ಕೊಪ್ಪಳ:
ತಾಲೂಕಿನ ಅಳವಂಡಿ ಹೋಬಳಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಿತಿ ಮೀರಿದೆ. 5 ದಿನಗಳ ಹಿಂದೆ ಅಧಿಕಾರಿಗಳು ದಾಳಿ ನಡೆಸಿ ಕಡಿವಾಣ ಹಾಕಿದ್ದರೂ ಶಾಶ್ವತ ಅಂಕುಶ ಬಿಳಬೇಕಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಆಗ್ರಹಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಹಿರೇಸಿಂದೋಗಿ ಹಳ್ಳದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆಗೆ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬೋಟ್ ಧ್ವಂಸಗೊಳಿಸಿ ಅಪಾರ ಪ್ರಮಾಣದ ಮರಳು ವಶಪಡಿಸಿಕೊಂಡಿದ್ದಾರೆ. ಆದರೆ, ಈ ವರೆಗೂ ಯಾರ ಮೇಲೆಯೂ ಎಫ್‌ಐಆರ್ ದಾಖಲಿಸದೆ ಇರುವುದು ಅಚ್ಚರಿ ತಂದಿದೆ. ಈ ಭಾಗದಲ್ಲಿ ಮರಳು ದಂಧೆ ಬಹಿರಂಗವಾಗಿ ನಡೆಸುತ್ತಿರುವವರು ಯಾರೆಂದು ಜಗಜ್ಜಾಹೀರಾತು ಆಗಿದ್ದರೂ ಪೊಲೀಸರು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹಿರೇಹಳ್ಳ ವ್ಯಾಪ್ತಿಯಲ್ಲಿನ ಹೂಳು ತೆಗೆದು ರೈತರಿಗೆ ಅನುಕೂಲವಾಗಲೆಂದು ಅನುಕೂಲ ಕಲ್ಪಿಸಲಾಗಿದೆ. ಆದರೆ, ರಾಜಕೀಯ ಪ್ರೇರಿತ ಶಕ್ತಿಗಳು, ನಿಸರ್ಗದ ಸಂಪತ್ತನ್ನು ಹಾಡುಹಗಲೇ ಕೊಳ್ಳೆ ಹೊಡೆಯುತ್ತಿವೆ. ಇದಕ್ಕೆ ಆಡಳಿತದಲ್ಲಿರುವ ಜನಪ್ರತಿನಿಧಿಗಳು ಬೆಂಗಾವಲಾಗಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಕುಣಿಕೇರಿ ಗ್ರಾಮದ ಕೆರೆಯಲ್ಲಿನ ಅಪಾರ ಪ್ರಮಾಣದ ಮಣ್ಣನ್ನು ಅನಧಿಕೃತವಾಗಿ ಸಾಗಾಟ ಮಾಡುತ್ತಿರುವ ಪ್ರಕರಣ ಈಚೆಗೆ ಬೆಳಕಿಗೆ ಬಂದಿತ್ತು. ಇಂತಹ ಹಲವು ಘಟನೆಗಳು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ. ಇದರಿಂದ ನಿಸರ್ಗದ ಮೇಲೆ ಗಂಭೀರ ಪರಿಣಾಮ ಬಿರುತ್ತಿದೆ. ಆಡಳಿತ ಪಕ್ಷದ ಜನಪ್ರತಿನಿಧಿಗಳು ಇಂತಹ ಅಕ್ರಮಗಳಿಗೆ ಕಡಿವಾಣ ಹಾಕುವುದು ಬಿಟ್ಟು ದಂಧೆಕೋರರ ಪರವಾಗಿ ಕೆಲಸ ಮಾಡುತ್ತಿರುವುದು ನಿಜಕ್ಕೂ ದುರಂತದ ಸಂಗತಿಯಾಗಿದೆ. ಇನ್ನಾದರೂ ಇಂತಹ ಪ್ರಕರಣಗಳಿಗೆ ಕಡಿವಾಣ ಬೀಳಬೇಕಿದೆ. ನಿಸರ್ಗದ ಸಂಪತ್ತು ಉಳಿಯಬೇಕಿದೆ ಎಂದು ಒತ್ತಾಯಿಸಿದ್ದಾರೆ.