸ್‌ಸಿ ಎಸ್‌ಟಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಭೋವಿ ಸಂಘದ ಅಧ್ಯಕ್ಷರಾದ ಬಂಗಾರಪ್ಪ ಸಹ ಪಟ್ಟಣದಲ್ಲಿ ಪುಂಡ ಪೋಕರಿಗಳಿಂದ ಶಾಂತಿಗೆ ಭಂಗ ಉಂಟಾಗುತ್ತಿದ್ದು ಸಮಸ್ಯೆ ನೀಗಿಸುವಂತೆ ಮನವಿ ಮಾಡಿದರು.

ಬಳಿಕ ಸಭೆಯಲ್ಲಿ ಡಿವೈಎಸ್ಪಿ ಮಂಜುನಾಥ್ ಮಾತನಾಡಿ, ಇತ್ತೀಚಿಗೆ ನಡೆಯುತ್ತಿರುವ ಕಳ್ಳತನಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪಟ್ಟಣಕ್ಕೆ ಬಂದು ಹೋಗುವಂತಹ ಗಾಡಿಗಳನ್ನು ಪರಿಶೀಲಿಸಲು ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದೇವೆ. ಮುಂದಿನ ತಿಂಗಳು ತಾಲೂಕಿನ ಅರಸೀಕೆರೆಯಲ್ಲಿ ಎಸ್ಸಿ ಎಸ್ಟಿ ಕೊಂದು ಕೊರತೆ ಸಭೆ ನಡೆಸುವ ವೇಳೆ ನಾನೇ ಸಭೆಗೆ ಹಾಜರಾಗಿ ಸಮಸ್ಯೆಯನ್ನು ಬಗೆಹರಿಸುತ್ತೇನೆ. ಯಾವುದೇ ಸಮಸ್ಯೆಗಳು ಇದ್ದರೆ ಕೂಡಲೇ ಪೊಲೀಸ್‌ರನ್ನು ಭೇಟಿಯಾಗಿ ದೂರು ಸಲ್ಲಿಸಿ ತಮಗೆ ನ್ಯಾಯ ಒದಗಿಸಿಕೊಡುತ್ತಾರೆಂಬ ಭರವಸೆ ವ್ಯಕ್ತಪಡಿಸಿದರು. ಈ ವೇಳೆ ಸಿಪಿಐ ಸುರೇಶ್, ಪಿಎಸ್ಐಗಳಾದ ಗುರುನಾಥ್, ವಿಜಯ್ ಕುಮಾರ್, ದಲಿತ ಮುಖಂಡರು ಹಾಗೂ ಪೊಲೀಸರು ಹಾಜರಿದ್ದರು.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್