ರಾಜ್ಯಪಾಲರ ಬಗ್ಗೆ ಡಿಸೋಜಾ ಹೇಳಿಕೆ: ಕ್ರಮಕ್ಕಾಗಿ ಬಿಜೆಪಿ ದೂರು

KannadaprabhaNewsNetwork | Published : Aug 21, 2024 12:37 AM

ಸಾರಾಂಶ

ಎಂಎಲ್ಸಿ ಐವನ್ ಡಿಸೋಜಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಬೀದರ್‌ ನ್ಯೂಟೌನ್ ಠಾಣೆಗೆ ದೂರು ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ವೇಳೆ ಕರ್ನಾಟಕ ರಾಜ್ಯಪಾಲರ ವಿರುದ್ಧ ಬಾಂಗ್ಲದೇಶದ ಆದ ಹಿಂಸಾಚಾರದ ಸ್ವರೂಪದಲ್ಲಿ ದಾಳಿ ಮಾಡುವುದಾಗಿ ಬೆದರಿಕೆ, ಪ್ರಚೋದನೆ ಮತ್ತು ದೇಶದ್ರೋಹ ಹೇಳಿಕೆ ನೀಡಿರುವುದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ದೂರು ಸಲ್ಲಿಸಿದೆ.

ಈ ಕುರಿತು ಬೀದರ್‌ ನ್ಯೂಟೌನ್ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕರಿಗೆ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ರೆಡ್ಡಿ ದೂರು ಸಲ್ಲಿಸಿ, ಆ.19ರಂದು ಕಾಂಗ್ರೆಸ್ ಪಕ್ಷದ ಎಂಎಲ್ಸಿ ಐವನ್ ಡಿಸೋಜಾ ರಾಜ್ಯಪಾಲರು ರಾಜ್ಯದ ಮುಖ್ಯಮಂತ್ರಿಗಳ ವಿರುದ್ಧ ಮುಡಾ ಹಗರಣದ ತನಿಖೆಗೆ ಪ್ರಾಸಿಕ್ಯೂಷನ್‌ ಅನುಮತಿ ನೀಡಿರುವುದನ್ನು ವಿರೋಧಿಸಿ, ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಕೂಡಲೇ ರಾಜ್ಯಪಾಲರು ಹಿಂದಕ್ಕೆ ಹೋಗಬೇಕು ಮತ್ತು ಹೋಗದೇ ಇದ್ದರೇ ಯಾವ ರೀತಿ ಬಾಂಗ್ಲದೇಶದಲ್ಲಿ ಆಗಿದೆ ಅದೇ ರೀತಿ ಗೌರ್ನರ್ ಆಫೀಸ್‌, ಮನೆಗೆ ನುಗ್ಗುವಂತಹ ಕೆಲಸ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಾಗುತ್ತದೆ, ಅದು ಮಾಡಿಯೇ ಮಾಡುತ್ತೇವೆ ಎಂದಿದ್ದಾರೆ.

ಮಾನ ಮರ್ಯಾದೆ ಇದ್ದರೆ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಬೇಕು ಮತ್ತು ಅವರು ರಾಜ್ಯ ಬಿಟ್ಟು ತೊಲಗಬೇಕು, ಇಲ್ಲದಿದ್ದರೆ, ರಾಜಭವನ ನುಗ್ಗುವುದು ಖಂಡಿತ, ರಾಜಭವನದಲ್ಲಿ ಏನಾದರೂ ಆದರೇ ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರ ನೇರ ಹೊಣೆ ಎಂದು ಕಾನೂನು ಸುವವ್ಯಸ್ಥೆಗೆ ಧಕ್ಕೆ ತರುವ ಉದ್ದೇಶದಿಂದ ಬೆದರಿಕೆ, ಪ್ರಚೋದನೆ ಮತ್ತು ದೇಶದ್ರೋಹ ಹೇಳಿಕೆ ನೀಡಿರುತ್ತಾರೆ ಎಂದು ತಿಳಿಸಿದ್ದಾರೆ.

ಈ ರೀತಿ ರಾಷ್ಟ್ರ ವಿರೋಧಿ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ದುರುದ್ದೇಶದಿಂದ ತಮ್ಮ ಕಾರ್ಯಕರ್ತರಿಗೆ ಪ್ರಚೋದನೆ ನೀಡುವ ಹೇಳಿಕೆ ನೀಡಿರುವ ಎಂಎಲ್ಸಿ ಹಾಗೂ ಕಾಂಗ್ರೆಸ್ ನಾಯಕ ಐವನ್ ಡಿಸೋಜಾ ವಿರುದ್ಧ ಸೂಕ್ತ ಪ್ರಕರಣ ದಾಖಲಿಸಿಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.

ಈ ವೇಳೆ ಬೀದರ್‌ ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ, ಸಂತೋಷ್ ರೆಡ್ಡಿ ಆಣದೂರ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವೀರೇಶ ಸ್ವಾಮಿ, ರಮೇಶ ಕಲ್ಲೂರ, ನಗರ ಯುವ ಮೋರ್ಚಾ ಅಧ್ಯಕ ಸಂದೀಪ್ ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪಕಕುಮಾರ ಜಾಧವ, ಬಸವ ಮೂಲಗೆ ಹಾಗೂ ಯುವ ಮೋರ್ಚಾ ಪದಾಧಿಕಾರಿಗಳಾದ ಸಾಯಿನಾಥ್ ಪಾಟೀಲ್, ಶಿವು ಸುಲ್ತಾನಪುರೆ, ಗುರು ಪಾಂಪಡೆ, ಅರವಿಂದ್ ಬುಳ್ಳಾ, ಶರಣು ಬಿರಾದಾರ್, ಬಾಲಾಜಿ ಪಾಟೀಲ್ ನಾವದಗೇರಿ, ಸಂದೀಪ್ ಪರ್ಗೆ , ಕೃಷ್ಣ ಉಪ್ಪಾರ, ಅಜಯ ಹಮಜಿ, ಆಕಾಶ ರಾಜಗೀರಾ, ವೆಂಕಟ್ ಆಣದೊರೆ ಹಾಗೂ ಇನ್ನಿತರ ಯುವ ಮೋರ್ಚಾ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

Share this article