ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಬುಧವಾರ ನಡೆದ ಸಾಮಾಜಿಕ ಕ್ರಾಂತಿಯ ಹರಿಕಾರ ಹಾಗೂ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ 110 ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರತಿಯೊಂದು ಸಮಾಜಕ್ಕೂ ಸಾಮಾಜಿಕ ನ್ಯಾಯ ಕಲ್ಪಿಸಲು ಸಾಕಷ್ಟು ಶ್ರಮಿಸಿದ್ದಾರೆ. ಇಂತಹ ಮಹನೀಯರ ಆದರ್ಶ ಮತ್ತು ಸಾಧನೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದರು.ಸಮ ಸಮಾಜ ನಿರ್ಮಾಣ:
ಸಾಮಾಜಿಕ ನ್ಯಾಯಕ್ಕಾಗಿ ಕಾನೂನನ್ನು ತಿದ್ದುಪಡಿ ಮಾಡಿ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಲು ಶ್ರಮಿಸಿದ್ದಾರೆ. ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಇರುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಹಾನ್ ವ್ಯಕ್ತಿಯಾಗಿ ರೂಪುಗೊಂಡರು ಎಂದು ತಿಳಿಸಿದರು.
ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಕೆ.ಸಿ.ದಯಾನಂದ ಅವರು ಮಾತನಾಡಿ ಡಿ.ದೇವರಾಜ ಅರಸು ಅವರು ಸಾಮಾಜಿಕ ಸುಧಾರಣೆಯ ಮತ್ತು ಹಿಂದುಳಿದ ವರ್ಗಗಳ ಹರಿಕಾರ ಎಂದು ತಿಳಿಸಿದರು.
ಕನ್ನಡ ನಾಡಿನ ಅಪ್ರತಿಮ ಹೋರಾಟದ ಮುಖ್ಯಮಂತ್ರಿಯಾಗಿ ರಾಜಕೀಯ ನಾಯಕತ್ವ ಗುಣ ಹೊಂದಿದ್ದರು. ಸಾಮಾಜಿಕ ಸುಧಾರಣೆ ಮತ್ತು ಬದಲಾವಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. 1952 ರಲ್ಲಿ ವಿಧಾನಸಭೆ ಪ್ರವೇಶ ಮಾಡಿದ ಡಿ.ದೇವರಾಜ ಅರಸು ಅವರು ರಾಜಕೀಯ ಕ್ಷೇತ್ರದಲ್ಲಿ ಸಚಿವ ಹಾಗೂ ಮುಖ್ಯಮಂತ್ರಿ ಆಗಿ ಶ್ರೇಷ್ಠ ಆರ್ಥಿಕ ತಜ್ಞರಾಗಿ ಸಮಾನತೆಯ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದರು.
ಮಾದರಿಯಾಗಿ ಕಂಡಿದ್ದಾರೆ:
ನೂರಾರು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಇಡೀ ರಾಜ್ಯದಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಇಂದಿರಾ ಗಾಂಧಿ ಅವರು 20 ಅಂಶಗಳನ್ನು ಜಾರಿಗೊಳಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸಿದ್ದರು. ಅದೇ ರೀತಿ ರಾಜ್ಯದಲ್ಲಿ ಡಿ.ದೇವರಾಜ ಅರಸು ಅವರು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಸಮರ್ಥ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದರು ಎಂದರು.
ಡಿ.ದೇವರಾಜ ಅರಸು ಅವರು ಸಮಾಜ ಮುಖಿಯಾಗಿ ಕೆಲಸ ಮಾಡಿ ಶ್ರಮಿಸಿದ್ದಾರೆ ಎಂದು ನುಡಿದರು. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಸದ್ಭಾವನಾ ದಿನಾಚರಣೆ ಪ್ರಯುಕ್ತ ಪ್ರತಿಜ್ಞಾ ವಿಧಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕರಾದ ಕವಿತಾ ಅವರು ಬೋಧಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ತಹಸೀಲ್ದಾರ್ ಶ್ರೀಧರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ದೀಪಕ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ವ್ಯವಸ್ಥಾಪಕರಾದ ಶಿವಶಂಕರ, ಹಿಂದುಳಿದ ವರ್ಗಗಳ ತಾಲೂಕು ಅಧಿಕಾರಿ ಮೋಹನ್ ಕುಮಾರ್, ಇತರರು ಇದ್ದರು. ಕೆ.ಆರ್.ಭಾರತಿ ನಿರೂಪಿಸಿದರು, ಶ್ರೀಕಾಂತ್ ವಂದಿಸಿದರು.