ಎಸ್‌ಬಿಐ ನಿರ್ಲಕ್ಷ್ಯ: ಹಣ, ಬಡ್ಡಿ ಹಿಂದಿರುಗಿಸಲು ಗ್ರಾಹಕರ ನ್ಯಾಯಾಲಯ ಆದೇಶ

KannadaprabhaNewsNetwork | Published : Oct 19, 2024 12:20 AM

ಸಾರಾಂಶ

ಗ್ರಾಹಕರ ಗಮನಕ್ಕೆ ಬಾರದೇ ಖಾತೆಯಿಂದ ಹಣ ಕಡಿತಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆಯಿಂದ ಕಡಿತಗೊಂಡಿದ್ದ ₹99,000 ವನ್ನು ವಾರ್ಷಿಕ ಶೇ.12 ಬಡ್ಡಿಯೊಂದಿಗೆ ಹಿಂತಿರುಗಿಸುವಂತೆ ಜಿಲ್ಲಾ ಗ್ರಾಹಕರ ನ್ಯಾಯಾಲಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಆದೇಶಿಸಿದೆ.

- ಬ್ಯಾಂಕ್‌ ಖಾತೆ ಯುಪಿಐ ಮೂಲಕ ₹99,000 ಮೊತ್ತ ವರ್ಗಾವಣೆಯಾಗಿತ್ತು

- ಕೋರ್ಟಿನಲ್ಲಿ ದೂರು ದಾಖಲಿಸಿದ್ದ ನಿವೃತ್ತ ಸರ್ಕಾರಿ ಅಭಿಯೋಜಕ ನಾಗರಾಜ ಆಚಾರ್- - - ಕನ್ನಡಪ್ರಭ ವಾರ್ತೆ ದಾವಣಗೆರೆ ಗ್ರಾಹಕರ ಗಮನಕ್ಕೆ ಬಾರದೇ ಖಾತೆಯಿಂದ ಹಣ ಕಡಿತಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆಯಿಂದ ಕಡಿತಗೊಂಡಿದ್ದ ₹99,000 ವನ್ನು ವಾರ್ಷಿಕ ಶೇ.12 ಬಡ್ಡಿಯೊಂದಿಗೆ ಹಿಂತಿರುಗಿಸುವಂತೆ ಜಿಲ್ಲಾ ಗ್ರಾಹಕರ ನ್ಯಾಯಾಲಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಆದೇಶಿಸಿದೆ.

ನಗರದ ನಿವೃತ್ತ ಸರ್ಕಾರಿ ಅಭಿಯೋಜಕ ನಾಗರಾಜ ಆಚಾರ್ ನಗರದ ಅಕ್ಕಮಹಾದೇವಿ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದಾರೆ. 2023 ಸೆಪ್ಟೆಂಬರ್ 26ರಂದು ಖಾತೆಯ ಯುಪಿಐ ಮೂಲಕ ₹99,000 ಮೊತ್ತ ವರ್ಗಾವಣೆಯಾಗಿತ್ತು. ಸೆಪ್ಟೆಂಬರ್ 28ರಂದು ಖಾತೆಯ ವಿವರ ಪರಿಶೀಲಿಸಿದಾಗ ತಮ್ಮ ಖಾತೆಯಿಂದ ಗಮನಕ್ಕೆ ಬಾರದಂತೆ ಹಣ ವರ್ಗಾವಣೆ ಆಗಿರುವ ಬಗ್ಗೆ ಬ್ಯಾಂಕಿಂಗ್ ಓಂಬಡ್ಸ್ಮನ್ ಮತ್ತು ಸಕ್ಷಮ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು. ಆದರೂ ಯಾವುದೇ ಪರಿಹಾರ, ನ್ಯಾಯ ಸಿಕ್ಕಿರಲಿಲ್ಲ.

ಹಣ ಕಳೆದುಕೊಂಡ ನಾಗರಾಜ ಆಚಾರ್ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು ಬ್ಯಾಂಕಿನ ನಿರ್ಲಕ್ಷ್ಯದಿಂದ ಗ್ರಾಹಕರೊಬ್ಬರಿಗೆ ತೊಂದರೆ ಆಗಿದ್ದನ್ನು ಮನಗಂಡು, ಕಡಿತವಾಗಿರುವ ಹಣವನ್ನು ಬಡ್ಡಿ ಸಮೇತ ಹಿಂತಿರುಗಿಸಲು ಆದೇಶ ನೀಡಿದೆ. ಅಲ್ಲದೇ, ದೂರುದಾರರಿಗೆ ಉಂಟಾದ ಮಾನಸಿಕ ಹಿಂಸೆಗೆ ಪರಿಹಾರವಾಗಿ ₹10,000 ಹಾಗೂ ದೂರು ದಾಖಲಿಸಲು ಆಗಿರುವ ವೆಚ್ಚ ₹5000 ಸಹ ಕೊಡುವಂತೆ ಬ್ಯಾಂಕಿಗೆ ಜಿಲ್ಲಾ ಗ್ರಾಹಕರ ಆಯೋಗ ಅಧ್ಯಕ್ಷ ಮಹಂತೇಶ ಈರಪ್ಪ ಶಿಗ್ಗಿ, ಸದಸ್ಯ ತ್ಯಾಗರಾಜನ್ ಆದೇಶಿಸಿದ್ದಾರೆ.

- - - (ಸಾಂದರ್ಭಿಕ ಚಿತ್ರ)

Share this article