ಕೃಷಿ ತುರ್ತು ಪರಿಸ್ಥಿತಿಗೆ ದೀರ್ಘ ಕಾಲದ ಉತ್ತರವೆಂಬಂತೆ ಪಾಳೇಕರ್ ಸಾವಯವ ಕೃಷಿ ಪದ್ಧತಿಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ. ಆ ಮೂಲಕ ಸ್ವಾಭಿಮಾನಿ ಕೃಷಿಕನಾಗಿ ರೈತನಾಗಿ, ತಾನೂ ಬದುಕಿ, ತನ್ನ ಮಕ್ಕಳನ್ನೂ ಬದುಕಿಸುತ್ತೇನೆ ಎನ್ನುವವರಿಗೆ ಎಪ್‌ಪಿಕೆ ಒಂದೇ ದಾರಿ ಎಂದು ಪ್ರತಿಪಾದಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷಿ ಕ್ಷೇತ್ರದ ನಷ್ಟ ಹಾಗೂ ಸಾಲಬಾಧೆಯಿಂದಾಗಿ ಭಾರತದಲ್ಲಿ ಪ್ರತಿ ಗಂಟೆಗೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಂಕಿ-ಅಂಶಗಳ ಪ್ರಕಾರ ರಾಷ್ಟ್ರದಾದ್ಯಂತ ವಾರ್ಷಿಕವಾಗಿ ೧೦ ಸಾವಿರಕ್ಕೂ ಹೆಚ್ಚು ರೈತರು ಮತ್ತು ಕೃಷಿ ಕಾರ್ಮಿಕರು ಸಾಲದ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಆತಂಕ ವ್ಯಕ್ತಪಡಿಸಿದರು.

ನಾಟಿ (ಹಳ್ಳಿಕಾರ್) ಹಸು ಆಧಾರಿತ ಸುಭಾಷ್ ಪಾಳೇಕರ್ ಕೃಷಿ ಜನಾಂದೋಲನ ವತಿಯಿಂದ ನಗರದ ಕೆವಿಎಸ್ ಭವನದಲ್ಲಿ ನಡೆದ ಡಾ.ಸುಭಾಷ್‌ ಪಾಳೇಕರ್ ಅವರ ೭೭ನೇ ಹುಟ್ಟುಹಬ್ಬದ ಅಂಗವಾಗಿ ಗುರುವಂದನೆ, ಕರಿಮೆಣಸಿನ ಸಸಿ ಮತ್ತು ಗೌರಿಸಣ್ಣ ಭತ್ತದ ಬಿತ್ತನೆ ಬೀಜ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೈತರು ತಮ್ಮ ಜಮೀನುಗಳಲ್ಲಿ ಬೆಳೆ ಬೆಳೆದು ತಾವೂ ತಿಂದು ಉಳಿದಿದ್ದನ್ನು ಮಾರಾಟ ಮಾಡಿ ಖುಷಿಯಿಂದಲೇ ಇದ್ದರು. ಆದರೆ, ೧೯೯೫ರಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಪ್ರಾರಂಭವಾದವು. ಅಂದು ಭಾರತ ವಿಶ್ವ ವಾಣಿಜ್ಯ ಸಂಸ್ಥೆಯ ಸದಸ್ಯತ್ವ ಪಡೆಯಿತು. ಇದರಿಂದಾಗಿ ನಮ್ಮ ದೇಶದ ಕೃಷಿ ಮಾರುಕಟ್ಟೆಗಳಲ್ಲಿ ವಿದೇಶಿ ಉತ್ಪನ್ನಗಳು ಬಿಕರಿಯಾಗಲು ಪ್ರಾರಂಭವಾಯಿತು. ಇದು ನಮ್ಮ ರೈತರ ಪರಿಸ್ಥಿತಿ ಹಾಳಾಗಲು ಕಾರಣವಾಯಿತು ಎಂದು ವಿವರಿಸಿದರು.

ಜಾಗತಿಕ ಮಾರುಕಟ್ಟೆಯ ಪ್ರವೇಶದಿಂದ ಅಮೆರಿಕಾ, ಆಸ್ಟ್ರೇಲಿಯಾ, ಥೈಲ್ಯಾಂಡ್, ಫಿಲಿಫೈನ್ಸ್‌ನ ಉತ್ಪನ್ನಗಳು ಇಲ್ಲಿ ಮಾರಾಟವಾಗಲು ಶುರುವಾದವು. ಆಮದು ಶುಲ್ಕ ಕಡಿಮೆಯಾಯಿತು. ನಮ್ಮ ರೈತರ ಉತ್ಪನ್ನಗಳು ನಿಧಾನವಾಗಿ ಬೇಡಿಕೆ ಕಳೆದುಕೊಂಡವು. ಸ್ಥಳೀಯ ಮಾರುಕಟ್ಟೆ ರೈತರ ಕೈತಪ್ಪಿ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದರು.

ರೈತರು ತಾವು ಬೆಳೆದ ಬೆಳೆಗೆ ಬೆಲೆ ಕಟ್ಟುತ್ತಿರಲಿಲ್ಲ. ಬದಲಾಗಿ ದಲ್ಲಾಳರು ರೈತರ ಉತ್ಪನ್ನಗಳನ್ನು ಹರಾಜು ಹಾಕಿ ಬೆಲೆ ಕಟ್ಟುತ್ತಿದ್ದರು. ಕಷ್ಟಪಟ್ಟು ಬೆವರು ಸುರಿಸಿ ದುಡಿದ ಉತ್ಪನ್ನಗಳಿಗೆ ಕಡಿಮೆ ಕಾಸಿಗೆ ಮಾರಾಟ ಮಾಡಿ ಮನೆಗೆ ಕಡೆ ನಡೆದರೆ, ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ದಲ್ಲಾಳರು ದುಡ್ಡು ಮಾಡಿಕೊಳ್ಳುತ್ತಿದ್ದರು. ಇಂತಹ ಸ್ಥಿತಿಯಿಂದಾಗಿ ರೈತರ ಬದುಕು ಮೂರಾಬಟ್ಟೆಯಾಗಿತ್ತು. ಜೊತೆಗೆ ಹವಾಮಾನ ವೈಪರೀತ್ಯ. ಒಂದು ವರ್ಷ ವಿಪರೀತ ಮಳೆಯಿಂದ ಬೆಳೆ ಕೊಚ್ಚಿಕೊಂಡು ಹೋದರೆ, ಮತ್ತೊಂದು ವರ್ಷ ಮಳೆಯಿಲ್ಲದೆ ಬೆಳೆ ಒಣಗುವಂತಹ ಸ್ಥಿತಿಯಲ್ಲಿ ರೈತರ ಬದುಕು. ಇಷ್ಟಾದರೂ, ನಮ್ಮನ್ನಾಳುವ ಜನಪ್ರತಿನಿಗಳು ಲೋಕಸಭೆ, ವಿಧಾನ ಸಭೆಗಳಲ್ಲಿ ರೈತರ ಆತ್ಮಹತ್ಯೆ, ಬೆಳೆ ಬಗ್ಗೆ ಮಾತುಟಿ ಬಿಚ್ಚುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದಾಗಿ ರೈತ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡು ಕುಟುಂಬವನ್ನೂ ಬೀದಿ ಪಾಲು ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ನೊಂದು ನುಡಿದರು.

ರಾಸಾಯನಿಕ ಕೃಷಿ ಬಗ್ಗೆ ಮಾತನಾಡುವ ಸರ್ಕಾರ ಇತ್ತೀಚೆಗೆ ನೈಸರ್ಗಿಕ ಕೃಷಿ, ಸಾವಯವ ಕೃಷಿಯತ್ತ ಮಾತನಾಡುತ್ತಿದೆ. ಕನಿಷ್ಟ ಬೆಂಬಲ ಬೆಲೆ ನೀಡುವುದಾಗಿ ಜನಪ್ರತಿನಿಧಿಗಳು ಹೇಳುತ್ತಾರೆ. ಆದರೆ, ಅದನ್ನು ಕಾಯಿದೆ ರೂಪದಲ್ಲಿ ಕನಿಷ್ಠ ಬೆಂಬಲ ಬೆಲೆ ನೀಡಿ ರೈತರ ಉತ್ಪನ್ನಗಳನ್ನು ಕೊಳ್ಳುವುದರ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಕೆಲವು ಬೆಳೆಗಳಿಗೆ ಬೇಕಾಬಿಟ್ಟಿ ಎಂಎಸ್‌ಪಿ ದರ ನಿಗದಿ ಮಾಡಿ ಕೈ ತೊಳೆದುಕೊಂಡಿವೆ ಎಂದು ಕಿಡಿಕಾರಿದರು.

ಕೃಷಿ ತುರ್ತು ಪರಿಸ್ಥಿತಿಗೆ ದೀರ್ಘ ಕಾಲದ ಉತ್ತರವೆಂಬಂತೆ ಪಾಳೇಕರ್ ಸಾವಯವ ಕೃಷಿ ಪದ್ಧತಿಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ. ಆ ಮೂಲಕ ಸ್ವಾಭಿಮಾನಿ ಕೃಷಿಕನಾಗಿ ರೈತನಾಗಿ, ತಾನೂ ಬದುಕಿ, ತನ್ನ ಮಕ್ಕಳನ್ನೂ ಬದುಕಿಸುತ್ತೇನೆ ಎನ್ನುವವರಿಗೆ ಎಪ್‌ಪಿಕೆ ಒಂದೇ ದಾರಿ ಎಂದು ಪ್ರತಿಪಾದಿಸಿದರು.

ಪಾಳೇಕರ್ ಸಾವಯವ ಕೃಷಿಕ ಕೆ.ಜೆ.ಅನಂತರಾವ್ ಮಾತನಾಡಿ, ಕಬ್ಬು ಬೆಳೆಯುವ ಜೊತೆಗೆ ಮಧ್ಯದಲ್ಲಿ ತರಕಾರಿ ಬೆಳೆಯುವುದರ ಕುರಿತು ಮಾತನಾಡಿದರೆ, ಮಂಜು ಕಿರಣ್ ಅವರು ರಾಸಾಯನಿಕ ಕೃಷಿ ಎಲ್ಲ ಜ್ಞಾನವನ್ನೂ ಕೃಷಿ ಪದ್ಧತಿ ಕೊಲ್ಲುತ್ತದೆ. ಪುನಃ ಸಾಂಪ್ರದಾಯಿಕ ಹಳೇ ಪದ್ಧತಿ ಕಡೆಗೆ ಸಾಗುವುದರ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಎಸ್‌ಪಿಕೆ ಕೃಷಿ ಉಮ್ಮಡಹಳ್ಳಿ ಶೇಖರ್ ಅವರು ಪ್ರಧಾನ ಭಾಷಣ ಮಾಡಿದರು.

ಜಂಟಿ ಕೃಷಿ ನಿರ್ದೇಶಕ ಜಿ.ಎಸ್.ಜಯಸ್ವಾಮಿ ಸಮಾರಂಭ ಉದ್ಘಾಟಿಸಿದರು. ರೈತ ಮುಖಂಡರಾದ ನಂದಿನಿ ಜಯರಾಂ, ಹೊನ್ನೂರು ಪ್ರಕಾಶ್, ಬಿಜೆಪಿ ಮುಖಂಡ ಎನ್. ಶಿವಣ್ಣ ಇತರರಿದ್ದರು.