ಸ್ವಾತಂತ್ರ್ಯಕ್ಕಾಗಿ ಭಾರತದಲ್ಲಿ ನಡೆದ ಹೋರಾಟ ಜಗತ್ತಿನ ಇತರೆ ದೇಶಗಳಿಗೂ ಪ್ರೇರಣೆಯಾಗಿತ್ತು. ಇಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಡಳಿತ ನಡೆಸುವ ಸರ್ಕಾರಗಳೇ ಸವಾಲಾಗಿ ಪರಿಣಮಿಸಿರುವುದು ದುರಂತ.

ಗದಗ: ದೇಶದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರಿಸರವಾದಿ ಸೋನಂ ವಾಂಗ್ಚೂಕ್ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸುತ್ತಿದ್ದಾರೆ. ಆ ಹೋರಾಟಕ್ಕೆ ನಾವೆಲ್ಲರೂ ಬೆಂಬಲಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಎಸ್‌.ಆರ್‌. ಹಿರೇಮಠ ತಿಳಿಸಿದರು.

ಗುರುವಾರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸಮಾನತೆಗಾಗಿ ನಾವು ಸಂಘಟನೆಯ ವತಿಯಿಂದ ಪರಿಸರ ಹೋರಾಟಗಾರ ಸೋನಂ ವಾಂಗ್ಚೂಕ್ ಅವರ ಹೋರಾಟವನ್ನು ಬೆಂಬಲಿಸಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಭಾರತದಲ್ಲಿ ನಡೆದ ಹೋರಾಟ ಜಗತ್ತಿನ ಇತರೆ ದೇಶಗಳಿಗೂ ಪ್ರೇರಣೆಯಾಗಿತ್ತು. ಇಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಡಳಿತ ನಡೆಸುವ ಸರ್ಕಾರಗಳೇ ಸವಾಲಾಗಿ ಪರಿಣಮಿಸಿರುವುದು ದುರಂತ ಎಂದರು.

ಕೇಂದ್ರ ಸರ್ಕಾರವು ಆರ್‌ಎಸ್‌ಎಸ್ ಸಿದ್ಧಾಂತಗಳನ್ನೇ ಪಾಲಿಸುತ್ತಿದ್ದು, ದೇಶದ ಮಕ್ಕಳ ಹಾಗೂ ಶ್ರಮಿಕರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಈ ಹಿಂದೆ ಸರ್ವಾಧಿಕಾರಿ ಧೋರಣೆ ತಳೆದಿದ್ದ ಇಂದಿರಾ ಗಾಂಧಿ ಅವರಿಗೆ ದೇಶದ ಜನತೆ ತಕ್ಕ ಪಾಠ ಕಲಿಸಿದ್ದರು. ಇದು ಪ್ರಸ್ತುತ ಕೇಂದ್ರ ಸರ್ಕಾರಕ್ಕೂ ಎಚ್ಚರಿಕೆಯ ಕರೆಗಂಟೆಯಾಗಬೇಕು. ಸತ್ಯ, ಅಹಿಂಸೆ ಮತ್ತು ನ್ಯಾಯದ ತಳಹದಿಯ ಹೋರಾಟವನ್ನು ಸರ್ಕಾರ ಗೌರವಿಸಬೇಕು. ನೀಟ್ ಪರೀಕ್ಷಾ ಅಕ್ರಮದ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣ ರಾಜೀನಾಮೆ ನೀಡಬೇಕು ಎಂದರು.

ಬಂಡಾಯ ಸಾಹಿತಿ ಬಸವರಾಜ ಸೂಳಿಬಾವಿ ಮಾತನಾಡಿ, ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ ವ್ಯಕ್ತಿಯನ್ನು ಆರಾಧಿಸುವವರು ಇಂದು ದೇಶದ ಸಂಸತ್ತಿನಲ್ಲಿ ಕುಳಿತಿದ್ದಾರೆ. ಈ ಕೇಂದ್ರ ಸರ್ಕಾರಕ್ಕೆ ಕನಿಷ್ಠ ಸಂವೇದನೆ ಹಾಗೂ ನೈತಿಕತೆ ಇಲ್ಲದಂತಾಗಿದೆ. ಜನಪರ ಹೋರಾಟ ಮಾಡುವವರನ್ನು ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ. ಭಗತ್ ಸಿಂಗ್, ಅಂಬೇಡ್ಕರ್, ಬಸವೇಶ್ವರರ ತತ್ವಗಳಿಂದ ಪ್ರೇರಿತರಾಗಿ ನಾವು ಪ್ರಜಾಪ್ರಭುತ್ವವನ್ನು ಉಳಿಸಬೇಕಿದೆ ಎಂದರು.

ವಿಧಾನಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ಅಂತಾರಾರಾಷ್ಟ್ರೀಯ ಖ್ಯಾತಿಯ ಸೋನಂ ವಾಂಗ್ಚೂಕ್ ಅವರ ಹೋರಾಟವನ್ನು ಕಡೆಗಣಿಸುವ ಮೂಲಕ ಕೇಂದ್ರ ಸರ್ಕಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆತಗ್ಗಿಸುವಂತೆ ಮಾಡಿದೆ. ದೇಶದಲ್ಲಿ ನೀಟ್ ಅಕ್ರಮದಿಂದ ನೊಂದು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದು ಖಂಡನೀಯ ಎಂದರು.

ಧರಣಿಯಲ್ಲಿ ಅಶೋಕ ಬರಗುಂಡಿ, ಶೇಕಣ್ಣ ಕವಳಿಕಾಯಿ, ಕಾಂಗ್ರೆಸ್ ಮುಖಂಡ ಕೃಷ್ಣಗೌಡ ಪಾಟೀಲ, ಶರೀಫ್ ಬಿಳೆಯಲಿ, ಮುತ್ತು ಬಿಳೆಯಲಿ ಸಹಿತ ಪ್ರಗತಿಪರ ಚಿಂತಕರು ಹಾಗೂ ನೂರಾರು ಯುವಕರು ಭಾಗವಹಿಸಿದ್ದರು.