ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡಾಗ ಮಾತ್ರ ಸಮಸ್ಯೆ ಬಗೆಹರಿಯಲಿದೆ ಎಂದು ಬೋಟಿಂಗ್ ಮಾಲೀಕರು ಆಗ್ರಹಿಸಿದರು.
ಹೊನ್ನಾವರ: ಪ್ರವಾಸೋದ್ಯಮ ಇಲಾಖೆ ನಿಗದಿಪಡಿಸಿ ಅಳವಡಿಸಿದ ಕೌಂಟರ್ ಟಿಕೆಟ್ ಪಡೆಯುವ ಮೊದಲು ಪ್ರವಾಸಿಗರನ್ನು ಅನಧಿಕೃತ ಬೋಟ್ ಮಾಲೀಕರು ಕರೆದೊಯ್ದು ಬೋಟಿಂಗ್ ನಡೆಸುವ ನಡೆಯನ್ನು ಖಂಡಿಸಿ ಪರವಾನಗಿ ಹೊಂದಿರುವ ಬೋಟ್ ಮಾಲೀಕರು ತಹಸೀಲ್ದಾರ್ ಕಾರ್ಯಾಲಯದ ಎದುರು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಸೆ. 4ರಿಂದ ಶರಾವತಿ ನದಿಯಲ್ಲಿ ಬೋಟಿಂಗ್ ನಡೆಸಲು ಪ್ರವಾಸೊದ್ಯಮ ಇಲಾಖೆಯಿಂದ ಪಟ್ಟಣದಲ್ಲಿ ಕೌಂಟರ್ ತೆರೆದು ಅಧಿಕೃತ ಪರವಾನಗಿ ಪಡೆದ ಬೋಟ್ ಮಾಲೀಕರಿಗೆ ನಿಗದಿತ ದರದಲ್ಲಿ ಬೋಟಿಂಗ್ ಮಾಡಲು ಅವಕಾಶ ಕಲ್ಪಿಸಿತ್ತು. ಈ ನಡೆಯಿಂದ ಪಟ್ಟಣದಲ್ಲಿ ವಾಹನ ತಡೆದು ಬೋಟಿಂಗ್ ಆಹ್ವಾನ ನೀಡುವುದು ಬಂದ್ ಆಗಿತ್ತು. ಇದರಿಂದ ವಾಹನ ಸವಾರರಿಗೆ ಪರವಾನಗಿ ಬೋಟಿಂಗ್ ನಡೆಸುವರಿಗೂ ಅನುಕೂಲವಾಗಿತ್ತು.ಒಂದು ತಿಂಗಳ ಕಾಲ ಸಮರ್ಪಕವಾಗಿದ್ದ ಬೋಟಿಂಗ್ ಕಳೆದೊಂದು ವಾರದಿಂದ ಕೆಲ ಪ್ರಭಾವಿಗಳು ಅಧಿಕಾರಿಗಳ ಮೇಲೆ ತಂದ ಒತ್ತಡದಿಂದ ಅನಧಿಕೃತ ಬೋಟಿಂಗ್ ಆರಂಭವಾಗಿತ್ತು. ಈ ಬಗ್ಗೆ ಪೊಲೀಸ್ ಇಲಾಖೆಯ ಮೊರೆ ಹೋದಾಗ ಇಲಾಖೆಯಿಂದ ತಹಸೀಲ್ದಾರರಿಗೆ ಹಾಗೂ ಪ್ರವಾಸೋದ್ಯಮ ಇಲಾಖೆಗೆ ಲಿಖಿತ ರೂಪದಲ್ಲಿ ನಿಯಂತ್ರಣ ಕೈಗೊಳ್ಳಲು ತಿಳಿಸಿದರೂ ಯಾವುದೇ ಕ್ರಮವಾಗದೇ ಶನಿವಾರ ಪುನರಾವರ್ತನೆಯಾದಾಗ ದಿಢೀರ್ ಪ್ರತಿಭಟನೆಗೆ ಬೋಟಿಂಗ್ ಮಾಲೀಕರು ಮುಂದಾದರು.ಬೋಟ್ ಮಾಲೀಕ ಗೋವಿಂದ ಗೌಡ ಮಾತನಾಡಿ, ಸಂಘದ ಅಡಿಯಲ್ಲಿ ಬೋಟಿಂಗ್ ರಿಜಿಸ್ಟ್ರೇಷನ್ ಮಾಡಿಕೊಂಡು ಲೈಸೆನ್ಸ್ ಪಡೆದಿದ್ದೇವೆ. ಸೆ. 4ನೇ ತಾರೀಖಿನಿಂದ ನಮಗೆ ಟೋಕನ್ ಸಿಸ್ಟಮ್ ಮೂಲಕ ಬೋಟಿಂಗ್ ಪ್ರಾರಂಭ ಮಾಡಿಕೊಟ್ಟಿದ್ದರು. ಸುಮಾರು ಒಂದು ತಿಂಗಳವರೆಗೆ ಟೋಟಲ್ ಸಿಸ್ಟಮ್ ಚೆನ್ನಾಗಿ ನಡೆಯಿತು. ಎಲ್ಲ ಬೋಟ್ಗಳಿಗೂ ಪಾಳಿ ಸಿಗುತ್ತಿತ್ತು. ಕಳೆದ ಕೆಲ ದಿನದಿಂದ ಮತ್ತೆ ಅನಧಿಕೃತ ಬೋಟಿಂಗ್ ಪ್ರಾರಂಭವಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ, ಯಾವ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ. ಇದುವರೆಗೂ ಯಾವುದೇ ಕ್ರಮ ಆಗುತ್ತಿಲ್ಲ ಎಂದರು.ಪ್ರವಾಸೋದ್ಯಮ ಇಲಾಖೆಯವರು, ಪ್ರವಾಸಿ ಮಿತ್ರ ಸಿಬ್ಬಂದಿಯನ್ನು ನೇಮಿಸಿ ಕೌಂಟರ್ ತೆರೆದಿದ್ದಾರೆ. ಅವರ ಮುಂದೆಯೇ, ನಾವು ದರ ಕಡಿಮೆ ಮಾಡಿಕೊಡುತ್ತೇವೆ ಎಂದು ಪ್ರವಾಸಿ ಗಾಡಿಯನ್ನು ಅನಧಿಕೃತ ಬೋಟ್ ನಡೆಸುವರು ಕರೆದುಕೊಂಡು ಹೋಗುತ್ತಾರೆ. ಈ ನಡೆಯಿಂದ ಬೇಸರಗೊಂಡು ತಹಸೀಲ್ದಾರ್ ಕಾರ್ಯಾಲಯದ ಎದುರಿಗೆ ಕುಳಿತಿದ್ದೇವೆ ಎಂದರು.ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡಾಗ ಮಾತ್ರ ಸಮಸ್ಯೆ ಬಗೆಹರಿಯಲಿದೆ ಎಂದು ಬೋಟಿಂಗ್ ಮಾಲೀಕರು ಆಗ್ರಹಿಸಿದರು.ಅನಧಿಕೃತ ಬೋಟಿಂಗ್ ವ್ಯವಸ್ಥೆ ವಿರುದ್ದ ತಾಲೂಕು ದಂಡಾಧಿಕಾರಿಗಳನ್ನು ಸಂಪರ್ಕಿಸಿದಾಗ ಅ. 27ರಂದು ಸಭೆ ಕರೆದು ಸರಿಪಡಿಸುತ್ತೇವೆ. ಅಲ್ಲಿಯವರೆಗೆ ಸಹಕಾರ ನೀಡುವಂತೆ ಕೇಳಿದ್ದು, ಅವರ ಭರವಸೆಯಂತೆ ಅಲ್ಲಿಯವರೆಗೆ ಸುಮ್ಮನಿರುತ್ತೇವೆ. ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಕಾರಣ ಪ್ರತಿಭಟನೆ ಕೈಬಿಡುತ್ತಿದ್ದೇವೆ ಎಂದು ಬೋಟ್ ಮಾಲೀಕ ಗಜಾನನ ಗೌಡ ತಿಳಿಸಿದರು.