ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ತಮ್ಮ ಜೀವಿತಾವಧಿವರೆಗೂ ಹೋರಾಟಗಳನ್ನೇ ತನ್ನ ಉಸಿರಾಗಿಸಿಕೊಂಡಿದ್ದ ರೈತ ಪರ ಚಿಂತನೆಗಳ ಹರಿಕಾರ, ಮಾಜಿ ಸಂಸದ ದಿ. ಜಿ.ಮಾದೇಗೌಡರ ಹೋರಾಟ, ಹೆಜ್ಜೆ ಗುರುತುಗಳು ಜನರ ಬದುಕಿಗೆ ಆದರ್ಶವಾಗಿವೆ ಎಂದು ಬೀದರ್ ಜಿಲ್ಲೆಯ ದೂರದರ್ಶನದ ಆಕಾಶವಾಣಿ ಕಲಾವಿದ ನವಲಿಂಗ ಪಾಟೀಲ್ ಹೇಳಿದರು.ಹನುಮಂತನಗರದಲ್ಲಿ ರೈತ ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡರ 4ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಮಾತನಾಡಿ, ರಾಜಕೀಯ, ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಹಾಗೂ ಚಳವಳಿ ಸೇರಿ ವಿವಿಧ ರಂಗಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಗೌಡರು, ಸರ್ವ ಜನಾಂಗಗಳ ಮನ್ನಣೆ ಗಳಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಿ ಲಕ್ಷಾಂತರ ವಿದ್ಯಾರ್ಥಿಗಳ ದಾರಿ ದೀಪವಾಗಿದ್ದಾರೆ ಎಂದು ಬಣ್ಣಿಸಿದರು.
ಗೌಡರು ಕುಗ್ರಾಮದಲ್ಲಿ ಜನಿಸಿದ್ದರೂ ಹಂತ ಹಂತವಾಗಿ ಜನರ ಸಮಸ್ಯೆಗಳನ್ನು ಆಳುವ ಸರಕಾರಗಳ ಮುಂದಿಟ್ಟು, ಜನಮನ್ನಣೆ ಗಳಿಸಿ ಶಾಸಕರು, ಸಂಸದರು, ಸಚಿವರಾಗಿ ಮಾಡಿರುವ ಸಾಧನೆ ಹಲವರ ಬದುಕಿಗೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.ಗೌಡರ ನೇತೃತ್ವದಲ್ಲಿ ನಡೆದ ಕಾವೇರಿ ಹೋರಾಟ ಇಡೀ ರಾಜ್ಯದಲ್ಲಿ ಕಂಪನ ಸೃಷ್ಟಿಸಿತ್ತು. ತಮಿಳುನಾಡಿಗೆ ನೀರು ಬಿಟ್ಟ ಸರ್ಕಾರದ ವಿರುದ್ಧ ಟೊಂಕ ಕಟ್ಟಿ ರೈತರೊಂದಿಗೆ ಸರ್ಕಾರದ ವಿರುದ್ಧ ಗುಡುಗಿದ್ದು ಮಾತ್ರ ಇತಿಹಾಸ. ಇಂತಹ ಹೋರಾಟಗಾರರು ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಆಶಿಸಿದರು.
ಮಾದೇಗೌಡರ ನಿಧನ ನಂತರ ವಿಧಾನ ಪರಿಷತ್ ಸದಸ್ಯರಾಗಿರುವ ಮಧು ಜಿ. ಮಾದೇಗೌಡ ತಂದೆಯ ಮಾರ್ಗಗಳನ್ನು ಅನುಸರಿಸುತ್ತ ಸದನದ ಒಳಗೆ ಸಾಮಾಜಿಕ ಕಳಕಳಿ ಪ್ರಶ್ನೆಗಳನ್ನು ಕೇಳಿ ಗಮನ ಸೆಳೆದು ಸಮಾಜಮುಖಿ ಮತ್ತು ಹೋರಾಟಗಳತ್ತ ತಮ್ಮ ಚಿತ್ತ ಹರಿಸುವ ಜೊತೆಗೆ ತಂದೆ ಕಟ್ಟಿದ ಶಿಕ್ಷಣ ಸಂಸ್ಥೆಯನ್ನು ಉತ್ತಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ನನ್ನ ತಂದೆ ಮಾದೇಗೌಡರು ಹಳ್ಳಿಗಾಡಿನ ಮಕ್ಕಳ ಭವಿಷ್ಯ ರೂಪಿಸಲು ಸ್ಥಾಪಿಸಿದ ಭಾರತೀ ಎಜುಕೇಷನ್ ಟ್ರಸ್ಟ್ ಆಗಾಧವಾಗಿ ಬೆಳೆದಿದೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಂಸ್ಥೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಿ ಮಕ್ಕಳಿಗೆ ಕಡಿಮೆ ದರದಲ್ಲಿ ಶಿಕ್ಷಣ ನೀಡಲು ಯೋಜನೆ ರೂಪಿಸಲಾಗಿದೆ ಎಂದರು.
ಹಿರಿಯ ಗಾಂಧಿವಾದಿ ಡಾ.ಜಿ.ಮಾದೇಗೌಡರ ಪುಣ್ಯಸ್ಮರಣೆ ಅಂಗವಾಗಿ ಪುತ್ರ ಮಧು ಜಿ.ಮಾದೇಗೌಡ, ಪತ್ನಿ ಬಿಂದು ಮಧು ಮಾದೇಗೌಡ, ಮಿಮ್ಸ್ ಮಾಜಿ ನಿರ್ದೇಶಕ ಜಿ.ಎಂ.ಪ್ರಕಾಶ್, ಪುತ್ರಿ ಶಶಿ, ಮೊಮ್ಮಗ, ಟ್ರಸ್ಟ್ ಸಿಇಒ ಆಶಯ್ ಮಧು, ಪತ್ನಿ ಬೃಂದಾ ಆಶಯ್ ಸೇರಿ ಕುಟುಂಬಸ್ಥರು ಪುಷ್ಪಾರ್ಚನೆ ನೆರವೇರಿಸಿ ಪೂಜೆ ಸಲ್ಲಿಸಿದರು. ಇದೇ ವೇಳೆ ಹಲವು ಮುಖಂಡರು, ಅಭಿಮಾನಿಗಳು ಮತ್ತು ಭಾರತೀ ಎಜುಕೇಷನ್ ಟ್ರಸ್ಟ್‌ನ ಸಿಬ್ಬಂದಿ, ಸಂಸ್ಥೆಯ ಭಾರತೀ ವಸತಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಗೌಡರ ಸಮಾಧಿಗೆ ನಮನ ಸಲ್ಲಿಸಿದರು.ಈ ವೇಳೆ ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯಾಧ್ಯಕ್ಷ ಬಿ.ಬಸವರಾಜು, ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಗುರುದೇವರಹಳ್ಳಿ ಸಿದ್ದೇಗೌಡ, ಟ್ರಸ್ಟಿ ಕಾರಕಹಳ್ಳಿ ಬಸವೇಗೌಡ, ವಿವಿಧ ಅಂಗ ಸಂಸ್ಥೆಗಳ ಪ್ರಾಂಶುಪಾಲರಾದ ಡಾ.ಎಂ.ಎಸ್. ಮಹದೇವಸ್ವಾಮಿ, ಡಾ.ಚಂದನ್, ಡಾ.ಎಸ್.ಎಲ್. ಸುರೇಶ್, ಸಿ.ವಿ.ಮಲ್ಲಿಕಾರ್ಜುನ, ಗ್ರಾಪಂ ಸದಸ್ಯರಾದ ಕೆ.ಟಿ.ಶ್ರೀನಿವಾಸ್, ಕೆ.ವಿ. ಶ್ರೀನಿವಾಸ್, ವಿನಯ್ ಹೊನ್ನೇಗೌಡ, ಮಿಥುನ್, ಮುಖಂಡರಾದ, ಕೆ.ಎಸ್.ಗೌಡ, ಬಿ. ಗಿರೀಶ್, ಅಣ್ಣೂರು ಸಿದ್ದಪ್ಪ ಸೇರಿದಂತೆ ಹಲವರಿದ್ದರು.
ನನ್ನ ತಾತ ಜಿ.ಮಾದೇಗೌಡರ ನೆಚ್ಚಿನ ತಾಣ ಹನುಮಂತನಗರದ ಪುಣ್ಯಭೂಮಿಯಲ್ಲಿ ಲೀನವಾಗಿದ್ದು, ಈ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಅವರ ಹೋರಾಟ ಮತ್ತು ರಾಜಕೀಯ ಸೇರಿದಂತೆ ಗೌಡರ ಬದುಕಿನ ಚಿತ್ರಣಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮ್ಯೂಸಿಯಂ ನಿರ್ಮಾಣಕ್ಕೆ ಕಾರ್ಯಯೋಜನೆ ರೂಪಿಸಲಾಗಿದೆ.ಆಶಯ್ ಮಧು, ಮುಖ್ಯ ಕಾರ್ಯನಿರ್ವಾಣಾಧಿಕಾರಿ, ಬಿಇಟಿ ಟ್ರಸ್ಟ್.