ಕಾರವಾರ: ನಗರದ ಮಾಲಾದೇವಿ ಕ್ರೀಡಾಂಗಣದ ಅಭಿವೃದ್ಧಿ ವೇಗವಾಗಿ ನಡೆಯಬೇಕು ಹಾಗೂ ಈ ಕ್ರೀಡಾಂಗಣದ ಅಭಿವೃದ್ಧಿಗೆ ಮೀಸಲಿರಿಸಿದ ಹಣ ಕ್ರೀಡಾಂಗಣಕ್ಕೆ ಬಳಕೆಯಾಗಬೇಕು. ಹಣವನ್ನು ಬೇರೆಡೆ ವರ್ಗಾವಣೆ ಮಾಡಿರುವುದನ್ನು ಸಹಿಸುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಎಚ್ಚರಿಕೆ ನೀಡಿದ್ದಾರೆ.
ಮಾಲಾದೇವಿ ಮೈದಾನದಲ್ಲಿ ಮಾಲಾದೇವಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ರೂಪಾಲಿ ಎಸ್. ನಾಯ್ಕ ಹಾಗೂ ಯುವ ನಾಯಕ ಪರ್ಬತ್ ನಾಯ್ಕ್ ಅವರ ನೇತೃತ್ವದಲ್ಲಿ ಸಂಘಟಿಸಿದ್ದ 8 ದಿನಗಳ ಕಾಲದ ಕಾರವಾರ ನಗರ ವಾರ್ಡ್ ಮತ್ತು ಗ್ರಾಪಂ ವ್ಯಾಪ್ತಿಯ ತಂಡಗಳ ನಡುವಿನ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.ಈ ಕ್ರೀಡಾಂಗಣದ ಅಭಿವೃದ್ಧಿ ಆಗಬೇಕು. ಇದರಲ್ಲಿ ರಾಜಕಾರಣ ಬರಬಾರದು. ಇದರ ಅಭಿವೃದ್ಧಿಗೆ ನಾನು ಶಾಸಕನಾಗಿದ್ದಾಗ ₹8 ಕೋಟಿ ಮಂಜೂರು ಮಾಡಿಸಿದ್ದೆ. ಕಾಮಗಾರಿ ಆರಂಭವಾಗಿದ್ದು, ಈಗ ನಿಧಾನಗತಿಯಲ್ಲಿ ಸಾಗುತ್ತಿದೆ. ಇಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಇಲ್ಲ ಎಂದು ಸುಳ್ಳು ಮಾತುಗಳನ್ನು ಹೇಳುತ್ತಿದ್ದಾರೆ.
₹8 ಕೋಟಿಯಲ್ಲಿ ₹5 ಕೋಟಿ ಕ್ರೀಡಾಂಗಣದ ಅಭಿವೃದ್ಧಿಗಾದರೆ, ಉಳಿದ ₹3 ಕೋಟಿ ಸಭಾಭವನ, ಗ್ಯಾಲರಿ ಮತ್ತಿತರ ಕಾಮಗಾರಿಗೆ ನಿರ್ಮಾಣಕ್ಕೆ ಮೀಸಲಿಡಲಾಗಿತ್ತು. ಈಗ ಆ ಹಣವನ್ನು ಬೇರೆ ಉದ್ದೇಶಕ್ಕೆ ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಯಾವುದೆ ಕಾರಣಕ್ಕೂ ಕ್ರೀಡಾಂಗಣದ ಅಭಿವೃದ್ಧಿಗೆ ಮೀಸಲಿಟ್ಟ ಹಣ ವರ್ಗಾವಣೆ ಮಾಡುವುದು ಸರಿಯಲ್ಲ. ಇದು ನಮ್ಮ ಕ್ರೀಡಾಪಟುಗಳಿಗೆ ಅನ್ಯಾಯ ಮಾಡಿದಂತಾಗಲಿದೆ. ಇದರ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.ಕ್ರೀಡೆಯಿಂದ ಉತ್ತಮ ಆರೋಗ್ಯರ ಜೀವನ ನಡೆಸಲು ಸಾಧ್ಯ. ದೈಹಿಕ, ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಕ್ರೀಡೆ ಮನುಷ್ಯನ ಜೀವನದ ದೈನಂದಿನ ಅವಶ್ಯಕತೆಯಾಗಬೇಕು. ಹೀಗಾಗಿ ಯುವಕರು ಕ್ರೀಡೆಯಲ್ಲಿ ಖುಷಿಯಿಂದ ಪಾಲ್ಗೊಳ್ಳಬೇಕು. ನಾನು ಕೂಡ ಕ್ರೀಡಾಪ್ರೇಮಿಯಾಗಿದ್ದು, ಈ ಟೂರ್ನಿಯನ್ನು ಆಯೋಜಿಸಿದ್ದಕ್ಕೆ ಹೆಮ್ಮೆಪಡುತ್ತೇನೆ. ಕ್ರೀಡೆ ಎಂದರೆ ಎಲ್ಲರನ್ನೂ ಸೌಹಾರ್ದಯುತವಾಗಿ ಬೆಸೆಯುವಂತಹದ್ದು. ಈ ಕ್ರಿಕೆಟ್ ಟೂರ್ನಮೆಂಟ್ ಮೂಲಕ ಸೌಹಾರ್ದತೆಯ ಸಂದೇಶವನ್ನು ಎಲ್ಲೆಡೆ ಸಾರುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ರವಿರಾಜ್ ಅಂಕೋಲೆಕರ್, ಯುವ ನಾಯಕ ಪರ್ಬತ್ ನಾಯ್ಕ, ಪ್ರಮುಖರಾದ ಅಮಿತ್ ಕಾಮತ್, ರತ್ನಾಕರ್ ನಾಯ್ಕ, ಗಿರೀಶ್ ನಾಯ್ಕ, ಡೊಮಿನಿಕ್ ಡಯಾಸ್, ಪ್ರಸನ್ನ ಕಾಮತ್, ಪ್ರಕಾಶ ರೇವಣಕರ, ನಗರಸಭೆ ಸದಸ್ಯ ಪ್ರೇಮಾನಂದ ಗುನಗಾ, ಪ್ರಕಾಶ್ ರೇವಣಕರ್, ನೀಲೇಶ್ ಆರ್ಗೇಕರ್, ದಿನೇಶ್ ನಾಯ್ಕ , ಸೋಮು ನಾಯ್ಕ, ಅರವಿಂದ್ ಗುನಗಿ ಮತ್ತಿತರರು ಪಾಲ್ಗೊಂಡಿದ್ದರು.