ವಿಶ್ವವಿದ್ಯಾನಿಲಯ ಆರ್ಥಿಕ ಸಂಕಷ್ಟ ನೀಗಿಸಲು ಅನಗತ್ಯ ಖರ್ಚಿಗೆ ಕಡಿವಾಣ: ಕುಲಪತಿ

KannadaprabhaNewsNetwork |  
Published : Sep 24, 2024, 01:49 AM IST
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್‌. ಧರ್ಮ | Kannada Prabha

ಸಾರಾಂಶ

ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಎದುರಾಗಿರುವ ತೀವ್ರ ಆರ್ಥಿಕ ಸಂಕಷ್ಟದ ಕುರಿತು ಪ್ರತಿಕ್ರಿಯಿಸಿರುವ ಕುಲಪತಿ ಪ್ರೊ.ಪಿ.ಎಲ್‌. ಧರ್ಮ, ಈ ಹಿಂದೆ ಅನವಶ್ಯಕವಾಗಿ ಖರ್ಚು ಮಾಡುವ ಸಂಪ್ರದಾಯಕ್ಕೆ ಕಡಿವಾಣ ಹಾಕುತ್ತಿದ್ದೇವೆ. ಮುಂದಿನ ಆರು ತಿಂಗಳಲ್ಲಿ ವಿವಿಗೆ 3 ಕೋಟಿ ರು. ಉಳಿತಾಯ ಮಾಡಲು ಸಾಧ್ಯವಾಗಲಿದೆ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಎದುರಾಗಿರುವ ತೀವ್ರ ಆರ್ಥಿಕ ಸಂಕಷ್ಟದ ಕುರಿತು ಪ್ರತಿಕ್ರಿಯಿಸಿರುವ ಕುಲಪತಿ ಪ್ರೊ.ಪಿ.ಎಲ್‌. ಧರ್ಮ, ಈ ಹಿಂದೆ ಅನವಶ್ಯಕವಾಗಿ ಖರ್ಚು ಮಾಡುವ ಸಂಪ್ರದಾಯಕ್ಕೆ ಕಡಿವಾಣ ಹಾಕುತ್ತಿದ್ದೇವೆ. ಮುಂದಿನ ಆರು ತಿಂಗಳಲ್ಲಿ ವಿವಿಗೆ 3 ಕೋಟಿ ರು. ಉಳಿತಾಯ ಮಾಡಲು ಸಾಧ್ಯವಾಗಲಿದೆ ಎಂದಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಯಲ್ಲಿ ಈ ಹಿಂದೆ ಅನವಶ್ಯಕವಾಗಿ ಖರ್ಚು ಮಾಡುವ ಸಂಪ್ರದಾಯವಿತ್ತು. ಈಗ ಯಾರನ್ನೂ ನೋಯಿಸದೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದೇವೆ. ಅನಗತ್ಯ ಖರ್ಚು ಹಾಗೂ ಅನಧಿಕೃತವಾಗಿ ಆಗುತ್ತಿದ್ದ ಖರ್ಚಿಗೆ ಕಡಿವಾಣ ಹಾಕುತ್ತಿದ್ದೇವೆ ಎಂದರು.

ಹಿಂದೆ ವಿಶ್ವವಿದ್ಯಾನಿಲಯದ ಹಣಕಾಸು ಪರಿಸ್ಥಿತಿ ಚೆನ್ನಾಗಿದ್ದಾಗ ಎಲ್ಲವನ್ನೂ ಧಾರಳವಾಗಿ ಖರ್ಚು ಮಾಡಲಾಗಿತ್ತು. ಇಂಟರ್‌ ನ್ಯಾಶನಲ್‌ ಹಾಸ್ಟೆಲ್‌, ಸಂಶೋಧನಾ ಕೇಂದ್ರ ಮಾಡುವ ಆಸೆ ಇತ್ತು. ಅವೆಲ್ಲವನ್ನು ಯೋಜಿತ ರೀತಿಯಲ್ಲಿ ಮಾಡಿದ್ದರೆ ಈ ರೀತಿಯ ಸಮಸ್ಯೆ ಬರುತ್ತಿರಲಿಲ್ಲ. ಏನು ಸಮಸ್ಯೆ ಆಗಿದೆಯೋ ಅದನ್ನು ನಿವೃತ್ತ ನ್ಯಾಯಾಧೀಶರು ತನಿಖೆ ಮಾಡುತ್ತಿದ್ದಾರೆ ಎಂದು ಪ್ರೊ.ಧರ್ಮ ಹೇಳಿದರು.ಆಂತರಿಕ ಮೂಲ ಇಳಿಕೆ:

ಕೋವಿಡ್‌ ಬಳಿಕ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ. ಅಂತರಿಕ ಮೂಲಗಳಿಂದ ಅದಾಯ ತಂದುಕೊಳ್ಳಿ ಎಂದು ಸೂಚನೆ ಬಂದಿದೆ. ಆದರೆ ವಿವಿಗೆ ಆಂತರಿಕ ಮೂಲಗಳು ಕಡಿಮೆಯಾಗುತ್ತಾ ಬಂದಿವೆ. ವಿವಿ ಅಧೀನದ ಕಾಲೇಜುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಎಫಿಲಿಯೇಷನ್‌ ಕಡಿಮೆಯಾಗುತ್ತಿದೆ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.

ಕೇವಲ ಪರೀಕ್ಷಾ ಶುಲ್ಕಗಳಿಂದಲೇ ನಿಭಾಯಿಸುವ ಸ್ಥಿತಿಯಿದೆ. ಆದರೆ ನಾವು ಮತ್ತೆ ವಾಪಸ್‌ ಬರುತ್ತೇವೆ, ವಿವಿಯ ಗತವೈಭವ ಮರುಕಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕರಿಗೆ ಪಿಂಚಣಿ ಬಾಕಿ: ಮಂಗಳೂರು ವಿವಿಯ 45 ನಿವೃತ್ತ ಪ್ರಾಧ್ಯಾಪಕರಿಗೆ 21- 22 ಕೋಟಿ ರು.ವರೆಗೆ ಪಿಂಚಣಿ ಪಾವತಿ ಬಾಕಿಯಿದೆ. ಸರ್ಕಾರ ಅದನ್ನು ನೀಡಿದರೆ ವಿವಿಗೆ ಬಹಳಷ್ಟು ಉಪಯೋಗವಾಗಲಿದೆ. ಮಂಗಳೂರು ವಿವಿಗೆ ದೊಡ್ಡ ಹೆಸರು ಬಂದದ್ದೇ ಆ ಪ್ರಾಧ್ಯಾಪಕರಿಂದ, ಅವರನ್ನೇ ನಡುಬೀದಿಯಲ್ಲಿ ನಿಲ್ಲಿಸಿದಂತಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆ ಪರಿಹಾರವಾಗುವ ನಿರೀಕ್ಷೆಯಿದೆ ಎಂದು ಕುಲಪತಿ ಹೇಳಿದರು.

..................

ವಿವಿ ಬೊಕ್ಕಸ ಖಾಲಿ

ವಿವಿಯಲ್ಲಿ ಇಂಟರ್‌ ನ್ಯಾಶನಲ್‌ ಹಾಸ್ಟೆಲ್‌ ನಿರ್ಮಾಣದ ಗುತ್ತಿಗೆದಾರರು ನ್ಯಾಯಾಲಯದಲ್ಲಿ ಆರ್ಬಿಟೇಶನ್‌ಗೆ ಹೋಗಿದ್ದಾರೆ. ಈ ಹಾಸ್ಟೆಲ್‌ ನಿರ್ಮಾಣಕ್ಕೆ ವಿವಿಯಿಂದ ದೊಡ್ಡ ಮೊತ್ತ ಹೂಡಲಾಗಿತ್ತು. 39 ಕೋಟಿ ರು. ಪೇಮೆಂಟ್‌ ಮಾಡಿದ್ದೇವೆ. ಆರ್ಬಿಟೇಷನ್‌ ಮೂಲಕ ಗುತ್ತಿಗೆದಾರರು ಬಡ್ಡಿ ಸಮೇತ 89 ಕೋಟಿ ರು. ಕ್ಲೇಮು ಮಾಡಿದ್ದಾರೆ. ಅದನ್ನು ನಾವು ಕೋರ್ಟ್‌ನಲ್ಲಿ ಹೋರಾಡುತ್ತೇವೆ. ಅಷ್ಟು ಹಣ ಕೊಡಲು ನಮ್ಮಿಂದಲೂ ಸಾಧ್ಯವಿಲ್ಲ. ಈಗ ನಮ್ಮ ಬೊಕ್ಕಸ ಖಾಲಿಯಾಗಿದೆ ಎಂದ ಕುಲಪತಿ ಪ್ರೊ.ಧರ್ಮ, ಪ್ರಸ್ತುತ ಇರುವ 150 ವಿದೇಶಿ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಕಡೆ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಪ್ರಿಮ್‌ ಶಾಲೆಯಲ್ಲಿ ಮಕ್ಕಳು ವಿವಿಧ ಸಾಂಸ್ಕೃತಿಕ ಸಂಭ್ರಮೋತ್ಸವ
ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಸಂತಾಪ