ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಶಾಸಕ ಹೆಚ್.ಟಿ.ಮಂಜು ಹಾಗೂ ತಹಸೀಲ್ದಾರ್ ನಿಸರ್ಗ ಪ್ರಿಯ ಉತ್ಸವ ಮೂರ್ತಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿ ಶಾಸಕ ಹೆಚ್.ಟಿ. ಮಂಜು, ಹೇಮಗಿರಿ ಜಾತ್ರೆ ಮತ್ತು ಕಲ್ಯಣ ವೆಂಕಟರಮಣಸ್ವಾಮಿ ರಥೋತ್ಸವ ಹಾಗೂ ತೆಪ್ಪೋತ್ಸವಗಳು ನಾಡಿನಲ್ಲಿಯೇ ಸುಪ್ರಸಿದ್ಧವಾಗಿದೆ. ಧಾರ್ಮಿಕ ಮತ್ತು ಪರಂಪರೆಯನ್ನು ಬಿಂಬಿಸುತ್ತಿದೆ ಎಂದರು.
ರಾಜ್ಯದಲ್ಲಿಯೇ ಇದು ಅಪರೂಪದ ತೆಪ್ಪೋತ್ಸವವಾಗಿದೆ. 15 ದಿನಗಳ ಕಾಲ ದನಗಳ ಜಾತ್ರೆ ಹಾಗೂ ಶ್ರೀ ಕಲ್ಯಾಣವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ಮತ್ತು ತೆಪ್ಪೋತ್ಸವ ನಡೆಯುತ್ತಿದೆ. ಇದನ್ನು ವೀಕ್ಷಿಸಲು ತಾಲೂಕು, ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ತಾಲೂಕು ಆಡಳಿತ ಮತ್ತು ಬಂಡಿಹೊಳೆ ಗ್ರಾಪಂ ವತಿಯಿಂದ ಭಕ್ತರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ಸ್ವಾಮಿಯ ದರ್ಶನ ಪಡೆದು ಪುಳಕಿತರಾದರು. ಜಾತ್ರೆ ಯಶಸ್ಸಿಗೆ ಶ್ರಮಿಸಿದ ಅಧಿಕಾರಿಗಳನ್ನು ಅಭಿನಂದಿಸಲಾಯಿತು. ಈ ವೇಳೆ ಬಂಡಿಹೊಳೆ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ ಅಣ್ಣಪ್ಪ, ಕಸಬಾ ಹೋಬಳಿ ರಾಜಶ್ವ ನಿರೀಕ್ಷಕ ಜ್ಞಾನೇಶ್, ಲೆಕ್ಕಾಧಿಕಾರಿ ಪೂಜಾ ಗೌಡ, ಶಿರಸ್ತೇದಾರ್ ರವಿ, ಗ್ರಾಮಾಂತರ ಠಾಣೆ ಆರಕ್ಷಕ ನಿರೀಕ್ಷಕ ಆನಂದೇಗೌಡ, ಹರಳಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಟಿ. ಲೋಕೇಶ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಗ್ರಾಪಂ ಮಾಜಿ ಅಧ್ಯಕ್ಷ ಶೇಷಾದ್ರಿ, ಕಾಯಿ ಮಂಜೇಗೌಡ ಸೇರಿದಂತೆ ಹಲವರಿದ್ದರು.