ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ವಾರದಲ್ಲಿ 3-4 ದಿನ ಹಣದ ಕೊರತೆ ಉಂಟಾಗುತ್ತಿದ್ದು, ಹಣ ಬಿಡಿಸಿಕೊಳ್ಳಲು ಆಗಮಿಸುವ ಗ್ರಾಹಕರು ಪರದಾಡುತ್ತಿದ್ದಾರೆ.
ಉದ್ಯೋಗ ಖಾತ್ರಿ ಫಲಾನುಭವಿಗಳ ಖಾತೆದಾರರು, ರೈತರು ಸಾಲ ಪಡೆಯುವರು, ಬಂಗಾರ ಮತ್ತು ವ್ಯವಹಾರದ ಸಾಲ ಪಡೆಯುವುದು ಸೇರಿ ಪ್ರತಿದಿನ 50 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಯುತ್ತಿದೆ. ಸುಮಾರು 40ಕ್ಕೂ ಹೆಚ್ಚು ಹಳ್ಳಿಗಳು ಈ ಬ್ಯಾಂಕಿಗೆ ಒಳಪಡುತ್ತವೆ. ಸಿಬ್ಬಂದಿ ಕೊರತೆ ಇದ್ದು, ಎಟಿಎಂ ಕೂಡ ಇಲ್ಲ. ಗ್ರಾಹಕರು ಉಳಿತಾಯ ಮಾಡಿದ ಹಣವನ್ನು ಬಿಡಿಸಲಿಕ್ಕೆ ಬಂದಂತಹ ಸಂದರ್ಭದಲ್ಲಿ ಹಣ ಸಿಗದೆ ಪರದಾಡುವಂತಾಗಿದೆ.ಜನರಿಗೆ ತುರ್ತು ಹಣ ಬೇಕಿದ್ದರೆ ದಾವಣಗೆರೆ ಅಥವಾ ಹೊಸಪೇಟೆ ಮುಖ್ಯ ಕಚೇರಿಗೆ ಹೋಗಬೇಕಾಗಿದೆ.
ಸಿಬ್ಬಂದಿಯನ್ನು ಕೇಳಿದರೆ ಹಣವಿಲ್ಲ, ನಮ್ಮ ಮ್ಯಾನೇಜರ್ ಮುಖ್ಯ ಕಚೇರಿಗೆ ಹೋಗಿದ್ದಾರೆ. ಶೀಘ್ರದಲ್ಲಿ ಹಣ ಬರುತ್ತದೆ ಎಂದು ಹೇಳುತ್ತಿದ್ದಾರೆ. ಸಂಬಂಧಿಸಿದ ಮುಖ್ಯ ಕಚೇರಿಯ ಅಧಿಕಾರಿಗಳು ಪ್ರತಿದಿನ ಮುಖ್ಯ ಕಚೇರಿಯಿಂದ ಅರಸೀಕೆರೆ ಕರ್ನಾಟಕ ಗ್ರಾಮೀಣ ಶಾಖೆಗೆ ಹಣ ವ್ಯವಸ್ಥೆ ಮಾಡಿ ರೈತರಿಗೆ, ಗ್ರಾಹಕರಿಗೆ ಅನುಕೂಲ ಮಾಡಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಕೆರೆಗುಡಿಹಳ್ಳಿ ಹಾಲೇಶ್ ಹಾಗೂ ಬ್ಯಾಂಕಿನ ಗ್ರಾಹಕರಾದ ಹನುಮಂತಪ್ಪ, ರತ್ನಮ್ಮ, ಮಲ್ಲಪ್ಪ, ರೈತರು ಒತ್ತಾಯಿಸಿದ್ದಾರೆ