ದಾಬಸ್‌ಪೇಟೆ: ನಿರಂತರ ಜಿಟಿ ಜಿಟಿ ಮಳೆಗೆ ಜನಜೀವನ ಅಸ್ತವ್ಯಸ್ತ

KannadaprabhaNewsNetwork |  
Published : Oct 16, 2024, 12:33 AM ISTUpdated : Oct 16, 2024, 12:34 AM IST
ಪೋಟೋ 5 : ದಾಬಸ್‌ಪೇಟೆ ಪಟ್ಟಣದಲ್ಲಿ ಮಳೆಯಿಂದಾಗಿ ಛತ್ರಿ ಹಿಡಿದುಕೊಂಡು ಸಾರ್ವಜನಿಕರು ಸಂಚರಿಸುತ್ತಿರುವುದು | Kannada Prabha

ಸಾರಾಂಶ

ಮಳೆಯಿಂದಾಗಿ ಹೋಬಳಿಯ ವಿವಿಧ ಹಳ್ಳಿಗಳ ರಸ್ತೆಗಳು ಅರ್ಧಂಬರ್ಧ ನಡೆದ ಕಾಮಗಾರಿ ಹಾಗೂ ಎಲ್ಲೆಂದರಲ್ಲಿ ಅಗೆದ ಹಳ್ಳಗಳಿಂದ ಕೆಸರು ಗದ್ದೆಯಂತಾಗಿವೆ. ರಸ್ತೆ ಕಾಮಗಾರಿ ಸರಿಯಾಗಿ ನಿರ್ವಹಿಸದ ಅಧಿಕಾರಿಗಳ ವಿರುದ್ಧ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತದಿಂದ ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ಜಿಟಿಜಿಟಿಯಾಗಿ ಶುರುವಾದ ಮಳೆ ಮುಂದುವರೆದಿದೆ. ಚಳಿ ಜತೆಗೆ ಮಳೆಯೂ ಆಗುತ್ತಿರುವುದರಿಂದ ಜನ ಮನೆ ಬಿಟ್ಟು ಹೊರಬರದಂತಾಗಿದೆ. ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ವಾಹನ ಸವಾರರು ಹೈರಾಣಾಗಿದ್ದು, ಬೀದಿ ಬದಿ ವ್ಯಾಪಾರಸ್ಥರು ಮಳೆಯಿಂದಾಗಿ ತೀವ್ರ ನಷ್ಟ ಅನುಭವಿಸುವಂತಾಗಿದೆ.

ಸಾರ್ವಜನಿಕರು ಹೈರಾಣ:

ಪಟ್ಟಣದಲ್ಲಿ ಮಳೆಯಿಂದ ರಸ್ತೆಗಳಲ್ಲಿ ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಸಾಮಾನವಾಗಿತ್ತು, ಉತ್ತಮ ಮಳೆಯಾಗದಿದ್ದರೂ ತುಂತುರು ಮಳೆಯಿಂದಾಗಿ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ದಿನನಿತ್ಯದ ಕಾರ್ಯಗಳನ್ನು ನಡೆಸಲು ಅಡಚಣೆ ಉಂಟಾಗಿತ್ತು. ಕೊಂಚವೂ ಬಿಡುವಿಲ್ಲದಂತೆ ಸುರಿಯುತ್ತಿರುವ ಮಳೆಯ ಕಾರಣ ಸಾರ್ವಜನಿಕರು ಹೈರಾಣಾಗಿದ್ದಾರೆ.

ಮಳೆಯಲ್ಲಿಯೇ ವ್ಯಾಪಾರ: ಬೆಳಗ್ಗೆಯಿಂದಲೇ ಆರಂಭಗೊಂಡ ಜಿಟಿ ಜಿಟಿ ಮಳೆಯಿಂದ ಕೆಲಸಕ್ಕೆ ತೆರಳುವವರಿಗೆ ಹಾಗೂ ಶಾಲಾ- ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನಾನುಕೂಲ ಉಂಟಾಗಿ ಛತ್ರಿ ಹಿಡಿದು ಓಡಾಡಬೇಕಾಯಿತು. ಸಂತೆ ಮಾರುಕಟ್ಟೆ, ಉದ್ದಾನೇಶ್ವರ ವೃತ್ತ, ಶಿವಗಂಗೆ ವೃತ್ತದಲ್ಲಿ ವ್ಯಾಪಾರಸ್ಥರು ಹಾಗೂ ರೈತರ ವ್ಯಾಪಾರ ವಹಿವಾಟಿಗೆ ತೊಂದರೆ ಉಂಟಾಯಿತಲ್ಲದೆ ಬೀದಿ ಬದಿಯ ವ್ಯಾಪಾರಿಗಳು ಮಳೆಯಲ್ಲಿಯೇ ನೆನೆದು ವ್ಯಾಪಾರ ಮಾಡಬೇಕಾಯಿತು.

ವಾಹನ ಸವಾರರ ಆಕ್ರೋಶ:

ಮಳೆಯಿಂದಾಗಿ ಹೋಬಳಿಯ ವಿವಿಧ ಹಳ್ಳಿಗಳ ರಸ್ತೆಗಳು ಅರ್ಧಂಬರ್ಧ ನಡೆದ ಕಾಮಗಾರಿ ಹಾಗೂ ಎಲ್ಲೆಂದರಲ್ಲಿ ಅಗೆದ ಹಳ್ಳಗಳಿಂದ ಕೆಸರು ಗದ್ದೆಯಂತಾಗಿವೆ. ರಸ್ತೆ ಕಾಮಗಾರಿ ಸರಿಯಾಗಿ ನಿರ್ವಹಿಸದ ಅಧಿಕಾರಿಗಳ ವಿರುದ್ಧ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ರಾಗಿ ಬೆಳೆ ನಾಶದ ಆತಂಕ:

ರೈತರು ಹೋಬಳಿಯಾದ್ಯಂತ ರಾಗಿ, ಭತ್ತ, ಮೆಕ್ಕೆಜೋಳ, ತೊಗರಿ, ಅಲಸಂದೆ ಮುಂತಾದ ಬೆಳೆಗಳನ್ನು ಬೆಳೆದಿದ್ದು, ಈಗಾಗಲೇ ಕೆಲವೆಡೆ ರಾಗಿ ಬೆಳೆಯೂ ಚೆನ್ನಾಗಿ ಬೆಳೆದಿರುವ ಪರಿಣಾಮ ಮಳೆಯಿಂದಾಗಿ ರಾಗಿ ತೆನೆ ನೆಲಕ್ಕಚ್ಚಿದರೆ ರಾಗಿ ನಾಶವಾಗುವ ಸಂಭವವಿದ್ದು, ಇದರಿಂದಾಗಿ ರೈತರು ಆತಂಕದಲ್ಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಟುಂಬ ಹಾಳು ಮಾಡುತ್ತಿರುವ ಪ್ರೇಮಿಗಳ ದಿನ
ರಾಜಕೀಯ ಬದುಕಿಗೆ ಜನ್ಮ ನೀಡಿದ್ದು ಗ್ರಾಮೀಣ ಕ್ಷೇತ್ರ