ಮಂಗಳೂರು ಬೀಚ್‌ನಲ್ಲಿ ಮೊಟ್ಟೆಯೊಡೆದು ಸಮುದ್ರ ಸೇರಿದ ಕಡಲಾಮೆ ಮರಿಗಳು

KannadaprabhaNewsNetwork |  
Published : Feb 22, 2024, 01:45 AM IST
ಕಡಲಾಮೆ ಮೊಟ್ಟೆ ಮತ್ತು ಸಮುದ್ರ ಸೇರಲು ಹೊರಟ ಮರಿಗಳು | Kannada Prabha

ಸಾರಾಂಶ

ಸುಮಾರು 50 ದಿನಗಳ ಕಾಲ ಈ ಮೊಟ್ಟೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಜೋಪಾನವಾಗಿ ನೋಡಿಕೊಳ್ಳುತ್ತಿದ್ದರು. ಹದ್ದು ಇಲ್ಲವೇ ಇತರರಿಂದ ಮೊಟ್ಟೆಗೆ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿಯ ಕುಂದಾಪುರ ಬಳಿಕ ಈಗ ಮಂಗಳೂರು ಬೀಚ್‌ನಲ್ಲಿ ಕಡಲಾಮೆಗಳ ಸಂರಕ್ಷಣಾ ಕಾರ್ಯ ಅರಣ್ಯ ಇಲಾಖೆ ಸುಪರ್ದಿಯಲ್ಲಿ ನಡೆಯುತ್ತಿದೆ. ಡಿ.30ರ ರಾತ್ರಿ ಒಂದು ಆಮೆ ಬಂದು ಇರಿಸಿದ 113 ಮೊಟ್ಟೆಯಲ್ಲಿ 88 ಮೊಟ್ಟೆಗಳು ಮರಿಯಾಗಿ(ಹ್ಯಾಚ್ಲಿಂಗ್‌) ಬುಧವಾರ ಸಮುದ್ರ ಸೇರಿದೆ.ಸುಮಾರು 50 ದಿನಗಳ ಕಾಲ ಈ ಮೊಟ್ಟೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಜೋಪಾನವಾಗಿ ನೋಡಿಕೊಳ್ಳುತ್ತಿದ್ದರು. ಹದ್ದು ಇಲ್ಲವೇ ಇತರರಿಂದ ಮೊಟ್ಟೆಗೆ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಿದ್ದರು. ಕುಂದಾಪುರದ ಕೋಡಿ ಬೀಚ್‌ನಲ್ಲಿ ಕಡಲಾಮೆಗಳು ಮೊಟ್ಟೆ ಇರಿಸಿ ಮರಿಗಳಾಗುತ್ತಿರುವುದು ದೇಶಾದ್ಯಂತ ಸುದ್ದಿಯಾಗಿತ್ತು. ಇದಾಗ ಮಂಗಳೂರಿನ ಸಸಿಹಿತ್ಲು-ಇಡ್ಯಾ ಬೀಚ್‌ ಮಧ್ಯೆ 10, ತಣ್ಣೀರುಬಾವಿ ಟ್ರೀ ಪಾರ್ಕ್‌ ಬಳಿ 11 ಸ್ಥಳಗಳಲ್ಲಿ ಆಲಿವ್‌ ರೆಡ್ಲೆ ತಳಿಗೆ ಸೇರಿದ ಕಡಲಾಮೆಗಳು ದಡಕ್ಕೆ ಬಂದು ಮೊಟ್ಟೆ ಇರಿಸಿ(ಸೆಸ್ಟಿಂಗ್‌) ಹೋಗಿವೆ. ಬೀಚ್‌ ಸ್ವಚ್ಛತೆ ವೇಳೆ ಸಮುದ್ರ ಕಿನಾರೆಯಲ್ಲಿ ಕಂಡು ಬಂದ ಕಡಲಾಮೆಗಳ ಮೊಟ್ಟೆಗಳನ್ನು ಇಲಾಖೆ ಸಂರಕ್ಷಣೆ ಮಾಡಿದೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಕಡಲಾಮೆ ಮೊಟ್ಟೆಗಳು ಇವೆ ಎಂದು ಅಂದಾಜಿಸಲಾಗಿದೆ. ಕಡಲಾಮೆಗಳು ರಾತ್ರಿ ವೇಳೆ ಮೊಟ್ಟೆ ಇರಿಸಲು ದಡಕ್ಕೆ ಬರುತ್ತವೆಯೇ ಎಂದು ಪತ್ತೆ ಮಾಡಲು ಸಸಿಹಿತ್ಲು, ಇಡ್ಯಾ, ತಣ್ಣೀರುಬಾವಿ, ಬೆಂಗರೆ, ಉಳ್ಳಾಲ ಬೀಚ್‌ಗಳಲ್ಲಿ ಕಾರ್ಮಿಕರನ್ನು ನೇಮಕ ಮಾಡಲಾಗಿತ್ತು. ಈ ಕಾರ್ಮಿಕರು ಕಡಲಾಮೆ ಬಂದು ಹೋಗುವ ಬಗ್ಗೆ ಮಾಹಿತಿ ನೀಡಿದರೆ, ಅರಣ್ಯ ಇಲಾಖೆ 5 ಸಾವಿರ ರು. ಬಹುಮಾನವನ್ನೂ ಘೋಷಿಸಿತ್ತು. ಈಗ ಪತ್ತೆಯಾಗಿರುವ ಪ್ರದೇಶಗಳನ್ನು ಕಾರ್ಮಿಕರೇ ಗುರುತಿಸಿ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮೊಟ್ಟೆ ಇರಿಸಿದ 45-50 ದಿನಗಳಲ್ಲಿ ಒಡೆದು ಮರಿ ಹೊರ ಬರುತ್ತದೆ. 3-4 ಗಂಟೆಗಳಲ್ಲಿ ಎಲ್ಲ ಮರಿಗಳೂ ಸಮುದ್ರ ಸೇರುತ್ತವೆ. ಒಂದು ಸಾವಿರ ಮರಿ ಸಮುದ್ರ ಸೇರಿದರೆ, ಅದರಲ್ಲಿ ಕೇವಲ 10 ಮಾತ್ರ ಬದುಕುಳಿಯುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಈ ಕಡಲಾಮೆ ಮೊಟ್ಟೆ ಸಂರಕ್ಷಣೆಯಲ್ಲಿ ಡಿಸಿಎಫ್‌ ಆ್ಯಂಟನಿ ಮರಿಯಪ್ಪ, ಎಸಿಎಫ್‌ ಪಿ.ಶ್ರೀಧರ್‌, ಆರ್‌ಎಫ್‌ಒಗಳಾದ ರಾಜೇಶ್‌ ಬಳಿಗಾರ್‌, ಮನೋಜ್‌ ಸೋನಾ ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ