ಕೋಲಾರ: ವೇಮಗಲ್- ನರಸಾಪುರ ಭಾಗದ ಎರಡು ಪದವಿ ಪೂರ್ವ ಕಾಲೇಜುಗಳ ಸುಮಾರು ೪೦೦ ವಿದ್ಯಾರ್ಥಿಗಳಿಗೆ ಸಾಯಿ ಆಶ್ರಯ ಸಂಸ್ಥೆಯಿಂದ ಪ್ರತಿನಿತ್ಯ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಶಾಸಕ ಕೊತ್ತೂರು ಮಂಜುನಾಥ್ ಮುತುವರ್ಜಿಯಿಂದ ಕಲ್ಪಿಸಲಾಗಿದೆ. ದೂರದ ಊರುಗಳಿಂದ ಕಾಲೇಜಿಗೆ ಆಗಮಿಸುವ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಊಟದ ವ್ಯವಸ್ಥೆ ಕಲ್ಪಿಸುವಂತೆ ಕಾಲೇಜು ಆಡಳಿತ ಮಂಡಳಿ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಮನವಿ ಮಾಡಿದ್ದವು. ಮನವಿಗೆ ಸ್ಪಂದಿಸಿದ ಶಾಸಕರು ಸಾಯಿ ಆಶ್ರಯ ಸಂಸ್ಥೆಯೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಊಟ ನೀಡುವಂತೆ ವ್ಯವಸ್ಥೆ ಮಾಡಿದರು. ಅದರಂತೆ ಸೋಮವಾರ ವೇಮಗಲ್ ಕಾಲೇಜಿನಲ್ಲಿ ಕಾಂಗ್ರೆಸ್ ಮುಖಂಡರು ವಿದ್ಯಾರ್ಥಿಗಳಿಗೆ ಊಟ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಶ್ರಯ ಸಮಿತಿ ಸದಸ್ಯ ಪೆರ್ಜೇನಹಳ್ಳಿ ನಾಗೇಶ್ , ವೇಮಗಲ್-ನರಸಾಪುರ ಪ್ರಾಧಿಕಾರದ ಸದಸ್ಯ ಬಿ.ನಾಗರಾಜ್, ಉಪನ್ಯಾಸಕ ಟಿ.ಕೆ.ನಟರಾಜ್, ಉಪಪ್ರಾಂಶುಪಾಲ ರಮೇಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ತಾಸು ಖಾನ್, ಗಂಗಪ್ಪ, ಸನಾವುಲ್ಲ ಖಾನ್, ತಿರುಮಳಪ್ಪ, ವಿ.ಪಿ.ರವಿಕುಮಾರ್, ಮುಖಂಡರಾದ ಮೆಡಿಕಲ್ ಮುನಿರಾಜ್, ಮಂಜುನಾಥ್, ಶಶಿಕುಮಾರ್, ಚಂದ್ರು, ಚೌಡರೆಡ್ಡಿ, ಜಮೀರ್ ಇದ್ದರು.