ಈಗಾಗಲೇ ಬೆಂಗಳೂರಿಗೆ 19 ಟಿಎಂಸಿ ಕುಡಿಯುವ ನೀರಿಗೆ ಬಳಕೆಯಾಗುತ್ತಿದೆ. ಇದಲ್ಲದೆ 6 ನೇ ಹಂತದ ಹೆಸರಿನಲ್ಲಿ ನೇರ ಕೃಷ್ಣರಾಜ ಸಾಗರದ ಡೆಡ್ ಸ್ಟೋರೆಜ್ ನಿಂದ 6 ಟಿಎಂಸಿ ಕೊಂಡೊಯ್ಯುವ ಸರ್ಕಾರದ ಪ್ರಯತ್ನ ಮಂಡ್ಯ ಜಿಲ್ಲೆಯನ್ನು ಬರಡಾಗಿಸಲಾಗುತ್ತಿದೆ ಎಂದು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರದ ಆದೇಶಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತಮಿಳುನಾಡಿಗೆ ಕಾವೇರಿ ನೀರನ್ನು ಸರ್ಕಾರ ಹರಿಸುತ್ತಿದೆ ಎಂದು ಆರೋಪಿಸಿ ಕರವೇ ಸೇರಿದಂತೆ ಕನ್ನಡಪರ ಸಂಘಟನೆಗಳು ನಗರದಲ್ಲಿ ಶುಕ್ರವಾರ ರಾತ್ರಿ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.

ನಗರದ ಗಾಂಧಿ ಭವನದಿಂದ ಮಹಾವೀರ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿ ಜಿಲ್ಲೆಯ ರೈತರಿಗೆ ಕಟ್ಟು ಪದ್ಧತಿ ನೀರು ಬಿಡಲು ನಿರ್ಧರಿಸುವ ರಾಜ್ಯ ಸರ್ಕಾರದ ನಿಲುವು ರೈತರ ಹಿತಾಸಕ್ತಿಗೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವತಃ ಜಿಲ್ಲೆಯವರೆ ರಾಜ್ಯ ಜಲಸಂಪನ್ಮೂಲ ಸಚಿವರಾದರೂ ಸದನದಲ್ಲಿ ಈ ಕುರಿತು ಚರ್ಚಿಸಿ ಸುಪ್ರೀಂ ಕೋರ್ಟ್ ಎದುರು ನಾಡಿನ ರೈತರ ಹಿತಕಾಯುವ ಯಾವುದೇ ಪ್ರಯತ್ನ ಮಾಡಿಲ್ಲ. ಬದಲಿಗೆ ಅಗತ್ಯಕ್ಕಿಂತ ಹೆಚ್ಚಿನ ನೀರು ಹರಿಸಿ ರೈತರನ್ನು ಬಲಿಕೊಟ್ಟು ತಮ್ಮ ಅಸಮರ್ಥತೆ ತೋರಿದ್ದಾರೆ ಎಂದು ಕಿಡಿಕಾರಿದರು.

ಇಂದಿಗೂ ಜಿಲ್ಲೆಯಲ್ಲಿ ಕೆರೆಗಳನ್ನು ತುಂಬಿಸುವ ಮತ್ತು ಒತ್ತುವರಿ ತೆರವುಗೊಳಿಸುವ ಇಚ್ಛಾಶಕ್ತಿ ತೋರಿಲ್ಲ. ಎಲ್ಲ ಸರ್ಕಾರಗಳು ನಾಡಿನ ರೈತರಿಗೆ ದ್ರೋಹ ಬಗೆದು ತಮಿಳುನಾಡಿಗೆ ನೀರು ಹರಿಸಿವೆ. ಕಾಂಗ್ರೆಸ್ ಸಹ ಆ ಸಾಲಿಗೆ ಸೇರಿದೆ. ಕಟ್ಟು ಪದ್ಧತಿ ಬದಲು ಸಮರ್ಪಕವಾಗಿ ನೀರು ಹರಿಸಬೇಕು. ಇಲ್ಲವೆ ರೈತರಿಗೆ ಬೆಳೆನಷ್ಟ ತುಂಬಿಕೊಡಲು ಸರ್ಕಾರ ಸಿದ್ಧವಾಗಬೇಕು ಆಗ್ರಹಿಸಿದರು.

ಕಾವೇರಿ ನೀರು ಹಂಚಿಕೆ ವಿವಾದ ಇತ್ಯರ್ಥಗೊಳಿಸಲು ಮಳೆ ಕೊರತೆಯಾದಾಗ ನೀರು ಹಂಚಿಕೊಳ್ಳಲು ಸಂಕಷ್ಟ ಸೂತ್ರ ರೂಪಿಸಬೇಕಿದೆ. ಮಳೆ ಪ್ರಕೃತಿ ನಿರ್ಧಾರಿತವಾಗಿದೆ. ತಮಿಳುನಾಡಿಗೆ ಬಯಸಿದ ಪ್ರಮಾಣಕ್ಕೆ ಮಳೆ ಬೀಳಲು ಸಾಧ್ಯವಿಲ್ಲ. ಬದಲಿಗೆ ಅಯಾ ಸಂದರ್ಭದಲ್ಲಿ ಹರಿಸಿದ ನೀರನ್ನು ತಮಿಳುನಾಡಿನ ಒಟ್ಟು ಪಾಲಿಗೆ ಜಮೆಯಾಗಬೇಕು. ಇದಕ್ಕಾಗಿ ರಾಜ್ಯ ಅಗತ್ಯ‌ ಕಾನೂನು ಹೋರಾಟ ರೂಪಿಸಬೇಕಿದೆ ಎಂದು ಒತ್ತಾಯಿಸಿದರು.

ಈಗಾಗಲೇ ಬೆಂಗಳೂರಿಗೆ 19 ಟಿಎಂಸಿ ಕುಡಿಯುವ ನೀರಿಗೆ ಬಳಕೆಯಾಗುತ್ತಿದೆ. ಇದಲ್ಲದೆ 6 ನೇ ಹಂತದ ಹೆಸರಿನಲ್ಲಿ ನೇರ ಕೃಷ್ಣರಾಜ ಸಾಗರದ ಡೆಡ್ ಸ್ಟೋರೆಜ್ ನಿಂದ 6 ಟಿಎಂಸಿ ಕೊಂಡೊಯ್ಯುವ ಸರ್ಕಾರದ ಪ್ರಯತ್ನ ಮಂಡ್ಯ ಜಿಲ್ಲೆಯನ್ನು ಬರಡಾಗಿಸಲಾಗುತ್ತಿದೆ ಎಂದು ಎಚ್ಚರಿಸಿದರು.

ಜಿಲ್ಲೆಯ ಖಾಸಗಿ ಸಕ್ಕರೆ ಕಾರ್ಖಾನೆಗಳು ತಲಾ ಈಗಾಗಲೇ ಒಂದುವರೆ ಲಕ್ಷಕ್ಕು ಹೆಚ್ಚಿನ ಟನ್ ಕಬ್ಬು ಅರೆದರೂ ಅಧ್ಯಕ್ಷ ಹಾಗೂ ಭ್ರಷ್ಟ ಆಡಳಿತದಿಂದ ಮೈಷುಗರ್ ನಿಗದಿತ ಗುರಿ ತಲುಪದೆ ಸರಾಸರಿ ದಿನವೊಂದಕ್ಕೆ ಎರಡು ಸಾವಿರ ಟನ್‌ಗೆ ಸಿಮೀತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಖಾನೆಯಲ್ಲಿ ಅಕ್ರಮ ಬಿ ಮಿಲ್ ಮಾರಾಟ ಸೇರಿದಂತೆ ಸಾಕಷ್ಟು ಭ್ರಷ್ಟಾಚಾರ ನಡೆದರೂ ಜಿಲ್ಲೆಯ ಶಾಸಕರು ಸಚಿವರ ಈ ಬಗ್ಗೆ ಪ್ರಶ್ನಿಸದೆ ಮೌನವಾಗಿದ್ದು, ಕಾರಣ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಆಟೋ ವೆಂಕಟೇಶ್, ಗೋವಿಂದರಾಜು, ಎಸ್ ಕೆ ರಾಜೂಗೌಡ, ರಾಜೇಂದ್ರ ಬಾಬು, ರಾಮಣ್ಣ, ಎಂ.ಬಿ.ನಾಗಣ್ಣಗೌಡ, ಭೂತನ ಹೊಸೂರು ದೇವೇಗೌಡ, ಮಂಜು, ನಾರಾಯಣಸ್ವಾಮಿ, ಮೋಹನ್ ಸೇರಿದಂತೆ ಹಲವರಿದ್ದರು.

------------