ಸಾರ್ವಜನಿಕರಿಗೆ ನಿತ್ಯ ಸಂಕಷ್ಟ: ಮುನಿಯಾಲು ಉದಯಕುಮಾರ್ ಶೆಟ್ಟಿ

KannadaprabhaNewsNetwork |  
Published : Jul 19, 2026, 04:00 AM IST
 ಜಾಗೃತಿ  | Kannada Prabha

ಸಾರಾಂಶ

ಪುರಸಭೆ ವ್ಯಾಪ್ತಿಯ ಹೊಂಡಗುಂಡಿಗಳಿಂದ ಕೂಡಿರುವ ರಸ್ತೆಗಳನ್ನು ಪರಿಶೀಲಿಸಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಸುಮಾರು 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ರಸ್ತೆ ಪರಿಶೀಲನಾ ಜಾಥಾ ನಡೆಸಲಾಯಿತು.

ಕಾರ್ಕಳ: ಪುರಸಭೆ ವ್ಯಾಪ್ತಿಯ ಹೊಂಡಗುಂಡಿಗಳಿಂದ ಕೂಡಿರುವ ರಸ್ತೆಗಳನ್ನು ಪರಿಶೀಲಿಸಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಸುಮಾರು 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ರಸ್ತೆ ಪರಿಶೀಲನಾ ಜಾಥಾ ನಡೆಸಲಾಯಿತು.

ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ, ಕಾರ್ಕಳದ ಪ್ರಮುಖ ರಸ್ತೆಗಳು ಹಾಳಾಗಿದ್ದು, ಸಾರ್ವಜನಿಕರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕಾರ್ಕಳದ ರಸ್ತೆಗಳ ಸ್ಥಿತಿಗತಿ ಕುರಿತು ಮಾಹಿತಿ ನೀಡುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಈ ಪರಿಶೀಲನಾ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.22 ವರ್ಷಗಳಿಂದ ಬಿಜೆಪಿ ಶಾಸಕರ ಪ್ರತಿನಿಧಿತ್ವವಿದ್ದರೂ ಕಾರ್ಕಳದಲ್ಲಿ ರಸ್ತೆ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿ ಕಡೆಗಣಿಸಲಾಗಿದೆ ಎಂದು ಆರೋಪಿಸಿದ ಅವರು, ‘ಸ್ವಚ್ಛ ಕಾರ್ಕಳ, ಸ್ವರ್ಣ ಕಾರ್ಕಳ’ ಎಂಬ ಘೋಷಣೆಗಳು ಭಾಷಣಕ್ಕೆ ಮಾತ್ರ ಸೀಮಿತವಾಗಿದ್ದು, ವಾಸ್ತವ ಪರಿಸ್ಥಿತಿ ಭಿನ್ನವಾಗಿದೆ ಎಂದು ಟೀಕಿಸಿದರು. ತಾಲೂಕು ಕಚೇರಿ ಆವರಣವೇ ಮಳೆ ನೀರಿನಿಂದ ತುಂಬಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಅಭಿವೃದ್ಧಿಯ ನೈಜ ಸ್ಥಿತಿಯನ್ನು ತೋರಿಸುತ್ತದೆ ಎಂದರು.ರಾಜ್ಯ ಕಾಂಗ್ರೆಸ್ ಸರ್ಕಾರ ಕಾರ್ಕಳದ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಲು ಸಿದ್ಧವಿದ್ದರೂ, ಅದನ್ನು ಸಮರ್ಪಕವಾಗಿ ಬಳಸಲು ಅವಕಾಶ ನೀಡಲಾಗುತ್ತಿಲ್ಲ ಎಂದು ಆರೋಪಿಸಿದ ಅವರು, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ದೊರೆಯುವ ಅನುದಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕಾರ್ಕಳವನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಮಾತನಾಡಿ, ನಗರದ ವಾಸ್ತವ ಸ್ಥಿತಿಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಕಾಂಗ್ರೆಸ್ ಈ ಜಾಥಾವನ್ನು ಹಮ್ಮಿಕೊಂಡಿದೆ. ಹೊಂಡಗುಂಡಿಗಳಿರುವ ರಸ್ತೆಗಳ ಕುರಿತು ವಾಹನ ಜಾಥಾದ ಮೂಲಕ ಸಮೀಕ್ಷೆ ನಡೆಸಿ, ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಕಚೇರಿಯಿಂದ ಆರಂಭವಾದ ಜಾಥಾ ಕಲ್ಲೊಟ್ಟೆ, ಎಲ್ ಮಾರ್ಕೆಟ್ ರಸ್ತೆ, ತೆಳ್ಳಾರು ರಸ್ತೆ, ಗ್ಯಾಸ್ ಗೊಡೌನ್ ರಸ್ತೆ, ಬೈಪಾಸ್ ಸೇರಿದಂತೆ ಪುರಸಭೆಯ 23 ವಾರ್ಡ್‌ಗಳ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಬಳಿಕ ಗಾಂಧಿ ಮೈದಾನದ ಮೂಲಕ ಮತ್ತೆ ಕಾಂಗ್ರೆಸ್ ಕಚೇರಿಯಲ್ಲಿ ಸಮಾಪ್ತಿಯಾಯಿತು.ಪ್ರತಿಭಟನೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ, ಹೆಬ್ರಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರ್ ಮಡಿವಾಳ, ಕಾಂಗ್ರೆಸ್ ಮುಖಂಡರಾದ ಸಂದೀಪ್ ಶೆಟ್ಟಿ, ಭಾನುಪ್ರಕಾಶ್ ಕಾಂತಿ ಶೆಟ್ಟಿ, ಸುಭೀತ್ ಎನ್.ಆರ್. ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಲಮಟ್ಟಿಯಿಂದ ನಾರಾಯಣಪುರ ಜಲಾಶಯಕ್ಕೆ ನೀರು ಬಿಡುಗಡೆ
ಚೆನ್ನಮ್ಮ ದೇವೇಗೌಡ ನಿಧನಕ್ಕೆ ಸಂಸದ ಗದ್ದಿಗೌಡರ ಸಂತಾಪ