ಸೈಬರ್ ಅಪರಾಧಗಳನ್ನು ಜಾಗೃತಿಯಿಂದ ಮಾತ್ರ ತಡೆಯಲು ಸಾಧ್ಯ: ಎಸಿಪಿ ಎನ್‌. ಸ್ನೇಹಾ ರಾಜ್‌

KannadaprabhaNewsNetwork |  
Published : Sep 17, 2025, 01:05 AM IST
25 | Kannada Prabha

ಸಾರಾಂಶ

ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಯಾರು ಕರೆ ಮಾಡಿ ನಿಮಗೆ ಮಾಹಿತಿ ನೀಡಿ ಬಂಧಿಸುವುದಿಲ್ಲ. ಡಿಜಿಟಲ್‌ ಅರೆಸ್ಟ್‌ ಎಂಬ ವಿಚಾರವೇ ಪೊಲೀಸ್‌ ವ್ಯವಸ್ಥೆಯಲ್ಲಿ ಇಲ್ಲ. ಆದರೆ, ಜನ ಮಾಹಿತಿಯ ಕೊರತೆಯಿಂದ ವಂಚಕರ ಬಲೆಗೆ ಬೀಳುತ್ತಿದ್ದಾರೆ. ಪಾರ್ಟ್ ಟೈಮ್ ಜಾಬ್ ಆಮಿಷಕ್ಕೆ ಹೆಚ್ಚಾಗಿ ಗೃಹಿಣಿಯರು ಬಲಿಯಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರುಸೈಬರ್ ಅಪರಾಧಗಳನ್ನು ಜಾಗೃತಿ ಮೂಡಿಸುವುದರಿಂದಷ್ಟೇ ತಡೆಯಲು ಸಾಧ್ಯ ಎಂದು ಮೈಸೂರು ನಗರ ಸೈಬರ್‌ ಕ್ರೈಂ ವಿಭಾಗದ ಎಸಿಪಿ ಎನ್‌. ಸ್ನೇಹಾ ರಾಜ್‌ ತಿಳಿಸಿದರು.ನಗರದ ಸಂದೇಶ್ ದಿ ಪ್ರಿನ್ಸ್ ಹೊಟೇಲ್ ಸಭಾಂಗಣದಲ್ಲಿ ಬಜಾಜ್ ಫೈನಾನ್ಸ್ ಲಿಮಿಟೆಡ್ ಡಿಜಿಟಲ್ ಬಳಕೆದಾರರಿಗಾಗಿ ಸೋಮವಾರ ಆಯೋಜಿಸಿದ್ದ ಸೈಬರ್‌ ವಂಚನೆಯ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ದುರಾಸೆಯಿಂದಾಗಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದೆ ಎಂದರು.ಜನ ಹೆಚ್ಚಿನ ಹಣ ಸಂಪಾದಿಸುವ ದಾವಂತದಿಂದ ಸಾಮಾಜಿಕ ಮಾಧ್ಯಮದಲ್ಲಿ ಬರುವ ಜಾಹೀರಾತಿಗೆ ಮರುಳಾಗುತ್ತಿದ್ದಾರೆ. ಹೂಡಿಕೆಯ ನೆಪದಲ್ಲಿ ವಂಚನೆ ಜಾಲಕ್ಕೆ ಸಿಲುಕು, ಲಕ್ಷಾಂಕರ ರೂಪಾಯಿ ಹಣ ಕಳೆದುಕೊಳ್ಳುತ್ತಿದ್ದಾರೆ. ಸೈಬರ್ ಅಪರಾಧಗಳನ್ನು ತಡೆಯಲು ಬೇರೆ ಮಾರ್ಗಗಳಿಲ್ಲ. ಜನ ಜಾಗೃತರಾಗುವುದರಿಂದ ಮಾತ್ರ ಸೈಬರ್ ಅಪರಾಧಗಳನ್ನು ತಡೆಯಬಹುದು ಎಂದು ಅವರು ಹೇಳಿದರು.ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಯಾರು ಕರೆ ಮಾಡಿ ನಿಮಗೆ ಮಾಹಿತಿ ನೀಡಿ ಬಂಧಿಸುವುದಿಲ್ಲ. ಡಿಜಿಟಲ್‌ ಅರೆಸ್ಟ್‌ ಎಂಬ ವಿಚಾರವೇ ಪೊಲೀಸ್‌ ವ್ಯವಸ್ಥೆಯಲ್ಲಿ ಇಲ್ಲ. ಆದರೆ, ಜನ ಮಾಹಿತಿಯ ಕೊರತೆಯಿಂದ ವಂಚಕರ ಬಲೆಗೆ ಬೀಳುತ್ತಿದ್ದಾರೆ. ಪಾರ್ಟ್ ಟೈಮ್ ಜಾಬ್ ಆಮಿಷಕ್ಕೆ ಹೆಚ್ಚಾಗಿ ಗೃಹಿಣಿಯರು ಬಲಿಯಾಗುತ್ತಿದ್ದಾರೆ ಎಂದರು. ಸಾಮಾಜಿಕ ಮಾಧ್ಯಮದಲ್ಲಿ ಬರುವ ಲಿಂಕ್‌ ಗಳು, ಎಪಿಕೆ ಫೈಲ್‌ ಗಳನ್ನು ನಂಬಬೇಡಿ. ಡಿ ಮ್ಯಾಟ್‌ ಖಾತೆಯ ಮೂಲಕವೇ ವ್ಯವಹಾರ ನಡೆಸಿ. ವಂಚಕರು ಸಾಮಾನ್ಯವಾಗಿ ವಾಟ್ಸಾಪ್‌ ಕರೆಗಳ ಮೂಲಕ ಸಂಪರ್ಕಿಸುತ್ತಾರೆ. ಹೀಗಾಗಿ, ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಇರಲಿ. ಫೋನ್‌ ಬಳಕೆಯಲ್ಲಿ ಡಿಜಿಟಲ್‌ ಪ್ರೌಢತೆ ಇರಲಿ. ತೀರಾ ಖಾಸಗಿ ವಿಚಾರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವಾಗ ಎಚ್ಚರಿಕೆಯಿರಲಿ. ಮುಂದೊಂದು ದಿನ ನಿಮ್ಮ ಮನೆಯ ಕಳ್ಳತನಕ್ಕೆ ಅದು ಕಾರಣವಾಗಬಹುದು ಎಂದು ಅವರು ಎಚ್ಚರಿಸಿದರು.ನಿವೃತ್ತ ಎಸಿಪಿಗಳಾದ ಜಿ.ಎನ್. ಮೋಹನ್, ರಮೇಶ್‌, ಬಿಎಫ್ಎಲ್ ವಲಯ ವ್ಯವಸ್ಥಾಪಕ ವಿ.ಎಸ್. ವೆಂಕಟೇಶನ್ ಇದ್ದರು.‘ಮೈಸೂರು ನಗರ ವ್ಯಾಪ್ತಿಯಲ್ಲಿ 2024ರಲ್ಲಿ 235 ಪ್ರಕರಣಗಳಲ್ಲಿ 47.19 ಕೋಟಿ ಕಳೆದುಕೊಂಡಿದ್ದರು. ಇದರಲ್ಲಿ 4.08 ಕೋಟಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ. 2025ರಲ್ಲಿ ಇಲ್ಲಿಯವರೆಗೆ 128 ಪ್ರಕರಣಗಳು ದಾಖಲಾಗಿದ್ದು, 28 ಕೋಟಿ ಕಳೆದುಕೊಂಡಿದ್ದಾರೆ. ಇದರಲ್ಲಿ 2.17 ಕೋಟಿ ರೂ. ಹಿಂದಿರುಗಿಸಲಾಗಿದೆ.’- ಎನ್. ಸ್ನೇಹಾ ರಾಜ್, ಎಸಿಪಿ, ನಗರ ಸೈಬರ್ ವಿಭಾಗ

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ