ಸುಳ್ಳು ಜಾಹೀರಾತು ನೀಡಿದ ಕರ್ಸ್‌ ಹೆಲ್ತ್‌ಕೇರ್‌ಗೆ ದಂಡ

KannadaprabhaNewsNetwork |  
Published : Feb 26, 2026, 02:15 AM IST
ನ್ಯಾಯ.. | Kannada Prabha

ಸಾರಾಂಶ

ಹುಬ್ಬಳ್ಳಿಯ ಗಝಲಖಾನ ದೇಸಾಯಿ ಹಾಗೂ ಬಸವರಾಜ ಅಂಕಲಿ ಎಂಬುವರು ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಶಾಖೆ ಹೊಂದಿರುವ ಕರ್ಸ್‌ ಹೆಲ್ತ್‌ಕೇರ್‌ ಇಂಡಿಯಾ ಕಂಪನಿ‌ ಜಾಹೀರಾತು ನೋಡಿ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಹೋಗಿ ಮೋಸಕ್ಕೆ ಒಳಗಾಗಿದ್ದಾರೆ.

ಧಾರವಾಡ:

ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆ ಸಂಬಂಧಿಸಿದ ಉತ್ಪನ್ನ ಮತ್ತು ಸೇವೆಗಳ ಕುರಿತು ತಪ್ಪು ಹಾಗೂ ಭ್ರಮೆ ಉಂಟು ಮಾಡುವ ಜಾಹೀರಾತುಗಳು ವ್ಯಾಪಕವಾಗಿ ಹರಡುತ್ತಿವೆ. ಇವು ತ್ವರಿತ ತೂಕ ಇಳಿಕೆ, ಯಾವುದೇ ವ್ಯಾಯಾಮ, ಆಹಾರ ನಿಯಂತ್ರಣವಿಲ್ಲ ಎಂಬಂತೆ ವೈಜ್ಞಾನಿಕ ಆಧಾರವಿಲ್ಲದ ಭರವಸೆ ನೀಡುತ್ತವೆ.

ಇಂತಹ ಜಾಹೀರಾತು ಗ್ರಾಹಕರನ್ನು ತಪ್ಪು ದಾರಿಗೆ ಎಳೆದು ಆರೋಗ್ಯ, ಆರ್ಥಿಕ ಮತ್ತು ಮಾನಸಿಕ ಹಾನಿಗೆ ಕಾರಣವಾಗುತ್ತವೆ ಎನ್ನುವುದಕ್ಕೆ ಈ ಪ್ರಕರಣ ಅತ್ಯುತ್ತಮ ಸಾಕ್ಷಿ.

ಹುಬ್ಬಳ್ಳಿಯ ಗಝಲಖಾನ ದೇಸಾಯಿ ಹಾಗೂ ಬಸವರಾಜ ಅಂಕಲಿ ಎಂಬುವರು ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಶಾಖೆ ಹೊಂದಿರುವ ಕರ್ಸ್‌ ಹೆಲ್ತ್‌ಕೇರ್‌ ಇಂಡಿಯಾ ಕಂಪನಿ‌ ಜಾಹೀರಾತು ನೋಡಿ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಹೋಗಿ ಮೋಸಕ್ಕೆ ಒಳಗಾಗಿದ್ದಾರೆ.

ಈ ಪ್ರಕ್ರಿಯೆಗೆ ಇಬ್ಬರು ತಲಾ ₹ 1.55 ಲಕ್ಷ ಪಾವತಿಸಿದ್ದಾರೆ. ಜಾಹೀರಾತು ಮತ್ತು ಮೌಖಿಕವಾಗಿ ಹೇಳಿದಂತೆ, ದೇಹದ ತೂಕವನ್ನು 60 ನಿಮಿಷಗಳಲ್ಲಿ ಆರು ಇಂಚು ಕಡಿಮೆ ಮಾಡುವುದಾಗಿ ಕಂಪನಿ ಭರವಸೆ ನೀಡಿತ್ತು. ಸುಮಾರು ಎರಡೂವರೆ ತಿಂಗಳು ಇಬ್ಬರಿಗೂ 21 ಬಾರಿ ಹಾಜರಾಗಿ ಹೇಳುವ ಎಲ್ಲ ನಿಯಮಗಳನ್ನು ಪಾಲಿಸಿದರೂ ಅವರ ತೂಕ ಮತ್ತು ಗಾತ್ರ ಎಳ್ಳಷ್ಟೂ ಕಡಿಮೆಯಾಗಲಿಲ್ಲ. ಕೊನೆಗೆ ಕಂಪನಿಯು ಸುಳ್ಳು ಜಾಹೀರಾತು ನೀಡಿ ತಮ್ಮಿಂದ ಹಣ ಪಡೆದು ಮೋಸ ಮಾಡಿದೆ ಎಂದು ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದಾರೆ.

ಈ ದೂರು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಸುಳ್ಳು ಮಾಹಿತಿಯೊಂದಿಗೆ ದಾರಿ ತಪ್ಪಿಸುವ ಜಾಹೀರಾತು ನೀಡಿ ಮೋಸ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದು ನಿಶ್ಚಿತವಾಗಿ ಸೇವಾ ನ್ಯೂನತೆ ಎಂದು ತೀರ್ಪು ನೀಡಿದ್ದಾರೆ.

ದೂರುದಾರರು ಸಂದಾಯ ಮಾಡಿದ ₹ 1.55 ಲಕ್ಷ ಮತ್ತು ಸಂದಾಯ ಮಾಡಿದ ದಿನಾಂಕದಿಂದ ಶೇ. 8ರಷ್ಟು ಬಡ್ಡಿ ಲೆಕ್ಕ ಹಾಕಿ ಕೊಡಬೇಕು. ಅನಾನುಕೂಲ ಹಾಗೂ ಮಾನಸಿಕ ಹಿಂಸೆಗಾಗಿ ತಲಾ ₹ 50 ಸಾವಿರ ಪರಿಹಾರ ಹಾಗೂ ತಲಾ ₹ 10 ಸಾವಿರ ಪ್ರಕರಣ ವೆಚ್ಚವಾಗಿ ನೀಡಬೇಕೆಂದು ಹುಬ್ಬಳ್ಳಿಯ ಕೇಶ್ವಾಪೂರದ ಕರ್ಸ್‌ ಹೆಲ್ತ್‌ಕೇರ್‌ ಇಂಡಿಯಾ ಕಂಪನಿಗೆ ಆಯೋಗ ನಿರ್ದೇಶಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಂಪ್ಲಿ ಸಮಗ್ರ ಅಭಿವೃದ್ಧಿಗೆ ಸಿದ್ದು ಬಜೆಟ್‌ನಲ್ಲಿ ಹಣ ಕೊಡೋದು ಎಷ್ಟು?
ನುಗ್ಗೆ ಕೃಷಿಗೆ ಪ್ರತಿ ಹಂತದಲ್ಲೂ ಶುದ್ಧತೆ, ಗುಣಮಟ್ಟಕ್ಕೆ ಆದ್ಯತೆ ನೀಡಿ: ನುಗ್ಗೆ ಕೃಷಿಕ ಬ್ಯಾಲಿಹಾಳ ಬಸಯ್ಯ ಹಿರೇಮಠ