ವಿಧಾನಸಭೆಯಲ್ಲೂ ದಡ್ಡಲಕಾಡು ಶಾಲೆ ಗದ್ದಲ: ದತ್ತು ಸ್ವೀಕಾರ ಒಪ್ಪಂದ ನವೀಕರಣಕ್ಕೆ ಶಾಸಕ ರಾಜೇಶ್‌ ನಾಯ್ಕ್‌ ಒತ್ತಾಯ

KannadaprabhaNewsNetwork | Published : Mar 21, 2025 12:36 AM

ಸಾರಾಂಶ

ಮೂಡನಡುಗೋಡು ಗ್ರಾಮದ ದಡ್ಡಲಕಾಡು ಸರ್ಕಾರಿ ಹಿ.ಪ್ರಾ.ಶಾಲೆಯ ದತ್ತು ಸ್ವೀಕಾರ ಒಪ್ಪಂದ ನವೀಕರಣ ವಿವಾದ ಇದೀಗ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದು, ಬುಧವಾರ ವಿಧಾನಸಭಾ ಅಧಿವೇಶನದಲ್ಲೂ ಪ್ರಸ್ತಾಪವಾಗಿದೆ. ಶಾಸಕ ರಾಜೇಶ್ ನಾಯ್ಕ್ ಈ ಕುರಿತು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ತಾಲೂಕಿನ ಮೂಡನಡುಗೋಡು ಗ್ರಾಮದ ದಡ್ಡಲಕಾಡು ಸರ್ಕಾರಿ ಹಿ.ಪ್ರಾ.ಶಾಲೆಯ ದತ್ತು ಸ್ವೀಕಾರ ಒಪ್ಪಂದ ನವೀಕರಣ ವಿವಾದ ಇದೀಗ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದು, ಬುಧವಾರ ವಿಧಾನಸಭಾ ಅಧಿವೇಶನದಲ್ಲೂ ಪ್ರಸ್ತಾಪವಾಗಿದೆ.

1976ರಲ್ಲಿ ಸ್ಥಾಪನೆಯಾದ ಏಕೋಪಾಧ್ಯಾಯ ಶಾಲೆಯಾಗಿ ಆರಂಭಗೊಂಡ ಈ ಶಾಲೆಯಲ್ಲಿ ಕ್ರಮೇಣ 28 ವಿದ್ಯಾರ್ಥಿಗಳಿದ್ದು, ಇಬ್ಬರು ಶಿಕ್ಷಕಿಯರನ್ನು ಹೊಂದಿತ್ತು ಮುಂದುವರಿದು ಈ ಸರ್ಕಾರಿ ಶಾಲೆ ಮುಚ್ಚುವ ಹಂತಕ್ಕೆ ತಲುಪಿದಾಗ ಇಲ್ಲಿನ ಹಳೆ ವಿದ್ಯಾರ್ಥಿಗಳು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ದತ್ತು ಸ್ವೀಕರಿಸಿತ್ತು. ತಮ್ಮ ಮಕ್ಕಳನ್ನೇ ಈ ಶಾಲೆಗೆ ಸೇರ್ಪಡೆಗೊಳಿಸಿ ಮಾದರಿಯಾಗಿದ್ದರು.

2 ಕೋಟಿ ರು. ವೆಚ್ಚದಲ್ಲಿ ಕಟ್ಟಡ ನಿರ್ಮಾಣ:

ಬಳಿಕ ಈ ಶಾಲೆ ಹಂತ,ಹಂತವಾಗಿ ಅಭಿವೃದ್ಧಿಯನ್ನು ಕಂಡಿತು. ಸುಮಾರು 2 ಕೋಟಿ ರು. ಚ್ಚದಲ್ಲಿ ಸರ್ಕಾರದ ಹಾಗೂ ಸಿಎಸ್ಆರ್ ನಿಧಿ ಬಳಸಿಕೊಂಡು ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಶಾಲಾ ಮಕ್ಕಳಿಗೆ ವಾಹನ ಸೇರಿದಂತೆ ಪ್ರಸ್ತುತ ಸಕಲ ವ್ಯವಸ್ಥೆಯನ್ನು ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಂದಿದೆ.

ವಿಧಾನಸಭೆಯಲ್ಲಿ ಪ್ರಸ್ತಾಪ:

ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಮತ್ತು ಅಭಿವೃದ್ಧಿಗೂ ಅನುದಾನವನ್ನು ಸರ್ಕಾರ ನೀಡದಿ ದ್ದರೂ, ವಿದ್ಯಾಭಿಮಾನಿಗಳು ಸಹಿತ ದಾನಿಗಳ ನೆರವು ಪಡೆದು ಖಾಸಗಿ ಶಾಲೆಯನ್ನು ಮೀರಿಸುವ ರೀತಿಯಲ್ಲಿ ಈ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲಾಗಿದೆ. 2024 ರಲ್ಲಿ ಈ ಶಾಲೆ ದತ್ತು ಸ್ವೀಕಾರ ಒಪ್ಪಂದದ ಅವಧಿ ಮುಕ್ತಾಯವಾಗಿದ್ದು, ಶಿಕ್ಷಣ ಇಲಾಖೆ ಇದರ ನವೀಕರ ಣಕ್ಕೆ ಅನಗತ್ಯವಾಗಿ ವಿಳಂಬ ಮಾಡುತ್ತಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ವಿಧಾನಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಸಾವಿರಕ್ಕೂ ಅಧಿಕ‌ ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆಯ ಬಗ್ಗೆ ಕೆಲ ಸ್ಥಾಪಿತ ಹಿತಾಸಕ್ತಿಗಳು ಅವ್ಯವಹಾರ ಸಹಿತ ವಿವಿಧ ಆಪಾದನೆಗಳ ಮಾಡಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಶಾಲಾ ಟ್ರಸ್ಟ್ ಅದ್ಯಾವ ರೀತಿ ಅವ್ಯವಹಾರ ನಡೆಸಲು ಸಾಧ್ಯ ಎಂಬುದೇ ಅಚ್ಚರಿಯ ಸಂಗತಿಯಾಗಿದೆ. ಆದರೂ ಈ ಬಗ್ಗೆ ಡಿಡಿಪಿಐ ಅವರ ನೇತೃತ್ವದ ತಂಡ ತನಿಖೆ ನಡೆಸಿದ್ದು, ಈ ಆರೋಪದಲ್ಲಿ ಹುರುಳಿಲ್ಲ, ಯಾವುದೇ ಅವ್ಯವಹಾರ ಆಗಿಲ್ಲ ಎಂಬ ವರದಿ ನೀಡಿರುವ ಬಗ್ಗೆ ಮಾಹಿತಿ ಇದೆ ಎಂದ ಶಾಸಕರು, ದತ್ತು ಸ್ವೀಕಾರ ಒಪ್ಪಂದವನ್ನು ತಕ್ಷಣ ನವೀಕರಣಗೊಳಿಸಲು ಆಗ್ರಹಿಸಿದರು.

ಮುಚ್ಚುವ ಹಂತದಲ್ಲಿದ್ದ ದಡ್ಡಲಕಾಡು ಸರ್ಕಾರಿ ಶಾಲೆಯು ಪ್ರಸ್ತುತ ಯಾವ ರೀತಿ ಇದೆ ಎಂಬುದನ್ನು ಪರಿಶೀಲಿಸಲು ಸದನ ಸಮಿತಿ ರಚಿಸುವಂತೆ ಶಾಸಕ ರಾಜೇಶ್ ನ್ಯಾಕ್ ಆಗ್ರಹಿಸಿದರು.

ಆಯುಕ್ತರ ನಿರ್ದೇಶನದಂತೆ ಕ್ರಮ - ಬಿಇಒ:

ದಡ್ಡಲಕಾಡು ಸರ್ಕಾರಿ ಶಾಲೆ ಪ್ರಸ್ತುತ ಪಿಎಂಶ್ರೀ ಶಾಲೆಯಾಗಿ ಪರಿವರ್ತನೆಯಾಗಿದೆ. ಸದ್ರಿ ವಿಚಾರಗಳ ಸಹಿತ ಟ್ರಸ್ಟ್‌ ನ ಬೇಡಿಕೆಯನ್ನೂ ಇಲಾಖಾ ಆಯುಕ್ತರಿಗೆ ಲಿಖಿತ ರೂಪದಲ್ಲಿ ಕಳುಹಿಸಿಕೊಟ್ಟಿದ್ದೇವೆ. ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳುವುದಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ,

Share this article