ಬಡ ವ್ಯಾಪಾರಸ್ಥರ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸುತ್ತಿರುವ ಮಹಾನಗರ ಪಾಲಿಕೆಯ ಕಾರ್ಯಾಚರಣೆ ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು.
ಮಹಾನಗರ ಪಾಲಿಕೆಗೆ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಧಾರವಾಡಬಡ ವ್ಯಾಪಾರಸ್ಥರ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸುತ್ತಿರುವ ಮಹಾನಗರ ಪಾಲಿಕೆಯ ಕಾರ್ಯಾಚರಣೆ ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಜೀವನ ನಿರ್ವಹಣೆಗೋಸ್ಕರ ಸಾರ್ವಜನಿಕ ಪ್ರದೇಶದಲ್ಲಿ ಬಡವರು ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡಿರುತ್ತಾರೆ. ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಬಡವರ ಪರವಾಗಿ ಹೋರಾಟ ನಡೆಸುತ್ತಿದ್ದೇನೆ. ನಮ್ಮದೇ ಸರ್ಕಾರ ಇದ್ದರೂ ಬಡವರ ಹಿತಾಸಕ್ತಿಗಾಗಿ ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದರು.ಧಾರವಾಡದ ವಿವಿಧೆಡೆ ಇರುವ ಡಬ್ಬಾ ಅಂಗಡಿಗಳನ್ನು, ತರಕಾರಿ, ಹಣ್ಣು ವ್ಯಾಪಾರಿಗಳನ್ನು ತೆರವುಗೊಳಿಸುತ್ತಿರುವುದು ಸರಿಯಲ್ಲ. ಲೋಕಾಯುಕ್ತ ಕಚೇರಿಗೆ ಈ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಬಡ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸುವ ಕ್ರಮ ಕೈಗೊಂಡಿದ್ದು ಸರಿಯಲ್ಲ. ಮಹಾನಗರ ಪಾಲಿಕೆಯ ಅನುಮತಿ ಇದ್ದರೂ ಅಂಗಡಿಗಳನ್ನು ತೆರವುಗೊಳಿಸುತ್ತಿರುವುದು ಅನ್ಯಾಯವಾಗಿದೆ ಎಂದು ಆರೋಪಿಸಿದರು.
ವ್ಯಾಪಾರಸ್ಥರು ಈಗಾಗಲೇ ವ್ಯಾಪಾರ ಮಾಡುತ್ತಿರುವ ಸ್ಥಳದಲ್ಲಿಯೇ ಪರ್ಯಾಯ ಅಂಗಡಿಗಳನ್ನು ನಿರ್ಮಿಸಿಕೊಡಬೇಕು. ಬಡವರಿಗೆ ಅಂಗಡಿ ಮುಂಗಟ್ಟುಗಳನ್ನು ಹಂಚಿಕೆ ಮಾಡಬೇಕು. ಮಹಾನಗರ ಪಾಲಿಕೆ ಅಥವಾ ಸರ್ಕಾರದಿಂದ ವ್ಯಾಪಾರಸ್ಥರಿಗಾಗಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿಕೊಟ್ಟಿಲ್ಲ. ಇಂತಹ ಸಂದರ್ಭದಲ್ಲಿ ಬಡವರ ಬದುಕಿಗೆ ಆಸರೆಯಾಗಿರುವ ಅಂಗಡಿಗಳನ್ನು ತೆರವುಗೊಳಿಸುವುದು ಸರಿಯಲ್ಲ ಎಂದು ಹೇಳಿದರು.ಬಡ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ತೆರವು ಕಾರ್ಯಾಚರಣೆ ನಡೆಸಬಾರದು. ಬಡವರ ಬದುಕು ಮತ್ತು ಜೀವನೋಪಾಯದ ರಕ್ಷಣೆಗೆ ಕಾಂಗ್ರೆಸ್ ಸದಾ ಬದ್ಧವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಾಗರಾಜ ಗುರಿಕಾರ, ಯಾಸೀನ್ ಹಾವೇರಿಪೇಟ, ವಸಂತ ಅರ್ಕಾಚಾರಿ ಹಾಗೂ ಮುತ್ತು ಬೆಳ್ಳಕ್ಕಿ ಇದ್ದರು.