;Resize=(412,232))
ಮಂಡ್ಯ : ಮಂಡ್ಯ ಜಿಲ್ಲೆಯ ಹಲ್ಲೆಗೆರೆಯಲ್ಲಿ ''ಅಂತಾರಾಷ್ಟ್ರೀಯ ಯೋಗ ಮತ್ತು ಧ್ಯಾನ ಕೇಂದ್ರ'' ನಿರ್ಮಿಸಲಾಗಿದ್ದು, ಇದರ ಶಂಕುಸ್ಥಾಪನೆ ಶೀಘ್ರವೇ ನಡೆಯಲಿದೆ.
ಅಮೆರಿಕದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಅನಿವಾಸಿ ಭಾರತೀಯ, ಮೂಲತಃ ಹಲ್ಲೆಗೆರೆಯವರಾದ ಡಾ.ಲಕ್ಷ್ಮೀನರಸಿಂಹಮೂರ್ತಿ ಅವರು ಭೂತಾಯಿ ಟ್ರಸ್ಟ್ ಹೆಸರಿನಲ್ಲಿ ಇದನ್ನು ನಿರ್ಮಿಸುತ್ತಿದ್ದು, ಶಂಕುಸ್ಥಾಪನಾ ಸಮಾರಂಭಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಷೆಲ್ ಒಬಾಮಾಗೆ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮದ ದಿನಾಂಕ ಇನ್ನೂ ನಿಗದಿಯಾಗಿಲ್ಲ, ಆದರೆ, ಶೀಘ್ರವೇ ದಿನಾಂಕ ನಿಗದಿಯಾಗುವ ಸಾಧ್ಯತೆಯಿದೆ. ಕಾರ್ಯಕ್ರಮಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ಪತ್ನಿ ಆಗಮಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಇಲ್ಲಿಗೆ ಆಗಮಿಸಲು ಅತ್ಯುತ್ತಮ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸ್ಥಳಿಯಾಡಳಿತ ಮುಂದಾಗಿದೆ.
ಮಂಡ್ಯ ಹೊರವಲಯದ ಎಸ್.ಐ.ಕೋಡಿಹಳ್ಳಿ ಗೇಟ್‌ನಿಂದ ಹಲ್ಲೆಗೆರೆ ಗ್ರಾಮದವರೆಗೆ 7.5 ಕಿ.ಮೀ.ಉದ್ದದ ರಸ್ತೆಯನ್ನು 11.4 ಕೋಟಿ ರು.ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕೆ ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಅನುದಾನಕ್ಕೆ ಮನವಿ ಸಲ್ಲಿಸಿತ್ತು. ಅದಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದರು. ಅದರಂತೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಜೊತೆಗೆ, ಹೆಲಿಪ್ಯಾಡ್, ಚರಂಡಿ, ವಿದ್ಯುತ್ ದೀಪ, ಕುಡಿಯುವ ನೀರು ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ. ಒಬಾಮಾ ಜೊತೆ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈಲಾಮಾ ಸೇರಿ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ಸುಮಾರು ₹80 ರಿಂದ ₹100 ಕೋಟಿ ವೆಚ್ಚದಲ್ಲಿ ಈ ಕೇಂದ್ರ ನಿರ್ಮಾಣಗೊಳ್ಳುತ್ತಿದ್ದು, 11 ಅಡಿ ಎತ್ತರದ ''ಭೂತಾಯಿ'' ಪ್ರತಿಮೆ ಮತ್ತು ವಿವಿಧ ತತ್ವಜ್ಞಾನಿಗಳ 64 ಪ್ರತಿಮೆಗಳೂ ಕೂಡ ಇಲ್ಲಿ ನಿರ್ಮಾಣವಾಗಲಿವೆ.
ಡಾ.ಲಕ್ಷ್ಮೀನರಸಿಂಹಮೂರ್ತಿಯವರು ಅಮೆರಿಕದ ಮಾಜಿ ಸರ್ಜನ್ ಜನರಲ್ ವಿವೇಕ್ ಮೂರ್ತಿ ಅವರ ತಂದೆ. ಡಾ.ವಿವೇಕ್ ಮೂರ್ತಿಯವರು ಒಬಾಮಾ ಅವರು ಅಧ್ಯಕ್ಷರಾಗಿದ್ದ ವೇಳೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯ ಕುರಿತಾಗಿ ಅಧ್ಯಕ್ಷರಿಗೆ ಸಲಹೆಗಾರರಾಗಿದ್ದರು.