;Resize=(412,232))
ಮಂಡ್ಯ: ನಗರದ ಗುತ್ತಲು ಬಡಾವಣೆಯ ಭಿಕ್ಷುಕಿಯೊಬ್ಬಳು ಕಳೆದ ಬುಧವಾರ ಮೃತಪಟ್ಟಿದ್ದು, ಭಿಕ್ಷಾಟನೆಯಿಂದಲೇ ಸಂಪಾದನೆ ಮಾಡಿದ್ದ 8.40 ಲಕ್ಷ ರೂ.ಆಕೆಯ ಮನೆಯಲ್ಲಿ ತಡವಾಗಿ ಪತ್ತೆಯಾಗಿದೆ.
ನಗರದ ಗುತ್ತಲು ಬಡಾವಣೆಯ ಸಬ್ದರಿಯಾ ಮೊಹಲ್ಲಾದ ನಿವಾಸಿ ಹೂರ್ (70) ಎಂಬಾಕೆಯೇ ಮೃತ ಭಿಕ್ಷುಕಿ. ಈಕೆ ಚಿಕ್ಕಂದಿನಿಂದಲೂ ಭಿಕ್ಷೆ ಬೇಡಿಯೇ ಜೀವನ ನಡೆಸುತ್ತಿದ್ದರು. ಈಕೆಯ ಸಹೋದರರು ಬೆಂಗಳೂರಿಗೆ ವಲಸೆ ಹೋಗಿದ್ದು, ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದರು. ಈಕೆ ಒಬ್ಬಳೇ ಮನೆಯಲ್ಲಿ ವಾಸವಾಗಿದ್ದು, ಭಿಕ್ಷೆ ಬೇಡಿಯೇ ಜೀವನ ನಡೆಸುತ್ತಿದ್ದಳು.
ಕಳೆದ ಬುಧವಾರ ವಯೋಸಹಜ ಖಾಯಿಲೆಯಿಂದ ಆಕೆ ಮನೆಯಲ್ಲೇ ಸಾವನ್ನಪ್ಪಿದ್ದಾಳೆ. ಬೆಳಗ್ಗೆ ತುಂಬಾ ಹೊತ್ತಾದರೂ ಈಕೆ ಬಾಗಿಲು ತೆರೆಯದಿರುವುದನ್ನು ಕಂಡ ಅಕ್ಕ-ಪಕ್ಕದ ನಿವಾಸಿಗಳು ಬಾಗಿಲು ಒಡೆದು ನೋಡಿದಾಗ, ಈಕೆ ಸಾವನ್ನಪ್ಪಿರುವುದು ತಿಳಿದು ಬಂತು. ಬೆಂಗಳೂರಿನಲ್ಲಿ ವಾಸವಾಗಿದ್ದ ಆಕೆಯ ಸಹೋದರ ಫಾಜೀಲ್ ಗೆ ಸುದ್ದಿ ಮುಟ್ಟಿಸಿದ್ದರು.
ಅವರ ಮಕ್ಕಳು, ಕುಟುಂಬದವರು ಬಂದು ಮೃತದೇಹದ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದರು. ನಂತರ, ಕುಟುಂಬದವರು ಮನೆಯಲ್ಲಿ ಪರಿಶೀಲನೆ ನಡೆಸಿದ ವೇಳೆ ಚೀಲಗಳಲ್ಲಿ ಚಿಲ್ಲರೆ ಹಣ ಹಾಗೂ ನೋಟಿನ ಕಂತೆಗಳನ್ನು ಕಟ್ಟಿ ಇಟ್ಟಿರುವುದು ಬೆಳಕಿಗೆ ಬಂದಿದೆ. ಎಲ್ಲ ಹಣವನ್ನು ಲೆಕ್ಕ ಮಾಡಿದಾಗ 8.40 ಲಕ್ಷ ರೂ.ಪತ್ತೆಯಾಗಿದೆ.
ಬಡಾವಣೆಯ ಹಿರಿಯರ ಸಲಹೆಯಂತೆ ಹಣವನ್ನು ಆಕೆಯ ಸಹೋದರರ ಎರಡೂ ಕುಟುಂಬಗಳಿಗೆ ಸಮನಾಗಿ ಹಂಚಿಕೆ ಮಾಡಲಾಯಿತು.