ಚನ್ನಪಟ್ಟಣ: ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ನೀಗಿಸಲು ಸೈಲೇಜ್ ಯಂತ್ರ ಸಹಕಾರಿಯಾಗಿದೆ. ರೈತರು ಈ ಯಂತ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಮೂಲ್ ನಿರ್ದೇಶಕ ಎಸ್.ಲಿಂಗೇಶ್‌ಕುಮಾರ್ ಸಲಹೆ ನೀಡಿದರು.
ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಸೈಲೇಜ್ ಸಿಸ್ಟಮ್ ಅನ್ನು ಬಮೂಲ್ ಮೂಲಕ ಸಬ್ಸಿಡಿ ದರದಲ್ಲಿ ನೀಡಲು ಮುಂದಾಗಿದ್ದಾರೆ. ಈ ಯಂತ್ರವನ್ನು ಸಂಘದಿಂದ ಖರೀದಿ ಮಾಡಿ ಹಾಲು ಉತ್ಪಾದಕ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ. ಹಾಗಾಗಿ ರೈತರು ಸೈಲೇಜ್ (ರಸಮೇವು) ಯಂತ್ರದ ಸದ್ಬಳಕೆ ಪಡೆಯುವಂತೆ ತಿಳಿಸಿದರು.
ಬಮೂಲ್ ಶಿಬಿರ ಉಪ ವ್ಯವಸ್ಥಾಪಕ ಡಾ.ಕಿರಣ್ ಮಾತನಾಡಿ, ರೈತರು ಮಳೆಗಾಲದಲ್ಲಿ ಮೇವನ್ನು ಕೊಯ್ದು ಚಾಪ್‌ಕಟರ್‌ನಲ್ಲಿ ಕತ್ತರಿಸಿ, ಬಳಸಲು ಒಂದು ದಿನವೇ ಬೇಕಾಗುತ್ತದೆ. ಯಂತ್ರದ ಮೂಲಕ ಸೈಲೇಜ್ ಮಾಡಿಕೊಂಡರೆ ಆ ಮೇವನ್ನು ೬ ತಿಂಗಳವರೆಗೆ ಬಳಸಬಹುದು. ಮೇವು ಕೊಳೆಯುವುದಿಲ್ಲ, ಕೆಡುವುದಿಲ್ಲ. ಈ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ರೈತರಿಗೆ ಸೈಲೇಜ್ ಸಿಸ್ಟಂ ಅನುಕೂಲವಾಗಲಿದೆ. ಇಲ್ಲಿ ಸೈಲೇಜ್ ಮಾಡಿದ ೫೦ ಕೆಜಿ ತೂಕದ ಮೇವನ್ನು ಸಂಗ್ರಹಿಸುವ ಬ್ಯಾಗ್‌ಗೆ ಮಾತ್ರ ೫೦ ರೂ. ನಿಗದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಹಾಲು ಉತ್ಪಾದಕ ರೈತರು ತಂದಿದ್ದ ಮೇವನ್ನು ಸೈಲೆಜ್ ಯಂತ್ರಕ್ಕೆ ಹಾಕಿ ರೈತರಿಗೆ ಮೇವು ಸೈಲೇಜ್ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.
ಈ ವೇಳೆ ಕೃಷಿ ಅಧಿಕಾರಿ ಜಿತೇಂದ್ರಕುಮಾರ್, ವಿಸ್ತರಣಾಧಿಕಾರಿಗಳಾದ ಹೊನ್ನಪ್ಪ ಪೂಜಾರಿ, ರಾಜು, ರಾಜೇಶ್, ನಂದಿತಾ, ಝರಿನಾ, ಹಾಲು ಉತ್ಪಾದಕ ರೈತರು ಉಪಸ್ಥಿತರಿದ್ದರು.ಪೊಟೊ೨೦ಸಿಪಿಟಿ೨: ಚನ್ನಪಟ್ಟಣ ತಾಲೂಕಿನ ಹಾರೋಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ರಸಮೇವು ಯಂತ್ರದ ಕಾರ್ಯದ ಪ್ರಾತ್ಯಕ್ಷಿಕೆಗೆ ಲಿಂಗೇಶ್ ಕುಮಾರ್ ಚಾಲನೆ ನೀಡಿದರು.