ದೇವೇಗೌಡರ ಹೋರಾಟದ ಎಚ್ಚರಿಕೆಗೆ ಡಿ.ಕೆ.ಶಿವಕುಮಾರ್ ಸೆಡ್ಡು

KannadaprabhaNewsNetwork |  
Published : Jul 16, 2026, 01:15 AM IST
7.ಮಾಜಿ ಪ್ರಧಾನಿ ದೇವೇಗೌಡ  | Kannada Prabha

ಸಾರಾಂಶ

ಬಿಡದಿ ಟೌನ್ ಶಿಪ್ ಯೋಜನೆ ಮತ್ತು ರೈತರ ಮೇಲಿನ ಪ್ರಕರಣವನ್ನು ರದ್ದು ಮಾಡದಿದ್ದರೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದ್ದರು. ಇದಾದ ಮರು ದಿನವೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಯೋಜನೆ ವ್ಯಾಪ್ತಿಯ ನಾಲ್ಕು ಗ್ರಾಮಗಳ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸುವ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಬಿಡದಿ ಟೌನ್ ಶಿಪ್ ಯೋಜನೆ ಪರ ಮತ್ತು ವಿರೋಧವಾಗಿ ನಡೆಯುತ್ತಿರುವ ರೈತರ ಚಳವಳಿ ರಾಜಕೀಯದಿಂದ ಸಂಘರ್ಷದ ಹಾದಿ ಹಿಡಿದಿದೆ. ಮಾಜಿ ಪ್ರಧಾನಿ ದೇವೇಗೌಡರು ಹೋರಾಟಕ್ಕೆ ಧುಮುಕುವ ಎಚ್ಚರಿಕೆ ನೀಡಿದ ಬೆನ್ನ ಹಿಂದೆಯೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯಸರ್ಕಾರ 4 ಗ್ರಾಮಗಳ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ ಸೆಡ್ಡು ಹೊಡೆದಿದೆ.

ಈ ಮೊದಲಿನಿಂದಲೂ ದೇವೇಗೌಡ ಮತ್ತು ಡಿ.ಕೆ.ಶಿವಕುಮಾರ್ ರವರು ರಾಜಕೀಯವಾಗಿ ಬದ್ಧ ವೈರಿಗಳು. ಇದೀಗ ಬಿಡದಿ ಟೌನ್ ಶಿಪ್ ಯೋಜನೆ ಉಭಯ ನಾಯಕರ ನಡುವಿನ ರಾಜಕೀಯ ಕಾದಾಟಕ್ಕೆ ವೇದಿಕೆ ಕಲ್ಪಿಸಿದೆ.

ಬಿಡದಿ ಟೌನ್ ಶಿಪ್ ಯೋಜನೆ ಮತ್ತು ರೈತರ ಮೇಲಿನ ಪ್ರಕರಣವನ್ನು ರದ್ದು ಮಾಡದಿದ್ದರೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದ್ದರು. ಇದಾದ ಮರು ದಿನವೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಯೋಜನೆ ವ್ಯಾಪ್ತಿಯ ನಾಲ್ಕು ಗ್ರಾಮಗಳ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸುವ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.

ಈಗ ಟೌನ್ ಶಿಪ್ ಯೋಜನೆ ವ್ಯಾಪ್ತಿಯ ಗ್ರಾಮಗಳಲ್ಲಿ ಪರ ಮತ್ತು ವಿರೋಧದ ರೈತರ ಹೋರಾಟದ ಕಿಚ್ಚು ದಿನೇ ದಿನೇ ತೀವ್ರ ಸ್ವರೂಪ ಪಡೆಯುತ್ತಿದೆ. ಇನ್ನು ಚಳವಳಿಗೆ ಕೇಂದ್ರ ಸ್ಥಳವಾಗಿರುವ ಬೈರಮಂಗಲ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.

ಟೌನ್ ಶಿಪ್ ಯೋಜನೆ ವಿರೋಧಿಸಿ ಒಂದೆಡೆ ರೈತರು 490ಕ್ಕೂ ಹೆಚ್ಚು ದಿನಗಳಿಂದ ನಡೆಸುತ್ತಿರುವ ಹೋರಾಟ, ಮತ್ತೊಂದೆಡೆ ಯೋಜನೆ ಪರವಾಗಿರುವ ರೈತರು ಶೀಘ್ರ ಜಂಟಿ ಸರ್ವೇ ಮುಗಿಸಿ ಭೂ ಪರಿಹಾರ ನೀಡುವಂತೆ ಒತ್ತಾಯಿಸಿ ನಡೆಸುತ್ತಿರುವ ಚಳವಳಿ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ.

ಹೋರಾಟಕ್ಕೆ ರಾಜಕೀಯ ಸ್ವರೂಪ:

ಕೇಂದ್ರ ಸಚಿವ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ರವರು ಟೌನ್ ಶಿಪ್ ಯೋಜನೆ ವಿರೋಧಿಸಿ ರೈತರು ನಡೆಸುತ್ತಿದ್ದ ಹೋರಾಟದ ವೇದಿಕೆ ಹಂಚಿಕೊಂಡು ರಾಜಕೀಯ ಸ್ವರೂಪ ನೀಡಿದರು.

ಇಷ್ಟೇ ಅಲ್ಲದೆ, ರೈತರೆಲ್ಲರೂ ಬೈರಮಂಗಲ , ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘ ರಚನೆ ಮಾಡಿಕೊಂಡರು. ಈ ಸಂಘದ ಅಧ್ಯಕ್ಷರ ಆದಿಯಾಗಿ ಬಹುತೇಕ ಪದಾಧಿಕಾರಿಗಳು ಜೆಡಿಎಸ್ ನಾಯಕರ ಸುದ್ದಿಗೋಷ್ಠಿ ಮತ್ತು ಹೋರಾಟಗಳಲ್ಲಿ ಕಾಣಿಸಿಕೊಂಡಿದ್ದು, ಈ ಚಳವಳಿ ರಾಜಕೀಯ ಪ್ರೇರಿತ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಮತ್ತಷ್ಟು ಬಲ ನೀಡಿತು.

ಭೂ ಸ್ವಾಧೀನಕ್ಕಾಗಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದ ಮಂಡಲಹಳ್ಳಿ ಗ್ರಾಮದಲ್ಲಿ ಜಿಬಿಡಿಎ ಅಧಿಕಾರಿಗಳು ಜಂಟಿ ಸರ್ವೇ (ಜೆಎಂಸಿ) ಕಾರ್ಯಕ್ಕೆ ತೆರಳಿದ್ದ ವೇಳೆ ರೈತರು ಪೊರಕೆ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿ ಚಳವಳಿಯನ್ನು ಹಿಂಸಾರೂಪಕ್ಕೆ ಕೊಂಡೊಯ್ದರು.

ಇದರಿಂದ ಕೆರಳಿದ ಟೌನ್ ಶಿಪ್ ಯೋಜನೆ ಪರವಾಗಿ ಕಳೆದ 20 ದಿನಗಳಿಂದ ಹೋರಾಟ ಮಾಡುತ್ತಿರುವ ರೈತರು ಜಂಟಿ ಸರ್ವೇ ಕಾರ್ಯ ಬೇಗ ಮುಗಿಸಿ, ಭೂ ಹರಿಹಾರ ವಿತರಣೆ ಮಾಡುವಂತೆ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.

ಈಗ ಮಾಜಿ ಪ್ರಧಾನಿ ದೇವೇಗೌಡರವರು ಹೋರಾಟಕ್ಕೆ ಧುಮುಕುವ ಎಚ್ಚರಿಕೆ ನಡುವೆಯೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯಸರ್ಕಾರ 2ನೇ ಹಂತದಲ್ಲಿ 4 ಗ್ರಾಮಗಳ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸುವ ಮೂಲಕ ಸೆಡ್ಡು ಹೊಡೆದಿದೆ. ಇದು ಮತ್ತಷ್ಟು ರಾಜಕೀಯ ಜಟಾಪಟಿಗೆ ಕಾರಣವಾಗುವುದು ಸ್ಪಷ್ಟವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯಲ್ಲಿ ಶೇ.98.16ರಷ್ಟು ಎನುಮೆರೇಶನ್ ಫಾರಂ ವಿತರಣೆ
ಬಡವರ ಹೆಸರಿನ ಖಾತೆಯ ಬಹುಕೋಟಿ ಹಗರಣ ತನಿಖೆಗೆ ಆಗ್ರಹ