ಕನ್ನಡಪ್ರಭ ವಾರ್ತೆ ರಾಮನಗರ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾಗಿರುವ ಡಿ.ಕೆ.ಸುರೇಶ್ ಅವರು ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿ ಅಡಿ 5 ವರ್ಷಗಳ ಅವಧಿಯಲ್ಲಿ ದೊರೆತ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ಪರಿಪೂರ್ಣವಾಗಿ ಬಳಕೆ ಮಾಡಿಕೊಂಡಿದ್ದಾರೆ.
ಕೋವಿಡ್ -19 ಕಾರಣದಿಂದಾಗಿ ಎರಡು ವರ್ಷ ಈ ನಿಧಿಗೆ ಹಣ ನೀಡಿರಲಿಲ್ಲ. ಕೋವಿಡ್ ಪರಿಸ್ಥಿತಿ ಸುಧಾರಿಸಿದ ನಂತರ ಮತ್ತೆ ಅನುದಾನ ಬಿಡುಗಡೆ ಮಾಡಲಾಯಿತು. ಡಿ.ಕೆ.ಸುರೇಶ್ ರವರು ಕೋವಿಡ್ ಪೂರ್ವದಲ್ಲೂ ಅನುದಾನ ಬಳಕೆಯಲ್ಲಿ ಮುಂದಿದ್ದರು.ಕೇಂದ್ರ ಸರ್ಕಾರ ಸಂಸದ ಡಿ.ಕೆ.ಸುರೇಶ್ ರವರು ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ 5 ವರ್ಷಗಳಲ್ಲಿ ಒಟ್ಟು 18ಕೋಟಿ 40 ಲಕ್ಷ ರುಪಾಯಿ ಅನುದಾನ ಬಿಡುಗಡೆ ಮಾಡಿದ್ದು, ಈ ಪೈಕಿ ಅವರು ಅಷ್ಟೂ ಅನುದಾನದ ಕಾಮಗಾರಿಗಳನ್ನು ಶಿಫಾರಸ್ಸು ಮಾಡಿದ್ದಾರೆ. ಉಳಿಕೆ ಅನುದಾನ ಶೂನ್ಯವಾಗಿದೆ.
ಹ್ಯಾಟ್ರಿಕ್ ಸಂಸದರಾಗಿ ಕಾರ್ಯನಿರ್ವಹಿಸಿರುವ ಸುರೇಶ್ ಅವರಿಗೆ ಕ್ಷೇತ್ರದ ಅಭಿವೃದ್ಧಿಗಾಗಿ 2009–2014ರ ಅವಧಿಯಲ್ಲಿ ಸರ್ಕಾರ 18.40 ಕೋಟಿ ಹಣ ಬಿಡುಗಡೆ ಮಾಡಿತ್ತು. ಇದರಲ್ಲಿ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಇರುವ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ, ಉಳಿದ ವಿಧಾನಸಭಾ ಕ್ಷೇತ್ರಗಳಿಗೂ ಅನುದಾನ ಹಂಚಿಕೆ ಮಾಡಿದ್ದಾರೆ.
ಸಂಸದ ಡಿ.ಕೆ.ಸುರೇಶ್ ಅವರು ಹಣ ವಿನಿಯೋಗದ ಮಾರ್ಗದರ್ಶಿ ಸೂತ್ರದ ಅನ್ವಯ ಹಲವು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಅವಕಾಶವಿದ್ದರೂ, ಕ್ಷೇತ್ರ ವ್ಯಾಪ್ತಿಯ ನಗರ, ಪಟ್ಟಣ ಹಾಗೂ ಹಳ್ಳಿಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕೆಂಬ ಉದ್ದೇಶದಿಂದ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ.
ಈಗ ಬೇಸಿಗೆ ಕಾಲ ಆರಂಭವಾಗಿ ಸಣ್ಣ ಜಲಾಶಯಗಳು, ಕೆರೆ - ಕಟ್ಟೆಗಳೆಲ್ಲವೂ ಬರಿದಾಗಿದ್ದು, ನೀರಿಗೆ ಹಾಹಾಕಾರ ಶುರುವಾಗಿದೆ. ಇಂತಹ ಸಂಕಷ್ಟದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕ್ಷೇತ್ರದ ಜನರ ದಾಹವನ್ನು ತಣಿಸುತ್ತಿವೆ.ರಾಮನಗರ ಟೌನ್ , ಕುಣಿಗಲ್ ಟೌನ್ , ಮಾಗಡಿ ಪಟ್ಟಣ , ಆನೇಕಲ್ ಟೌನ್ , ಆನೇಕಲ್ ತಾಲೂಕು ಬಿದರಗುಪ್ಪೆ ಗ್ರಾಮಗಳಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಿದ್ದಾರೆ. ಅಲ್ಲದೆ, ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಸಿಮೆಂಟ್ ರಸ್ತೆ, ಪೈಪ್ ಲೈನ್ ಕಾಮಗಾರಿ, ಶೌಚಾಲಯಗಳ ನಿರ್ಮಾಣಕ್ಕೆ ಸಂಸದರು ಅನುದಾನ ಒದಗಿಸಿದ್ದಾರೆ.
ಕೊನೆಯ ವರ್ಷ ಬಸ್ ತಂಗುದಾಣಗಳ ನಿರ್ಮಾಣಕ್ಕೆ ಹೆಚ್ಚಿನ ಹಣ ವ್ಯಯಿಸಲಾಗಿದೆ. ಶಾಲಾ - ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿದಂತೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪ್ರಮುಖ ಸ್ಥಳಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಸುಸಜ್ಜಿತ ನೂರಾರು ಬಸ್ ತಂಗುದಾಣಗಳ ನಿರ್ಮಾಣಕ್ಕೆ ಸಂಸದ ಡಿ.ಕೆ.ಸುರೇಶ್ ರವರು ಹಣ ಖರ್ಚು ಮಾಡಿದ್ದಾರೆ.
ಎಚ್ ಡಿಕೆ ಉಳಿಸಿದ್ದ ಅನುದಾನವೂ ಬಳಕೆ:2009ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿರವರು 1 ಕೋಟಿ 40 ಲಕ್ಷ ರುಪಾಯಿ ಅನುದಾನ ಬಳಕೆ ಮಾಡದೆ ಹಾಗೆಯೇ ಉಳಿಸಿ ಹೋಗಿದ್ದರು. ಆ ಅನುದಾನವನ್ನು ವಾಪಸ್ ತಂದು ಸದ್ಭಳಕೆ ಮಾಡಿಕೊಳ್ಳುವಲ್ಲಿ ಡಿ.ಕೆ.ಸುರೇಶ್ ಯಶಸ್ವಿಯಾಗಿದ್ದಾರೆ.
ಕೇಂದ್ರ ಮಾತ್ರವಲ್ಲ ರಾಜ್ಯಸರ್ಕಾರದಿಂದಲೂ ಅನುದಾನ:
ಕೇಂದ್ರ ಸರ್ಕಾರದ ಯೋಜನೆಗಳು ಮಾತ್ರವಲ್ಲದೇ, ರಾಜ್ಯ ಸರ್ಕಾರದಿಂದಲೂ ಸಂಸದ ಡಿ.ಕೆ.ಸುರೇಶ್ ರವರು ವಿಶೇಷ ಅನುದಾನಗಳನ್ನು ತರಲು ಸಾಕಷ್ಟು ಶ್ರಮ ವಹಿಸಿದ್ದಾರೆ.ಬೆಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಭಾಗಗಳಲ್ಲಿ ರಸ್ತೆ, ಸೇತುವೆಗಳ ನಿರ್ಮಾಣ, ಕೆರೆಗಳ ಮರುಪೂರ್ಣ ಹೀಗೆ ಅನೇಕ ಕೆಲಸಗಳು ಸುರೇಶ್ ರವರ ಮನವಿಯಿಂದಲೇ ರಾಜ್ಯ ಸರ್ಕಾರ ಪೂರ್ಣಗೊಳಿಸಿದೆ.
ರಾಮನಗರದ ಯಾರಬ್‌ನಗರ, ಚನ್ನಪಟ್ಟಣದ ಎಲೇಕೇರಿ ಮತ್ತು ಕುಣಿಗಲ್‌ನಲ್ಲಿ ರೈಲ್ವೆ ಓವರ್ ಬ್ರಿಡ್ಜ್ ಮತ್ತು ಅಂಡರ್‌ಪಾಸ್ ನಿರ್ಮಾಣ, ಮೆಮು ರೈಲು ಸೇವೆಯನ್ನು ರಾಮನಗರದಿಂದ ಚನ್ನಪಟ್ಟದವರೆಗೆ ವಿಸ್ತರಿಸಿದ್ದು, ಕೆಲ ರೈಲುಗಳು ಚನ್ನಪಟ್ಟಣ ಮತ್ತು ರಾಮನಗರ ನಿಲ್ದಾಣಗಳಲ್ಲಿ ನಿಲುಗಡೆ ಮಾಡಿಸುವಲ್ಲಿ ಸುರೇಶ್ ರವರ ಶ್ರಮ ಇದೆ.
ಭಾರತ ಮಾಲಾ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ 550 ಕೋಟಿ ರು. ಮಂಜೂರಾಗಿದ್ದು, ಎನ್‌ಎಚ್‌ಎಐ ವತಿಯಿಂದ ರಾಮನಗರ, ಚನ್ನಪಟ್ಟಣ, ಬಿಡದಿ ಪಟ್ಟಣ ಪ್ರದೇಶದ ವ್ಯಾಪ್ತಿಯಲ್ಲಿ 145 ಕೋಟಿ ರು. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಅಗಲೀಕರಣ ಮತ್ತು ಅಭಿವೃದ್ಧಿಪಡಿಸಲು ಡಿ.ಕೆ.ಸುರೇಶ್ ಕ್ರಮ ವಹಿಸಿದ್ದಾರೆ.