ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಚಂದ್ರದರ್ಶನ ಕಲ್ಯಾಣ ಮಂಟಪದಲ್ಲಿ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಮತ್ತು ಡಾ.ವಿ.ಟಿ.ಸುಶೀಲ ಜಯರಾಮ್ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಶತಾಯುಷಿ ಸಾಹಿತಿ ದಿವಂಗತ ಸೀತಾಸುತರವರ 126ನೇ ವರ್ಷದ ಸಂಸ್ಮರಣೆ ಮತ್ತು ಡಾ.ವಿ.ಟಿ.ಸುಶೀಲ ಜಯರಾಮ್ ಹೆಸರಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸೀತಾಸುತ ಕುಟುಂಬದಲ್ಲಿ ಬಹುಪಾಲು ವೈದ್ಯರೇ ಹೆಚ್ಚಾಗಿದ್ದಾರೆ. ಅದೇ ರೀತಿ ಸಾಹಿತ್ಯದ ಜೊತೆಗೆ ಶಿಕ್ಷಣದ ನಂಟಿಗೂ ಒಗ್ಗಿಕೊಂಡಿದ್ದರು. ಇಂತಹ ಸೀತಾಸುರ ಜೀವನ ಮತ್ತು ಅವರು ನಡೆದು ಬಂದ ದಾರಿ ಎಲ್ಲರಿಗೂ ತಿಳಿಯಬೇಕು. ಹಾಗಾಗಿ ಅವರ ಸಾಹಿತ್ಯಗಳು ಚರ್ಚೆಗೆ ಬರಬೇಕು. ಇಲ್ಲದಿದ್ದರೆ ಸಾಹಿತ್ಯಾಸಕ್ತರಿಗೆ ಅವರ ಸಾರ ತಿಳಿಯುವುದಾದರೂ ಹೇಗೆ? ಪ್ರತಿಯೊಂದು ಕೃತಿಯ ಬಗ್ಗೆ ವ್ಯಾಪಕ ಚರ್ಚೆ ನಡೆದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ. ಇಲ್ಲದಿದ್ದರೆ ಕೇವಲ ಕೃತಿ ರಚನೆಗೊಂಡು ಬಿಡುಗಡೆಯಾಗಿ ಕಪಾಟು ಸೇರಿಬಿಡುತ್ತದೆ ಎಂದು ಹೇಳಿದರು.ಸಮಾಜದ ಅಂಕು- ಡೊಂಕುಗಳನ್ನು ತಿದ್ದುವ ಮೂಲಕ ಸೀತಾಸುತ ಅವರು ಸರಳ ಜೀವನ ನಡೆಸುತ್ತಿದ್ದರು ಎಂಬುದನ್ನು ಕೇಳಿದ್ದೇನೆ. ಇಂತಹ ಮಹನೀಯರ ಕೆಲಸವನ್ನು ನೆನೆಯಲು ವೈದ್ಯ, ಸಾಹಿತ್ಯ ಹಾಗೂ ಯೋಧರಿಗೆ ಸನ್ಮಾನ ಮಾಡಿ ಗೌರವಿಸುತ್ತಿರುವುದು ಉತ್ತಮ ಕೆಲಸ. ನಾನು ಕೂಡ ಇಂತಹ ಕಾರ್ಯಕ್ರಮಗಳು ನಡೆಯಲು ಸಹಕರಿಸುವೆ ಎಂದು ತಿಳಿಸಿದರು.
ಮಂಡ್ಯ ಜನರು ಹೃದಯವಂತರು ಎಂಬುದಕ್ಕೆ ನನಗೆ ಗೌರವ ತಂದುಕೊಡುವ ರೀತಿಯಲ್ಲಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವುದು ಶ್ಲಾಘನೀಯ. ಸೀತಾಸುತ ಅವರ ಸಾಹಿತ್ಯವನ್ನು ನಾನು ಓದಿದ್ದೇನೆ ಹಾಗೂ ಹತ್ತಿರದಿಂದ ಕಂಡಿದ್ದೇನೆ ಎಂದು ನುಡಿದರು.
ಡಾ.ವಿ.ಟಿ.ಸುಶೀಲ ಜಯರಾಮ್ ಟ್ರಸ್ಟ್‌ನವರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಮಿಮ್ಸ್‌ಗೆ 60 ಹಾಸಿಗೆಯ ಹೆರಿಗೆ ಕೊಠಡಿ ನಿರ್ಮಾಣ, ಡಯಾಲಿಸಿಸ್ ಕೇಂದ್ರಕ್ಕೆ ಉಪಕರಣಗಳನ್ನು ನೀಡಿ ಬಡಜನರ ಆರೋಗ್ಯಕ್ಕೆ ನೆರವಾಗಿದ್ದಾರೆ. ಉಳ್ಳವರು ಸಮಾಜದಲ್ಲಿ ಸೇವೆ ಮಾಡುವುದು ಕಡಿಮೆ, ಬೇರೆಯವರ ಜೀವನಕ್ಕೆ ನೆರವಾಗಲು ನಿಂತಿರುವ ಈ ಕುಟುಂಬಕ್ಕೆ ದೇವರು ಮತ್ತಷ್ಟು ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಪ್ರಶಸ್ತಿ ಪುರಸ್ಕೃತರನ್ನು ನಗರದ ಹೊಸಹಳ್ಳಿ ಬಿಸಿಲು ಮಾರಮ್ಮ ದೇವಸ್ಥಾನದ ಆವರಣದಿಂದ ಬೆಳ್ಳಿ ಸಾರೋಟಿನಲ್ಲಿ ಎತ್ತಿನಗಾಡಿ ಜೊತೆಯಲ್ಲಿ ವೇದಿಕೆ ಬಳಿ ಗೌರವದಿಂದ ಕರೆತರಲಾಯಿತು. ಭರತ ನಾಟ್ಯ ನೃತ್ಯ ವೈಭವ ಸೇರಿ ಸಾಂಸ್ಕೃತಿಕ ವಿವಿಧ ಕಾರ್ಯಕ್ರಮಗಳು ಗಮನ ಸೆಳೆದವು.