ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಮರಗಳ ಕಡಿತ: ಪ್ರಕರಣ ದಾಖಲು

KannadaprabhaNewsNetwork |  
Published : May 17, 2026, 02:15 AM IST
ಕಂಪ್ಲಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿ  ಅನಧಿಕೃತವಾಗಿ ಮರಗಳನ್ನು ಕತ್ತರಿಸಿರುವುದು. | Kannada Prabha

ಸಾರಾಂಶ

ಮರಗಳನ್ನು ಬೇಕಾಬಿಟ್ಟಿಯಾಗಿ ಕಡಿದು ಹಾಕಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕಂಪ್ಲಿ: ಪಟ್ಟಣದ ವಾಲ್ಮೀಕಿ ವೃತ್ತದಿಂದ ಸಕ್ಕರೆ ಕಾರ್ಖಾನೆವರೆಗೆ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯ ವೇಳೆ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಮುಂಭಾಗದಲ್ಲಿದ್ದ ಮರಗಳನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಕಡಿದ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.

ರಸ್ತೆ ಅಗಲೀಕರಣ ಕಾಮಗಾರಿ ನೆಪದಲ್ಲಿ ಹಲವು ವರ್ಷಗಳಿಂದ ಬೆಳೆದು ನಿಂತಿದ್ದ ಮರಗಳನ್ನು ಬೇಕಾಬಿಟ್ಟಿಯಾಗಿ ಕಡಿದು ಹಾಕಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪರಿಸರ ಸಂರಕ್ಷಣೆಗೆ ಮಹತ್ವ ನೀಡಬೇಕಾದ ಸಂದರ್ಭದಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೇ ಮರಗಳನ್ನು ಕಡಿದಿರುವುದು ಸರಿಯಾದ ಕ್ರಮವಲ್ಲ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಪಟ್ಟಣದ ಕುಡುತಿನಿ ರಸ್ತೆಯ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಸಮೀಪ ಸುಮಾರು ಆರೇಳು ಮರಗಳನ್ನು ಸಂಪೂರ್ಣವಾಗಿ ಕಡಿದು ಹಾಕಲಾಗಿದೆ. ಇನ್ನು ಮೂರರಿಂದ ನಾಲ್ಕು ಮರಗಳ ಕೊಂಬೆಗಳನ್ನು ಸಹ ಕತ್ತರಿಸಿರುವುದು ಗಮನಕ್ಕೆ ಬಂದಿದೆ. ಮರಗಳ ಬೊಡ್ಡೆಯ ಮೇಲ್ತುದಿವರೆಗೆ ಕಡಿತ ಮಾಡಿರುವ ದೃಶ್ಯ ಸ್ಥಳೀಯರಲ್ಲಿ ಬೇಸರ ಮೂಡಿಸಿದೆ. ನೆರಳು ನೀಡುತ್ತಿದ್ದ ಹಾಗೂ ಪರಿಸರ ಸಮತೋಲನ ಕಾಪಾಡುತ್ತಿದ್ದ ಮರಗಳನ್ನು ಏಕಾಏಕಿ ತೆರವುಗೊಳಿಸಿರುವುದರಿಂದ ಪರಿಸರ ಹಾನಿಯ ಆತಂಕವೂ ವ್ಯಕ್ತವಾಗಿದೆ.

ಈ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಯಾವುದೇ ಅಧಿಕೃತ ಅನುಮತಿ ಇಲ್ಲದೇ ಮರಗಳನ್ನು ಕಡಿದಿರುವುದು ದೃಢಪಟ್ಟ ಹಿನ್ನೆಲೆ ರಸ್ತೆ ಕಾಮಗಾರಿಯ ಸೈಟ್ ಇಂಜಿನಿಯರ್ ಹಾಗೂ ಮರಗಳನ್ನು ಕತ್ತರಿಸಿದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮುಂದಿನ ತನಿಖೆಯನ್ನು ಇಲಾಖೆ ಕೈಗೊಂಡಿದೆ.

ಈ ಕುರಿತು ಹೊಸಪೇಟೆಯ ವಲಯ ಅರಣ್ಯ ಅಧಿಕಾರಿ ಕೌಶಿಕ್ ದಳವಾಯಿ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆಯದೆ ಯಾವುದೇ ಮರ ಅಥವಾ ಮರಗಿಡಗಳನ್ನು ಕಡಿಯುವುದು ಕಾನೂನುಬಾಹಿರ ಎಂದು ತಿಳಿಸಿದ್ದಾರೆ. ರಸ್ತೆ ಕಾಮಗಾರಿ, ಕಟ್ಟಡ ನಿರ್ಮಾಣ ಅಥವಾ ಇತರ ಯಾವುದೇ ಕಾರಣಗಳಿದ್ದರೂ ನಿಯಮಾನುಸಾರ ಇಲಾಖೆಯ ಅನುಮತಿ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದರು.

“ಅನಧಿಕೃತವಾಗಿ ಮರಗಳನ್ನು ಕಡಿತ ಮಾಡುವುದು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಮರಗಳ ಸಂರಕ್ಷಣೆಯಲ್ಲಿ ನಾಗರಿಕರು ಸಹಕಾರ ನೀಡಬೇಕು” ಎಂದು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶನೈಶ್ಚರ ದೇವರ ಪ್ರತಿಮೆಗೆ ತೈಲಾಭಿಷೇಕ
ಪ್ರತಿಯೊಬ್ಬರು ನಾಯಕತ್ವ ಗುಣ ಬೆಳೆಸಿಕೊಳ್ಳಿ