ತಾಲೂಕು ಕಚೇರಿ ಸಭಾಂಗಣದಲ್ಲಿ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ತರಬೇತಿ
ಮುತ್ತಿನಕೊಪ್ಪ ಗ್ರಾಪಂನ ಲ್ಲಿ ನ.23 ರ ಶನಿವಾರ ನಡೆಯುವ ಉಪ ಚುನಾವಣೆಯಲ್ಲಿ ಅಳಿಸಲಾಗದ ಶಾಯಿಯನ್ನು ಎಡಗೈನ ಹೆಬ್ಬರಳಿಗೆ ಹಾಕಬೇಕು ಎಂದು ಮಾಸ್ಟರ್ ಟ್ರೈನರ್ ಡಿ.ಎನ್.ಮಂಜುನಾಥ್ ಸೂಚಿಸಿದರು.
ಗುರುವಾರ ತಾಲೂಕು ಕಚೇರಿಯಲ್ಲಿ ಮುತ್ತಿನಕೊಪ್ಪ ಗ್ರಾಪಂನ 2 ಸ್ಥಾನಗಳಿಗೆ ನ. 23 ಶನಿವಾರ ನಡೆಯಲಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿ- ಸಿಬ್ಬಂದಿಗೆ ನಡೆದ ತರಬೇತಿಯಲ್ಲಿ ಮಾತನಾಡಿ, ಈ ಉಪ ಚುನಾವಣೆಯಲ್ಲಿ ಇವಿಎಂ ಇಲ್ಲ. ಬದಲಿಗೆ ಬ್ಯಾಲೆಟ್ ಪೇಪರ್ ನಲ್ಲಿ ಅಭ್ಯರ್ಥಿಗೆ ಮತ ನೀಡುವ ಮತದಾರರು ರಬ್ಬರ್ ಸ್ಟಾಂಪ್ ಒತ್ತಿ ಮತ ನೀಡಬೇಕು. ಚುನಾವಣೆಗಾಗಿ ಮಟಗಟ್ಟೆ ಅಧಿಕಾರಿಗಳು ಹಿಂದಿನ ದಿನವೇ ಎಲ್ಲಾ ತಯಾರಿ ಮಾಡಿಕೊಳ್ಳಬೇಕು. ಮತಗಟ್ಟೆಯಿಂದ 100 ಮೀ. ಪ್ರದೇಶದಲ್ಲಿ ಪ್ರಚಾರ ಮಾಡದಂತೆ, ಯಾವುದೇ ಗೊಂದಲ ಆಗದಂತೆ ಮತಗಟ್ಟೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದರು.ಚುನಾವಣಾಧಿಕಾರಿ ಸಾಗರ್ ಮಾತನಾಡಿ, ಮುತ್ತಿನಕೊಪ್ಪ ಗ್ರಾಪಂನಲ್ಲಿ 2 ತೆರವಾದ ಸ್ಥಾನಗಳಿಗೆ ನ. 23 ರ ಶನಿವಾರ ಬೆಳಿಗ್ಗೆ 7 ರಿಂದ ಸಂಜೆ 5 ರ ವರೆಗೆ ಚುನಾವಣೆ ನಡೆಯಲಿದೆ. 1-ಕೆ.ಕಣಬೂರು ಕ್ಷೇತ್ರದ ಚುನಾವಣೆ ಕೆ.ಕಣಬೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಕೆ.ಎಸ್.ಅತೀಶ್, ಕೆ.ಆರ್.ನಾಗೇಂದ್ರ ಚುನಾವಣಾ ಕಣದಲ್ಲಿದ್ದಾರೆ. ಇಲ್ಲಿ 826 ಮತದಾರರಿದ್ದು, 395 ಪುರುಷರು, 431 ಮಹಿಳಾ ಮತದಾರರಿದ್ದಾರೆ. 3-ಬೈರಾಪುರ ಕ್ಷೇತ್ರದ ಉಪ ಚುನಾವಣೆ ಬೈರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಇಲ್ಲಿ ಬಿ. ಆಕಾಶ್ ಹಾಗೂ ಡಿ.ದೇವಂತ ಕುಮಾರ್ ಚುನಾವಣೆ ಕಣದಲ್ಲಿದ್ದಾರೆ. ಇಲ್ಲಿ 759 ಮತದಾರರಿದ್ದಾರೆ. 389 ಪುರುಷ ಹಾಗೂ 370 ಮಹಿಳಾ ಮತದಾರರಿದ್ದಾರೆ. ಎರಡೂ ಸಾಮಾನ್ಯ ಕ್ಷೇತ್ರ. ಪ್ರತಿ ಮತಗಟ್ಟೆ ಒಬ್ಬರು ಪಿಆರ್‌ಒ ಹಾಗೂ 3 ಜನ ಸಿಬ್ಬಂದಿಗಳಿದ್ದಾರೆ ಎಂದರು.
ತರಬೇತಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಸಂದೀಪಕುಮಾರ್, ಚುನಾವಣಾ ಶಿರಸ್ತಾರ್ ವೇಣುಗೋಪಾಲ್ ಇದ್ದರು.