ಕನ್ನಡಪ್ರಭ ವಾರ್ತೆ ಆನೇಕಲ್
5ಎಕರೆ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಶೆಡ್‌ಗಳಲ್ಲಿ ಬಾಂಗ್ಲಾ ವಲಸಿಗರ ಅಕ್ರಮವಾಗಿ ನೆಲೆಸಿದ್ದರು. ಎರಡು ದಿನಗಳ ಹಿಂದೆ ಬನ್ನೇರುಘಟ್ಟ ಪೊಲೀಸರು ಸುಮಾರು 20 ಬಾಂಗ್ಲನ್ನರನ್ನು ವಶಕ್ಕೆ ಪಡೆದು ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದರು. ಬುಧವಾರ ರಾತ್ರಿ ಮತ್ತೆ ಕೆಲವರು ಹೇಗೋ ಇಲ್ಲಿಯೇ ಬಂದು ನೆಲೆಸಿದ್ದು ಈ ಅಗ್ನಿ ಅವಘಡ ನಡೆದು ಬಹುತೇಕ ಎಲ್ಲಾ ವಸ್ತುಗಳೂ ಭಸ್ಮವಾಗಿದೆ. ಅಗ್ನಿ ನಂದಿಸಿದ್ದರೂ ಅನುಮಾನದ ಹೊಗೆಯೂ ಹಾರಾಡುತ್ತಿದೆ.
ಬೇಗೂರು ಠಾಣಾ ವ್ಯಾಪ್ತಿಯ ಎಳೇನಹಳ್ಳಿಯಳ್ಳಿಯಲ್ಲಿ ತಡ ರಾತ್ರಿಯಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿದ್ದು ಮುಗಿಲೆತ್ತರಕ್ಕೆ ಬೆಂಕಿಯ ಕೆನ್ನಾಲಿಗೆ ಚಾಚಿದೆ. ರಾತ್ರಿ 3 ಗಂಟೆ ಸಮಯದಲ್ಲಿ ಸ್ಥಳೀಯ ನಿವಾಸಿಗಳು ಘಟನೆಯನ್ನು ಕಣ್ಣಾರೆ ಕಂಡು ಭಯ ಭೀತರಾಗಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಬೆಂಗಳೂರಿನ ಜಯನಗರ, ಹುಳಿಮಾವು, ಎಲೆಕ್ಟ್ರಾನಿಕ್ ಸಿಟಿ, ಅಂಜನಾಪುರದಿಂದ ಅಗ್ನಿಶಾಮಕ ತಂಡಗಳಿಂದ ಕಾರ್ಯಾಚರಣೆ ನಡೆಸಲಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾಯಕದಲ್ಲಿ ನಿರತರಾದರು. ಸ್ಕ್ರಾಪ್ ಡಂಪಿಂಗ್ ವಾರ್ಡ್‌ನ ಬೆಂಕಿಗಾಹುತಿಯಾದ ಸ್ಥಳದಲ್ಲಿ ಸಿಲಿಂಡರ್‌ಗಳು ಪತ್ತೆಯಾಗಿದ್ದು ಕೆಲವು ಸಿಡಿದಿವೆ. ಇಲ್ಲಿಗೆ ವಿದ್ಯುತ್ ಸರಬರಾಜು ನೀಡಿದ್ದು ಸಣ್ಣ ಸಣ್ಣ ಶೆಡ್ ಗಳಲ್ಲಿ ಫ್ರಿಡ್ಜ್, ಟಿವಿ, ಕೂಲರ್ ಗಳು ಸುಟ್ಟು ಕರಕಲಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಂಜುನಾಥ್ ಹೇಳಿದರು.ಕಳೆದ ಕೆಲ ದಿನಗಳ ಹಿಂದೆಯಷ್ಟೇ ಇಲ್ಲಿದ್ದ ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಖಾಲಿ ಮಾಡಿಸಲಾಗಿತ್ತು. ಮತ್ತೆ ರಾತ್ರೋ ರಾತ್ರಿ ಬಂದು ಸೇರಿಕೊಂಡಿದ್ದ ವಲಸಿಗರ ಸ್ಥಳಕ್ಕೆ ಬೇಗೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಂಕಿ ಸಂಪೂರ್ಣ ಹತೋಟಿಗೆ ಬಂದಿದ್ದು ನಂದಿಸಿದ ಮೇಲೆ ಅಗ್ನಿ ಅವಘಡಕ್ಕೆ ಕಾರಣ ತಿಳಿದು ಬರಲಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಶೆಡ್‌ಗಳಲ್ಲಿ ಇದ್ದವರನ್ನು ಹೊರಗೆ ಕಳುಹಿಸಲಾಗಿದೆ. ತನಿಖೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇಲ್ಲಿ ನೆಲಸಿದ್ದರೇ ಎನ್ನುವ ಬಗ್ಗೆ ತಿಳಿದು ಬರಬೇಕಿದೆ. ನಾಲ್ಕಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳು, ಇಪ್ಪತ್ತಕ್ಕೂ ಅಧಿಕ ಮಂದಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.