ಮಂಡ್ಯದಲ್ಲಿ ಬೆಲ್ಲ ಕ್ವಿಂಟಾಲ್‌ಗೆ ₹6740ಗೆ ಹರಾಜು: ಐತಿಹಾಸಿಕ ದಾಖಲೆ

Published : Aug 23, 2026, 12:31 PM IST
jaggery

ಸಾರಾಂಶ

ಕಬ್ಬಿನ ಪೂರೈಕೆ ಕೊರತೆ, ಕೂಲಿಯಾಳುಗಳ ಅಭಾವ, ಸಕ್ಕರೆ ಬೆಲೆ ಏರಿಕೆಯಿಂದಾಗಿ ಬೆಲ್ಲದ ಉತ್ಪಾದನೆ ಕುಸಿತ ಕಂಡಿದ್ದು ಪರಿಣಾಮ ಕ್ವಿಂಟಾಲ್‌ ಬೆಲ್ಲದ ದರ ₹6500- 6740 ರು.ಗೆ ಏರಿಕೆಯಾಗಿದೆ. ಈ ಮೂಲಕ ಹಿಂದೆಂದೂ ಕಾಣದಷ್ಟು ಐತಿಹಾಸಿಕ ದಾಖಲೆ ಬೆಲೆಯನ್ನು ಕಂಡಿದೆ.

ಮಂಡ್ಯ ಮಂಜುನಾಥ

 ಮಂಡ್ಯ : ಕಬ್ಬಿನ ಪೂರೈಕೆ ಕೊರತೆ, ಕೂಲಿಯಾಳುಗಳ ಅಭಾವ, ಸಕ್ಕರೆ ಬೆಲೆ ಏರಿಕೆಯಿಂದಾಗಿ ಬೆಲ್ಲದ ಉತ್ಪಾದನೆ ಕುಸಿತ ಕಂಡಿದ್ದು ಪರಿಣಾಮ ಕ್ವಿಂಟಾಲ್‌ ಬೆಲ್ಲದ ದರ ₹6500- 6740 ರು.ಗೆ ಏರಿಕೆಯಾಗಿದೆ. ಈ ಮೂಲಕ ಹಿಂದೆಂದೂ ಕಾಣದಷ್ಟು ಐತಿಹಾಸಿಕ ದಾಖಲೆ ಬೆಲೆಯನ್ನು ಕಂಡಿದೆ.

ಪ್ರತಿ ಕ್ವಿಂಟಾಲ್ ಬೆಲ್ಲದ ಬೆಲೆ ಸಾಮಾನ್ಯವಾಗಿ ₹4,500 ರಿಂದ ₹4700 ರವರೆಗೆ ಇರುತ್ತಿತ್ತು. ಆದರೆ, ಮಂಡ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಬೆಲ್ಲದ ಬೆಲೆ ₹6500 ರಿಂದ ₹6740ಕ್ಕೆ ಏರಿಕೆಯಾಗಿದೆ. ಕುರಿಕಾಲಚ್ಚು ಬೆಲ್ಲ ಪ್ರತಿ ಕ್ವಿಂಟಾಲ್‌ಗೆ ₹5500 ನಿಂದ ₹6000 ವರೆಗೆ ಇದ್ದರೆ, ಅಚ್ಚು ಬೆಲ್ಲ ಕ್ವಿಂಟಾಲ್‌ಗೆ ₹5300 ನಿಂದ ₹5800 ವರೆಗೆ ಮಾರಾಟವಾಗುತ್ತಿದೆ. ಮೊದಲು ಮಂಡ್ಯ ಬೆಲ್ಲದ ಮಾರುಕಟ್ಟೆಯಿಂದ ನಿತ್ಯ 10 ರಿಂದ 12 ಲಾರಿಗಳಲ್ಲಿ ಬೆಲ್ಲ ಹೊರ ರಾಜ್ಯಗಳಿಗೆ ಸಾಗಣೆಯಾಗುತ್ತಿತ್ತು. ಆದರೆ, ಈಗ ಅರ್ಧದಷ್ಟು ಬೆಲ್ಲವೂ ಸಾಗಣೆಯಾಗದಿರುವುದರಿಂದ ಬೆಲ್ಲದ ಬೆಲೆ ದುಬಾರಿಯಾಗುವುದಕ್ಕೆ ಕಾರಣವಾಗಿದೆ.

ಕಬ್ಬಿನ ಪೂರೈಕೆ ಕೊರತೆ:

ಕೂಲಿಯಾಳುಗಳ ಕೊರತೆ ಪರಿಣಾಮ ಜಿಲ್ಲೆಯಲ್ಲಿರುವ ಆಲೆಮನೆಗಳಿಗೆ ಕಬ್ಬಿನ ಪೂರೈಕೆ ಕೊರತೆ ಎದುರಾಗಿದೆ. ಸ್ಥಳೀಯವಾಗಿ ಕಬ್ಬು ಕಡಿಯುವುದಕ್ಕೆ ಜನರಿಲ್ಲ. ಉತ್ತರ ಕರ್ನಾಟಕ ಅಥವಾ ಹೊರರಾಜ್ಯಗಳಿಂದ ಕೂಲಿಯಾಳುಗಳನ್ನು ಕರೆ ತರಬೇಕಿದೆ. ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಕಬ್ಬು ಆಲೆಮನೆಗಳಿಗೆ ಪೂರೈಕೆಯಾಗದಿರುವುದು ಬೆಲ್ಲ ಉತ್ಪಾದನೆ ಕುಸಿತಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದರ ಜತೆಗೆ ಆಲೆಮನೆಗಳಿಗೆ ಬೆಲ್ಲ ತಯಾರು ಮಾಡುವ ಕೂಲಿಯಾಳುಗಳು ಸಿಗುತ್ತಿಲ್ಲ. ಬಿಹಾರದಿಂದ ಕೆಲಸಕ್ಕೆ ಬರುತ್ತಿದ್ದರು. ಈಗ ಅವರ ಸಂಖ್ಯೆಯೂ ಕಡಿಮೆಯಾಗಿದೆ ಎನ್ನಲಾಗಿದೆ. ಇದರಿಂದ ಹಲವು ಆಲೆಮನೆಗಳು ಸ್ಥಗಿತಗೊಂಡಿವೆ ಎನ್ನಲಾಗುತ್ತಿದೆ.

ಸಕ್ಕರೆ ಬೆಲೆ ಹೆಚ್ಚಳ:

ಸಕ್ಕರೆ ಬೆಲೆ ಹೆಚ್ಚಳವಾಗಿರುವುದು ಕೂಡ ಬೆಲ್ಲ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಹಿಂದೆ ಸಕ್ಕರೆ ಬೆಲೆ ಪ್ರತಿ ಕೆಜಿಗೆ ₹40 ರಿಂದ ₹42ರ ವರೆಗೆ ಇತ್ತು. ಈಗ ₹68 ರಿಂದ ₹72ರ ವರೆಗೆ ಏರಿಕೆಯಾಗಿದೆ. ಸಕ್ಕರೆ ಹಾಕಿ ಬೆಲ್ಲ ತಯಾರಿಸುವವರ ಸಂಖ್ಯೆ ಹೆಚ್ಚಾಗಿದ್ದು, ಸಕ್ಕರೆ ಬೆಲೆ ಹೆಚ್ಚಾದ ಕೂಡಲೇ ಸಕ್ಕರೆ ಹಾಕಿ ಬೆಲ್ಲ ತಯಾರಿಸುವವರ ಸಂಖ್ಯೆಯೂ ಕಡಿಮೆಯಾಯಿತು. ಇದರಿಂದ ಬೆಲ್ಲದ ಉತ್ಪಾದನೆ ಇಳಿಮುಖವಾಗಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಕೇಂದ್ರದ ಇ20 ಪೆಟ್ರೋಲ್‌ ಪರಿಣಾಮ ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಸಕ್ಕರೆ ಉತ್ಪಾದನೆಗೆ ಹೆಚ್ಚಿನ ಒತ್ತು ಕೊಡದೆ ಎಥೆನಾಲ್ ಉತ್ಪಾದನೆಗೆ ಆದ್ಯತೆ ನೀಡಲಾರಂಭಿಸಿವೆ. ಇದರ ಪರಿಣಾಮ ಸಕ್ಕರೆ ಉತ್ಪಾದನೆ ಕುಸಿತಗೊಂಡು ಬೇಡಿಕೆ ಹೆಚ್ಚಿರುವುದರಿಂದ ಸಕ್ಕರೆ ಬೆಲೆಯಲ್ಲೂ ₹20 ರಿಂದ ₹30 ಹೆಚ್ಚಳವಾಗಲು ಕಾರಣವಾಗಿದೆ.

PREV
Get the latest news and developments from Mandya district (ಮಂಡ್ಯ ಸುದ್ದಿ) — covering local politics, agriculture, civic issues, water conservation, tourism, community affairs and more on Kannada Prabha News.
Read more Articles on

Recommended Stories

ತಮಿಳುನಾಡಿಗೆ 24 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಖಂಡಿಸಿ ಪಂಜಿನ ಮೆರವಣಿಗೆ
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದ ಡಿ.ದೇವರಾಜ ಅರಸು: ಡಾ.ಬಿರಾದಾರ