ದ.ಕ. ಹಾಲು ಒಕ್ಕೂಟ: ಶೇ. 25 ಬೋನಸ್, ಶೇ.15 ಡಿವಿಡೆಂಟ್

KannadaprabhaNewsNetwork |  
Published : Sep 21, 2025, 02:02 AM IST
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು.  | Kannada Prabha

ಸಾರಾಂಶ

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅಧ್ಯಕ್ಷತೆಯಲ್ಲಿ ಕುಲಶೇಖರ ಕೋರ್ಡೆಲ್ ಹಾಲ್‍ನಲ್ಲಿ ಶನಿವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅಧ್ಯಕ್ಷತೆಯಲ್ಲಿ ಕುಲಶೇಖರ ಕೋರ್ಡೆಲ್ ಹಾಲ್‍ನಲ್ಲಿ ಶನಿವಾರ ನಡೆಯಿತು.

2024-25ನೇ ಸಾಲಿನಲ್ಲಿ ಸಂಘಗಳು ಒಕ್ಕೂಟಕ್ಕೆ ಹಾಲು ಸರಬರಾಜು ಮಾಡಿದ ಪ್ರಮಾಣಕ್ಕೆ ಅನುಗುಣವಾಗಿ ಶೇ. 25 ಬೋನಸ್‌ ಹಾಗೂ ಶೇ.15 ಡಿವಿಡೆಂಟ್‌ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಬೋನಸ್ 2.33 ಕೋಟಿ ರು. ಹಾಗೂ ಷೇರು ಡಿವಿಡೆಂಟ್ 3.04 ಕೋಟಿ ರು. ಸೇರಿದಂತೆ ಒಟ್ಟು 5.37 ಕೋಟಿ ರು.ಗಳನ್ನು ಸಂಘಗಳಿಗೆ ವಿತರಿಸಲು ಸಭೆ ನಿರ್ಧರಿಸಿತು.

ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಮಾತನಾಡಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು 2024-25ನೇ ಸಾಲಿನಲ್ಲಿ ಒಟ್ಟು 1173.70 ಕೋಟಿ ರು. ವಹಿವಾಟು ಮಾಡಿ 12.79 ಕೋಟಿ ರು. ನಿವ್ವಳ ಲಾಭ ಗಳಿಸಿದೆ. ಕಳೆದ ಸಾಲಿಗೆ ಹೋಲಿಕೆ ಮಾಡಿದಾಗ ಶೇ. 5.84ರಷ್ಟು ಪ್ರಗತಿ ಸಾಧಿಸಿದೆ. ಒಕ್ಕೂಟವು ಗುಣಮಟ್ಟದ ಹಾಲಿನ ಸಂಗ್ರಹಣೆಯಲ್ಲಿ ರಾಜ್ಯದಲ್ಲಿ ಅಗ್ರ ಸ್ಥಾನದಲ್ಲಿದೆ. ರೈತರಿಗೆ ಪ್ರತಿ ಲೀ. ಹಾಲಿಗೆ ಅತಿ ಹೆಚ್ಚಿನ ದರ ಹಾಗೂ 1.5 ರು. ಪ್ರೋತ್ಸಾಹಧನ ನೀಡುವುದರೊಂದಿಗೆ ವಿವಿಧ ಅನುದಾನಗಳ ರೂಪದಲ್ಲಿ ಪ್ರತಿ ಕೆ.ಜಿ. ಹಾಲಿಗೆ 0.91 ರು.ರಂತೆ ರೈತರಿಗೆ ನೀಡುತ್ತಿರುವ ಏಕೈಕ ಒಕ್ಕೂಟವಾಗಿದೆ ಎಂದು ಹೇಳಿದರು.

ಕಡಿಮೆ ವೆಚ್ಚದಲ್ಲಿ ಅಧಿಕ ಹಾಲು ಉತ್ಪಾದನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಸಿರು ಮೇವಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಒಕ್ಕೂಟದ ವ್ಯಾಪ್ತಿಯ 10 ಹಾಲು ಉತ್ಪಾದಕರ ಸಂಘದ ವ್ಯಾಪ್ತಿಯಲ್ಲಿ 2 ಎಕರೆ ಜಾಗದಲ್ಲಿ ಮೇವಿನ ಅಭಿವೃದ್ಧಿಗೆ 20 ಲಕ್ಷ ರು. ಅನುದಾನ ನೀಡುವ ಮೂಲಕ ಹಸಿರು ಮೇವಿನ ಅಭಿವೃದ್ಧಿ ಹಾಗೂ ಹೈನುಗಾರಿಕೆಗೆ ಉತ್ತೇಜಿಸಲು ಯೋಜಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷರು ತಿಳಿಸಿದರು.

ವರದಿ ಸಾಲಿನಲ್ಲಿ ಒಕ್ಕೂಟ/ ಜಿಲ್ಲೆಯ ಅತ್ಯುತ್ತಮ ಹಾಲು ಉತ್ಪಾದಕರ ಸಹಕಾರ ಸಂಘ, ಮಹಿಳಾ ಸಹಕಾರ ಸಂಘ, ಉತ್ತಮ ಹೈನುಗಾರರು, ಉತ್ತಮ ಗುಣಮಟ್ಟದ ಸಂಘಗಳು ಮತ್ತು ಉತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತರನ್ನು ಹಾಗೂ ಎಸ್ಸೆಸ್ಸೆಲ್ಸಿ, ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಲು ಉತ್ಪಾದಕರ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ವಿಜೇತ ಸಂಘಗಳು:

- ಒಕ್ಕೂಟದ ಅತ್ಯುತ್ತಮ ಸಂಘ- ಉಡುಪಿ ಜಿಲ್ಲೆಯ ಹಾಳೆಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘ.

- ಜಿಲ್ಲಾವಾರು ಉತ್ತಮ ಸಂಘ- ದ.ಕ ಜಿಲ್ಲೆಯ ಗುಂಡೂರಿ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಉಡುಪಿ ಜಿಲ್ಲೆಯ ಕಾಂತಾವರ ಹಾಲು ಉತ್ಪಾದಕರ ಸಹಕಾರ ಸಂಘ.

- ಒಕ್ಕೂಟದ ಉತ್ತಮ ಮಹಿಳಾ ಸಂಘ – ದ.ಕ ಜಿಲ್ಲೆಯ ರಾಮನಗರ ಮತ್ತು ಉಡುಪಿ ಜಿಲ್ಲೆಯ ಆರೂರು ಮಹಿಳಾ ಸಹಕಾರ ಸಂಘ.

- ಜಿಲ್ಲಾವಾರು ಉತ್ತಮ ಬಿಎಂಸಿ - ದ.ಕ ಜಿಲ್ಲೆಯ ಕುಕ್ಕೇಡಿ ಮತ್ತು ಉಡುಪಿ ಜಿಲ್ಲೆಯ ಮೇಕೋಡು ಹಾಲು ಉತ್ಪಾದಕರ ಸಹಕಾರ ಸಂಘ.

- ಒಕ್ಕೂಟದ ಉತ್ತಮ ಹೈನುಗಾರರು: ಮೇಕೋಡು ಹಾಲು ಉತ್ಪಾದಕರ ಸಂಘದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಂಘದ ಸಾವಿತ್ರಿ ಭಟ್ ಹಾಗೂ ಬೆಳಪು ಹಾಲು ಉತ್ಪಾದಕರ ಸಹಕಾರ ಸಂಘದ ಡಾ. ದೇವಿಪ್ರಸಾದ್ ಶೆಟ್ಟಿ.

ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್.ಕೋಟ್ಯಾನ್ ಹಾಗೂ ನಿರ್ದೇಶಕರಾದ ಸುಚರಿತ ಶೆಟ್ಟಿ, ಎಸ್.ಬಿ. ಜಯರಾಮ ರೈ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಎನ್. ಮಂಜಯ್ಯ ಶೆಟ್ಟಿ, ಬಿ. ಸುಧಾಕರ ರೈ, ಸವಿತ ಎನ್. ಶೆಟ್ಟಿ, ಎಂ. ಸುಧಾಕರ ಶೆಟ್ಟಿ, ಕೆ. ಚಂದ್ರಶೇಖರ ರಾವ್, ಕೆ. ಶಿವಮೂರ್ತಿ, ಡಾ. ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ನಂದರಾಮ್ ರೈ, ಮಮತಾ ಆರ್. ಶೆಟ್ಟಿ. ಎಚ್. ಪ್ರಭಾಕರ, ಭರತ್ ಎನ್., ಸಹಕಾರ ಸಂಘಗಳ ಉಪನಿಬಂಧಕರಾದ ಎಚ್.ಎನ್. ರಮೇಶ್, ಡಾ. ಅರುಣ್‍ಕುಮಾರ್ ಶೆಟ್ಟಿ, ಉಪ ನಿರ್ದೇಶಕರು (ಪ.ಸಂ.) ಹಾಗೂ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ. ಇದ್ದರು.

ಒಕ್ಕೂಟದ ಉಪಾಧ್ಯಕ್ಷ ಉದಯ್ ಎಸ್. ಕೋಟ್ಯಾನ್ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ವಿವೇಕ್. ಡಿ. ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಜ.6 ಇಲ್ಲವೇ 9ಕ್ಕೆ ಡಿಕೆಶಿ ಸಿಎಂ 200% ಕನ್ಫರ್ಮ್: ಇಕ್ಬಾಲ್