ಗರ್ಭಿಣಿ ಮತ್ತು ಬಾಣಂತಿಯರು ಸ್ಥಳೀಯವಾಗಿ ದೊರೆಯುವ ಹಾಲು, ಮೊಟ್ಟೆ, ನುಗ್ಗೆಸೊಪ್ಪು, ಸೀಬೆ, ಪರಂಗಿ ಹಣ್ಣು ಸೇರಿದಂತೆ ಇತರೆ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಿ ಆರೋಗ್ಯವನ್ನು ಸದೃಢವಾಗಿಸಿಕೊಳ್ಳಬೇಕು. ಆ ಮೂಲಕ ಸಹಜ ಹೆರಿಗೆಗೆ ಪ್ರಯತ್ನಿಸಬೇಕು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸದೃಢ ಆರೋಗ್ಯದ ಕೊರತೆಯಿಂದಾಗಿ ಪ್ರಸ್ತುತ ದಿನಗಳಲ್ಲಿ ಶೇ.80ರಷ್ಟು ಗರ್ಭಿಣಿಯರು ಸಿಜೇರಿಯನ್ (ಶಸ್ತ್ರಚಿಕಿತ್ಸೆ) ಮೂಲಕವೇ ಮಕ್ಕಳನ್ನು ಪಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಫೂರ್ತಿ ಲಯನ್ಸ್ ಸಂಸ್ಥೆಯಿಂದ ಹಸಿವು-ಆರೈಕೆ ಮತ್ತು ಆರೋಗ್ಯ ಕಿಟ್ ವಿತರಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದು ಸಾಮಾನ್ಯ ಹೆರಿಗೆಗಳು ಕಡಿಮೆಯಾಗುತ್ತಿವೆ. ಸಿಜೇರಿಯನ್ (ಶಸ್ತ್ರಚಿಕಿತ್ಸೆ) ಹೆರಿಗೆಗಳು ಹೆಚ್ಚಾಗುತ್ತಿರುವ ಬಗ್ಗೆ ಎಚ್ಚರ ವಹಿಸುವುದು ಅಗತ್ಯ ಎಂದರು.
ಗರ್ಭಿಣಿ ಮತ್ತು ಬಾಣಂತಿಯರು ಸ್ಥಳೀಯವಾಗಿ ದೊರೆಯುವ ಹಾಲು, ಮೊಟ್ಟೆ, ನುಗ್ಗೆಸೊಪ್ಪು, ಸೀಬೆ, ಪರಂಗಿ ಹಣ್ಣು ಸೇರಿದಂತೆ ಇತರೆ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಿ ಆರೋಗ್ಯವನ್ನು ಸದೃಢವಾಗಿಸಿಕೊಳ್ಳಬೇಕು. ಆ ಮೂಲಕ ಸಹಜ ಹೆರಿಗೆಗೆ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ನಮ್ಮ ಪೂರ್ವಾಶ್ರಮದ ಹೆತ್ತಮ್ಮನಿಗೆ ಹದಿನಾಲ್ಕು ಮಕ್ಕಳು. ಅವರು 89 ವರ್ಷದವರೆಗೂ ಸದೃಢ ಆರೋಗ್ಯವಂತರಾಗಿ ಬಾಳ್ವೆ ನಡೆಸಿದ್ದರು. ಆದರೆ, ಈ ತಲೆಮಾರಿನ ಹೆಣ್ಣು ಮಕ್ಕಳು ಹೆಚ್ಚು ಅನಾರೋಗ್ಯಕ್ಕೀಡಾಗುತ್ತಿರುವುದು ವಿಷಾದನೀಯ ಎಂದರು.
ಈ ಹಿಂದೆ ಹಿರಿಯರಿಗೆ ಏಳೆಂಟು ಮಕ್ಕಳಾದರೂ ಸಹಜ ಹೆರಿಗೆಗಳಾಗುತ್ತಿದ್ದವು. ಆದರೆ, ಇಂದು ಸಾಮಾನ್ಯ ಹೆರಿಗೆಗಳು ಅಪರೂಪವಾಗುತ್ತಿವೆ. ಹೆರಿಗೆ ಸಮಯದಲ್ಲಿ ಉಂಟಾಗುವ ನೋವು ಸಹಜ. ಗರ್ಭಿಣಿಯರು ತಾಳ್ಮೆ ವಹಿಸಬೇಕು. ಮಗುವಿನ ಜನನದ ನಂತರ ತಮ್ಮ ನೋವು ಮರೆಯಾಗಿ ಮೂಡುವ ಸಂತಸ ಶಾಶ್ವತವಾಗಿರುತ್ತದೆ ಎಂಬುದನ್ನು ಹಿರಿಯ ವೈದ್ಯ ಡಾ.ಟಿ.ಎಚ್.ಆಂಜನಪ್ಪ ಅವರ ಕಿವಿ ಮಾತನ್ನು ಪೋಷಕರು ಮತ್ತು ಗರ್ಭಿಣಿಯರು ಪಾಲಿಸಬೇಕು ಎಂದರು.
ಹುಟ್ಟುಹಬ್ಬದ ಹೆಸರಿನಲ್ಲಿ ಇಂತಹ ಮೌಲ್ಯಯುತ ಕಾರ್ಯಕ್ರಮ ಆಯೋಜನೆ ಮಾಡುವುದು ಹಾಗೂ ಆಚರಿಸುವುದು ಅತ್ಯುತ್ತಮ ಕೆಲಸ. ಸ್ಫೂರ್ತಿ ಲಯನ್ಸ್ ಸಂಸ್ಥೆಯ ದಾಸೋಹ ಕಾರ್ಯಕ್ರಮ ನಿರಂತರವಾಗಿರಲಿ ಎಂದು ಹಾರೈಸಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಟಿ.ಎಚ್.ಆಂಜನಪ್ಪ ಮಾತನಾಡಿ, ಮನುಷ್ಯ ಇಂದಿನ ಆಹಾರ ಪದ್ಧತಿಯಿಂದ ಆಯಸ್ಸು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಮನುಷ್ಯನಿಗೆ 120 ವರ್ಷ ಆಯಸ್ಸಿದೆ. ಉತ್ತಮ ಆರೋಗ್ಯಕ್ಕಾಗಿ ಹಣ್ಣು ತರಕಾರಿ ಹೆಚ್ಚು ಉಪಯೋಗಿಸಿ ಎಂದರು.
ಕಾರ್ಯಕ್ರಮಕ್ಕೂ ಮೊದಲು ಯಲಾದಹಳ್ಳಿಯ ಮಳವಳ್ಳಿ ದೇವೇಗೌಡರ ಎತ್ತಿನ ಬಂಡಿ ಗಾಡಿಯಲ್ಲಿ ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಮತ್ತು ಗಣ್ಯರನ್ನು ಜನಪದ ಕಲಾತಂಡದ ಪೂಜಾ ಕುಣಿತದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.
ಕಾರ್ಯಕ್ರಮದಲ್ಲಿ ಜನರಕ್ಷಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಕೃಷ್ಣೇಗೌಡ, ಜಿಲ್ಲಾ ರಾಜ್ಯಪಾಲ ಕೆ.ಎಲ್.ರಾಜಶೇರ್, ಕೆಂಗಲ್‌ಗೌಡ, ಸೋಮೇಗೌಡ, ಸಿದ್ದೇಗೌಡ, ಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಎಲ್.ರಾಜಶೇಖರ್, ಜಿಲ್ಲಾ 2ನೇ ಉಪರಾಜ್ಯಪಾಲ ಸಿದ್ದೇಗೌಡ, ಪ್ರಾಂತೀಯ ಅಧ್ಯಕ್ಷ ಟಿ.ಆರ್.ಸೋಮೇಗೌಡ, ಸ್ಫೂರ್ತಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ.ಎಲ್. ಶಿವರಾಮು ಸಂಸ್ಥೆ ಕಾರ್ಯದರ್ಶಿ ಬಿ.ಎಸ್.ಬೋರೇಗೌಡ, ಪಟ್ಟರಾಮರಾಜೇ ಅರಸು, ಡಿ.ಎ.ಕೆರೆ ಚಂದ್ರಶೇಖರ್, ಸದಸ್ಯರಾದ ಅಣ್ಣೂರು ಸಂದೀಪ್, ವಕ್ರತುಂಡ ವೆಂಕಟೇಶ್, ಚೆನ್ನಶೆಟ್ಟಿ, ಬೋರೇಗೌಡ, ದೇವರಾಜು, ರಘುವೆಂಕಟೇಗೌಡ, ಬಿದರಹಳ್ಳಿ ಹನುಮಯ್ಯ, ಪಿಡಿಒ ಸುಧಾ, ಲೀಲಾರಾಮೇಗೌಡ ಸೇರಿದಂತೆ ಮತ್ತಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.