ಭದ್ರಾವತಿಯಲ್ಲಿ ಇಸ್ಪೀಟ್, ಗಾಂಜಾ,ಕ್ಕೆ ಕಡಿವಾಣ ಹಾಕಿ

KannadaprabhaNewsNetwork | Published : Jan 11, 2024 1:30 AM

ಸಾರಾಂಶ

ಭದ್ರಾವತಿ ತಾಲೂಕಿನಲ್ಲಿ ಓ.ಸಿ., ಇಸ್ಪೀಟ್ ಮತ್ತು ಗಾಂಜಾ ಪ್ರಕರಣಗಳಿಗೆ ಕಡಿವಾಣವೇ ಬಿದ್ದಿಲ್ಲ. ಪೊಲೀಸ್‌ ಇಲಾಖೆ ಶೀಘ್ರ ಕ್ರಮ ಕೈಗೊಂಡು ಯುವಜನರನ್ನು ಅಪಾಯದಿಂದ ರಕ್ಷಿಸಬೆಕು ಎಂದು ಭದ್ರಾವತಿ ಜೆಡಿಎಸ್ ಮುಖಂಡರಾದ ಶಾರದಾ ಅಪ್ಪಾಜಿಗೌಡ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಬುಧವಾರ ಜಿಲ್ಲಾ ಎಸ್‌ಪಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭದ್ರಾವತಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಓ.ಸಿ., ಇಸ್ಪೀಟ್ ಮತ್ತು ಗಾಂಜಾ ಪ್ರಕರಣಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಭದ್ರಾವತಿ ಜೆಡಿಎಸ್ ಮುಖಂಡರಾದ ಶಾರದಾ ಅಪ್ಪಾಜಿಗೌಡ ನೇತೃತ್ವದಲ್ಲಿ ಬುಧವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ತಾಲೂಕಿನಾದ್ಯಂತ ಓ.ಸಿ., ಇಸ್ಪೀಟ್ ಜೂಜುಗಳು, ಗಾಂಜಾ ಸೇವನೆಯಂಥ ಪ್ರಕರಣಗಳು ಹೆಚ್ಚುತ್ತಿವೆ. ಹಲವು ಬಾರಿ ಪೊಲೀಸ್ ಠಾಣೆಗಳಿಗೆ ದೂರು ಸಹ ನೀಡಲಾಗಿದೆ. ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೂ, ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಭದ್ರಾವತಿ ಶಾಸಕರ ಮಕ್ಕಳೇ ಅಕ್ರಮಕೂಟ ಕಟ್ಟಿಕೊಂಡು ರಾಜಕೀಯ ಲಾಭವನ್ನು ಬಳಸಿಕೊಂಡು ಅಧಿಕಾರಿಗಳಿಗೆ ಹಣದ ಆಮಿಷ ತೋರಿಸಿ, ಭದ್ರಾವತಿಯ ಜನರನ್ನು ದುಶ್ಚಟಗಳ ದಾಸರನ್ನಾಗಿ ಮಾಡುತ್ತಿದ್ದಾರೆ. ಇಸ್ಪೀಟ್ ದಂಧೆಯಂತೂ ಎಗ್ಗಿಲ್ಲದೆ ನಡೆಯುತ್ತಿದೆ. ಊರು-ಊರಿಗಳಿಗೂ ಹಬ್ಬಿದೆ. ಈ ಸಂಬಂಧ ಪ್ರಶ್ನೆ ಮಾಡಿದವರ ವಿರುದ್ಧವೇ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಾರೆ. ಜಾತಿ ನಿಂಧನೆ ಕೇಸು ಹಾಕಿಸುತ್ತಾರೆ. ಅಧಿಕಾರಿಗಳಿಗೆ ವರ್ಗಾವಣೆ ಮಾಡುವ ಬೆದರಿಕೆ ಹಾಕುತ್ತಾರೆ. ಆಡಳಿತ ಪಕ್ಷದವರು ಕೇಸು ಹಾಕಿಸಿಕೊಂಡರೇ ಒತ್ತಡ ಹೇರಿ ಕೇಸನ್ನು ತೆಗೆಸುತ್ತಾರೆ ಎಂದು ಆರೋಪಿಸಿದರು.

ಭದ್ರಾವತಿಯಲ್ಲಿ ಭೂ ಮಾಫಿಯಾ ಕೂಡ ಹೆಚ್ಚಾಗಿದೆ. ಯೋಗಾನಂದ ಎನ್ನುವರ ಭೂಮಾಲೀಕರ ತೋಟಕ್ಕೆ ನುಗ್ಗಿ ದ್ವಂಸಪಡಿಸಿ, ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಆ ಕುಟುಂಬದ ಮೇಲೆ ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ. ಭದ್ರಾವತಿ ಡಿವೈಎಸ್‌ಪಿ ಅವರ ಗಮನಕ್ಕೆ ವಿಷಯ ತಂದರೆ, ಅವರು ಏನು ಕ್ರಮ ಕೈಗೊಂಡಿಲ್ಲ. ಹೆಚ್ಚಿನ ಪೊಲೀಸ್ ಅಧಿಕಾರಿಗಳು ಶಾಸಕರ ಆಣತಿ ಮೇರೆಗೆ ಕೆಲಸ ಮಾಡುತ್ತಾರೆ ಎಂದು ದೂರಲಾಯಿತು.

ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ಕೆ.ಬಿ.ಪ್ರಸನ್ನಕುಮಾರ್, ದೀಪಕ್ ಸಿಂಗ್, ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್, ದಲಿತ ಮುಖಂಡ ಸುರೇಶ್ ಸೇರಿದಂತೆ ಪಕ್ಷಾತೀತವಾಗಿ ಭದ್ರಾವತಿಯ ಪ್ರಮುಖರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

- - - -10ಎಸ್‌ಎಂಜಿಕೆಪಿ03:

ಭದ್ರಾವತಿಯಲ್ಲಿ ಓ.ಸಿ., ಇಸ್ಪೀಟ್, ಗಾಂಜಾ ಹಾವಳಿ ಕಡಿವಾಣಕ್ಕೆ ಆಗ್ರಹಿಸಿ ಜೆಡಿಎಸ್ ಮುಖಂಡರಾದ ಶಾರದಾ ಅಪ್ಪಾಜಿಗೌಡ ನೇತೃತ್ವದಲ್ಲಿ ಜಿಲ್ಲಾ ಎಸ್‌ಪಿಗೆ ಮನವಿ ಸಲ್ಲಿಸಲಾಯಿತು.

Share this article