ನಟಿ ರಾಗಿಣಿ ದ್ವಿವೇದಿ ನೇತೃತ್ವದಲ್ಲಿ ನಡೆದ ಸೈಕ್ಲೋಥಾನ್
ನಶಾ ಮುಕ್ತ ಭಾರತ ಅಭಿಯಾನ ಹಾಗೂ ಆರೋಗ್ಯಕರ ಜೀವನಶೈಲಿಯ ಜಾಗೃತಿಗಾಗಿ ನಗರದ ತೋಳನಕೆರೆ ಮುಂಭಾಗದಲ್ಲಿ ಭಾನುವಾರ ಆಯೋಜಿಸಿದ್ದ 5 ಕಿ.ಮೀ. ಸೈಕ್ಲೋಥಾನ್ ಮತ್ತು ವಾಕಥಾನ್‌ನಲ್ಲಿ ನೂರಾರು ಯುವಕ-ಯುವತಿಯರು ಉತ್ಸಾಹದಿಂದ ಪಾಲ್ಗೊಂಡರು.
ಹುಬ್ಬಳ್ಳಿ ಬೈಸಿಕಲ್ ಕ್ಲಬ್, ಫಿಟ್ ಇಂಡಿಯಾ, ಹುಬ್ಬಳ್ಳಿ ಫಿಟ್‌ನೆಸ್ ಫೌಂಡೇಷನ್, ಸಾಯಿ ಸಂಸ್ಥೆ ಹಾಗೂ ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಜೆನೆಕ್ಟ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಫಿಟ್ ಇಂಡಿಯಾ ಚಾಂಪಿಯನ್, ನಟಿ ರಾಗಿಣಿ ದ್ವಿವೇದಿ ನೇತೃತ್ವದಲ್ಲಿ ನಡೆದ ಸೈಕ್ಲೋಥಾನ್ ಮತ್ತು ವಾಕಥಾನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ತೋಳನಕೆರೆ ಮುಂಭಾಗದಿಂದ ಆರಂಭವಾದ ಸೈಕ್ಲೋಥಾನ್ ಮತ್ತು ವಾಕಥಾನ್, ಟೆಂಡರ್‌ಶ್ಯೂರ್ ರಸ್ತೆ ಮೂಲಕ ಓಕ್ಸ್ ಹೋಟೆಲ್ ವರೆಗೆ ತೆರಳಿ, ಮರಳಿ ತೋಳನಕೆರೆ ಮುಂಭಾಗದಲ್ಲಿ ಮುಕ್ತಾಯಗೊಂಡಿತು.
ವಿಪ ಸದಸ್ಯ ಲಿಂಗರಾಜ ಪಾಟೀಲ ಮಾತನಾಡಿ, ಯುವ ಸಮುದಾಯ ಆರೋಗ್ಯವಂತರಾಗಿರಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ. ವ್ಯಕ್ತಿಯ ಆರೋಗ್ಯವೇ ದೇಶದ ಶಕ್ತಿಯಾಗಿದ್ದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.