ಶಿರಸಿಯ 18 ವರ್ಷದ ಯುವಕನೊರ್ವ, ಧೂಮಪಾನ ಹಾಗೂ ಮದ್ಯಪಾನದ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸಲು ಸೈಕಲ್ ಏರಿ ನೂರಾರು ಕಿಮೀ ಯಾತ್ರೆ ಕೈಗೊಂಡು ಮಾದರಿ ಕಾರ್ಯಕ್ಕೆ ಮುಂದಾಗಿದ್ದಾನೆ.
ಮಂತ್ರಾಲಯದವರೆಗೆ ಪ್ರಯಾಣ ಬೆಳೆಸಿದ ಯುವಕ ವಾಪಸ್ । ಮಾದರಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ
ಶರಣು ಸೊಲಗಿ
ಕನ್ನಡಪ್ರಭ ವಾರ್ತೆ ಮುಂಡರಗಿ
ಇಂದಿನ ಯುವಪೀಳಿಗೆ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ವಿವಿಧ ದುಶ್ಚಟಗಳ ದಾಸರಾಗಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವ ಈ ಕಾಲದಲ್ಲಿ ತನಗಿಂತ ಕಿರಿಯ ಹಾಗೂ ಹಿರಿಯ ವಯಸ್ಸಿನವರು ದುಶ್ಚಟಗಳ ದಾಸರಾಗುತ್ತಿರುವುದನ್ನು ಕಂಡು ಶಿರಸಿಯ 18 ವರ್ಷದ ಯುವಕನೊರ್ವ, ಧೂಮಪಾನ ಹಾಗೂ ಮದ್ಯಪಾನದ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸಲು ಸೈಕಲ್ ಏರಿ ನೂರಾರು ಕಿಮೀ ಯಾತ್ರೆ ಕೈಗೊಂಡು ಮಾದರಿ ಕಾರ್ಯಕ್ಕೆ ಮುಂದಾಗಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಶಮಂತ್ ಕಮಲಾಕರ್ ಗೌಡ ಈ ಜನಜಾಗೃತಿ ಅಭಿಯಾನದ ಹರಿಕಾರ. ಶಿರಸಿಯಲ್ಲಿ ವಾಟರ್ ಸರ್ವಿಸ್ (ವಾಹನ ತೊಳೆಯುವ) ಕೆಲಸ ಮಾಡುತ್ತಿರುವ ಈತ, 10ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದಾನೆ. ಇತ್ತೀಚಿನ ವರ್ಷಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಯುವಕರು ಸಿಗರೇಟ್ ಹಾಗೂ ಮದ್ಯಪಾನದಂತಹ ಗಂಭೀರ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಅವರ ಆರೋಗ್ಯ ಹಾಳಾಗುವುದಲ್ಲದೆ, ಹೆತ್ತ ಪೋಷಕರಿಗೂ ತೀವ್ರ ನೋವಾಗುತ್ತದೆ. ಈ ಸಮಸ್ಯೆಯನ್ನು ಮನಗಂಡ ಶಮಂತ್, ರಸ್ತೆ ಬದಿಯಲ್ಲಿ ಸಿಗುವ ಜನರಿಗೆ ಮತ್ತು ಯುವಕರಿಗೆ ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿರುವಂತೆ ತಿಳಿಹೇಳುತ್ತಾ ಸೈಕಲ್ ಮೂಲಕ ಜಾಗೃತಿ ಮೂಡಿಸುತ್ತಿದ್ದಾನೆ.
ಕಳೆದ ಅ. 5ರಂದು ಶಿರಸಿಯಿಂದ ಸೈಕಲ್ ಯಾತ್ರೆ ಆರಂಭಿಸಿದ್ದ ಈತ, ಸುಮಾರು ನಾಲ್ಕು ದಿನಗಳ ನಿರಂತರ ಸೈಕಲ್ ಸವಾರಿಯ ನಂತರ ಅ. 9ರಂದು ಮಂತ್ರಾಲಯ ತಲುಪಿದ್ದಾನೆ. ಮಂತ್ರಾಲಯದ ರಸ್ತೆಯಲ್ಲಿ ಸಾಗುವಾಗ ದಿನಕ್ಕೆ ನಿರಂತರವಾಗಿ 100 ಕಿಮೀಗಳವರೆಗೆ ಸೈಕಲ್ ತುಳಿದು ಜಾಗೃತಿ ಸಂದೇಶ ತಲುಪಿಸಿದ್ದಾನೆ. ಮಂತ್ರಾಲಯ ತಲುಪಿ ಗುರುರಾಯರ ದರ್ಶನದ ಬಳಿಕ ಇದೀಗ ಸೈಕಲ್‌ನಲ್ಲೇ ಮತ್ತೆ ಶಿರಸಿಗೆ ಮರಳುತ್ತಿದ್ದಾನೆ. ಈಗಲೂ ಸಹ ಸೈಕಲ್ ಸವಾರಿಯ ಮೂಲಕ ಹೋಗುವಾಗ ರಸ್ತೆಯಲ್ಲಿ ಸಿಗುವ ಯುವಕರಿಗೆ, ಸಾರ್ವಜನಿಕರಿಗೆ ದುಶ್ಚಟಗಳ ಕುರಿತು ಜಾಗೃತಿ ಮೂಡಿಸುತ್ತಾ, ಅದರಿಂದಾಗುವ ದುಷ್ಪರಿಣಾಮದ ಕುರಿತು ತಿಳಿಸಿ, ಅವುಗಳಿಂದ ದೂರವಿರುವಂತೆ ತಿಳಿ ಹೇಳುತ್ತಾ ಸಾಗಿದ್ದಾನೆ.
ಭಾನುವಾರ ಕೊಪ್ಪಳದ ಮೂಲಕ ಮುಂಡರಗಿಯಿಂದ ಕಲಕೇರಿ ಗ್ರಾಮದತ್ತ ತೆರಳುತ್ತಿರುವಾಗ ಬೂದಿಹಾಳದ ಸಮೀಪ ಈ ಸೈಕಲ್ ಸವಾರ ಶಮಂತ್ ರಸ್ತೆಯುದ್ದಕ್ಕೂ ಓಡಾಡುವ ಮೊಟಾರ್ ಸೈಕಲ್, ಟಂಟಂಗಳಲ್ಲಿ ಸಂಚಾರ ಮಾಡುವವರನ್ನು ತಡೆದು ಜಾಗೃತಿ ಮೂಡಿಸುತ್ತಿರುವುದು ಕಂಡು ಬಂದಿತು. ಅಲ್ಲದೇ ದಾರಿಯುದ್ದಕ್ಕೂ ಬರುವ ವಿವಿಧ ಬಸ್ ನಿಲ್ದಾಣಗಳ ಎದುರಿನಲ್ಲಿ ನಿಂತಿರುವ ಜನತೆಗೂ ಸಹ ದುಶ್ಚಟಗಳಿಂದ ದೂರವಿರುವಂತೆ ತಿಳುವಳಿಕೆ ನೀಡುತ್ತಾ ತೆರಳುತ್ತಿರುವುದಾಗಿ ಯುವಕ ಶಮಂತ್ ಕನ್ನಡಪ್ರಭಕ್ಕೆ ವಿವರಿಸಿದರು. ಸಣ್ಣ ವಯಸ್ಸಿನಲ್ಲೇ ಸಮಾಜಮುಖಿ ಕಳಕಳಿ ಹೊತ್ತು ಸೈಕಲ್ ಏರಿ ಹೊರಟ ಶಮಂತ್ ಅವರ ಈ ಪ್ರಯತ್ನಕ್ಕೆ ದಾರಿಯುದ್ದಕ್ಕೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.ನನ್ನ ಅನೇಕ ಯುವ ಸ್ನೇಹಿತರು ಧೂಮಪಾನ, ಮದ್ಯಪಾನದಂತಹ ದುಶ್ಚಟಗಳ ದಾಸರಾಗುತ್ತಿದ್ದು, ಅನೇಕರು ಸಾವನ್ನಪ್ಪಿರುವುದನ್ನು ನೋಡಿದ್ದೇನೆ. ಮಕ್ಕಳ ಸಾವಿನ ನಂತರ, ಮಕ್ಕಳ ಬಗ್ಗೆ ಅನೇಕ ಕನಸುಗಳನ್ನು ಕಟ್ಟಿಕೊಂಡಿದ್ದ ಅವರ ತಂದೆ ತಾಯಂದಿರ ಜೀವನ, ಅವರು ನೋವು ನಲಿವುಗಳನ್ನು ಕಂಡು ಮನನೊಂದು ಇಂತಹ ಜಾಗೃತಿ ಕಾರ್ಯಕ್ಕೆ ಸೈಕಲ್ ಮೂಲಕ ತೆರಳುತ್ತಿರುವೆ ಎನ್ನುತ್ತಾರೆ ಶಮಂತ್ ಕಮಲಾಕರ್ ಗೌಡ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.