ನಿತ್ಯ ಪತ್ರಿಕೆ ಓದುವುದರಿಂದ ಜ್ಞಾನ ವೃದ್ಧಿ

KannadaprabhaNewsNetwork | Published : Jul 14, 2024 1:36 AM

ಸಾರಾಂಶ

ನಿತ್ಯ ಪತ್ರಿಕೆ ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ಶಾಸಕ ಹಾಗೂ ಹಟ್ಟಿ ಗಣಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಜೆ.ಟಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಾದಗಿ

ನಿತ್ಯ ಪತ್ರಿಕೆ ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ಶಾಸಕ ಹಾಗೂ ಹಟ್ಟಿ ಗಣಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಜೆ.ಟಿ.ಪಾಟೀಲ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು, ಜಿಲ್ಲಾ ಕಾನಿಪ ಘಟಕ ಹಾಗೂ ಕಲಾದಗಿಯ ಕಾರ್ಯನಿರತ ಪತ್ರಕರ್ತರ ಬಳಗದ ಸಂಯುಕ್ತಾಶ್ರಯದಲ್ಲಿ ಗ್ರಾಮದ ಶ್ರೀಗುರುಲಿಂಗೇಶ್ವರ ಪ.ಪೂ ಕಾಲೇಜಿನ ಸಭಾಭವನದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದ ಪತ್ರಿಕಾರಂಗ ಇಂದು ಸಹ ತನ್ನ ಗಟ್ಟಿತನವನ್ನು ಉಳಿಸಿಕೊಂಡಿದೆಯಾದರೂ, ಕೆಲವೊಂದು ಸಲ್ಲದ ಕಾರಣ ಹಾಗೂ ಕೆಲವು ಪತ್ರಕರ್ತರ ಸಲ್ಲದ ವರ್ತನೆಯಿಂದ ತನ್ನ ತನವನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಪತ್ರಕರ್ತರು ಯಾವುದೇ ಅಳುಕಿಲ್ಲದೇ ಸತ್ಯ ಸುದ್ದಿಗಳನ್ನು ಬಿತ್ತರಿಸಲು ಹಿಂಜರಿಯಬಾರದು ಎಂದರು.

ಮನುಷ್ಯ ಜೀವನದಲ್ಲಿ ಪತ್ರಿಕೆಗಳು ಹಾಸುಹೊಕ್ಕಾಗಿವೆ. ಜೀವನದಲ್ಲಿ ಮನುಷ್ಯನಿಗೆ ಆಹಾರ, ನೀರು ಹೇಗೆ ಮುಖ್ಯವೋ ಹಾಗೆ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು, ಜ್ಞಾನವಿಕಾಸಕ್ಕೆ, ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪತ್ರಿಕೆಗಳು ಬಹಳ ಮುಖ್ಯವಾಗಿವೆ. ಮರೆಯಾಗುತ್ತಿರುವ ಪತ್ರಿಕೆಗಳನ್ನು ಓದುವ ಅಭಿರುಚಿಯನ್ನು ಎಲ್ಲರೂ ಮತ್ತೆ ರೂಢಿಸಿಕೊಳ್ಳುವ ಅಗತ್ಯತೆ ಬಹಳ ಇದೆ. ಪತ್ರಿಕೆಯ ದಿನನಿತ್ಯದ ಓದುವ ರೂಢಿ ಜ್ಞಾನ ಸಂಪನ್ನು ವೃದ್ಧಿಸುತ್ತದೆ ಎಂದು ಹೇಳಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಶತಮಾನಗಳಿಂದಲೂ ನಮ್ಮ ಜೀವನದೊಂದಿಗೆ ಹಾಸುಹೊಕ್ಕಾಗಿರುವ ಪತ್ರಿಕಾರಂಗ ಇಂದು ಪತ್ರಿಕೋದ್ಯಮವಾಗಿ ತನ್ನ ಮೂಲತನವನ್ನು ಕಳೆದುಕೊಳ್ಳುತ್ತಿರುವ ವಿಷಾದನೀಯ. ಪತ್ರಿಕೆಗಳು ಯಾವವೊಬ್ಬ ವ್ಯಕ್ತಿಗೆ, ಪಕ್ಷಕ್ಕೆ ಸೀಮಿತಗೊಳ್ಳದೆ ಎಲ್ಲರನ್ನು, ಎಲ್ಲವನ್ನು ಸಮಾನತೆಯಿಂದ ಕಾಣಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾಲಕೋಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಧಲಭಂಜನ, ಪರಿಶುದ್ಧ ಪತ್ರಿಕಾ ರಂಗದ ಕನಸು ಜಿಲ್ಲಾ ಕಾನಿಪದ್ದಾಗಿದೆ. ಈ ನಿಟ್ಟಿನಲ್ಲಿ ಅನೇಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಬೀಳಗಿಯ ನಿವೃತ್ತ ಪ್ರಾಚಾರ್ಯ ಡಾ.ಎಸ್.ಎಚ್.ತೆಕ್ಕನ್ನವರ ಉಪನ್ಯಾಸ ನೀಡಿ ಪತ್ರಿಕಾ ರಂಗದ ಮಹತ್ವವನ್ನು ಸವಿಸ್ತಾರವಾಗಿ ವಿವರಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಎಂ.ಬಿ.ಸೌದಾಗರ, ರಾಜ್ಯರಡ್ಡಿ ಯುವಸೇನೆ ರಾಜ್ಯಾಧ್ಯಕ್ಷ ನಾರಾಯಣ ಹಾದಿಮನಿ, ಗ್ರಾಪಂ ಅಧ್ಯಕ್ಷೆ ಖಾತುನಬಿ ರೋಣ, ಉಪಾಧ್ಯಕ್ಷ ಪಕೀರಪ್ಪ ಮಾದರ, ತಾಪಂ ಮಾಜಿ ಅಧ್ಯಕ್ಷ ಸಂಗಣ್ಣ ಮುಧೋಳ, ಕಲಾದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸಂಶಿ, ಖಜ್ಜಿಡೋಣಿ ಗ್ರಾಪಂ ಸದಸ್ಯ ಪ್ರವೀಣ ಅರಕೇರಿ, ಕಲಾದಗಿ ಗ್ರಾಪಂ ಸದಸ್ಯ ಭೀಮಶಿ ಕರಡಿಗುಡ್ಡ, ತಾಪಂ ಮಾಜಿ ಉಪಾಧ್ಯಕ್ಷ ಸಲೀಂಶೇಖ, ಮುಖಂಡ ಬಂದೇನವಾಜ್ ಸೌದಾಗರ, ಪ್ರಾಚಾರ್ಯ ಶಂಕರ ನಿಂಬರಗಿ, ಮುಖ್ಯಗುರು ಎಸ್.ವ್ಹಿ.ಲಮಾಣಿ, ಹೆಸ್ಕಾಂ ಶಾಖಾಧಿಕಾರಿ ಜಿ.ಎಚ್.ಛಬ್ಬಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು, ಪತ್ರಿಕಾ ವಿತರಕ ಬಿ.ಎಸ್.ಪಾಣಿಶೆಟ್ಟರ್, ರಡ್ಡಿ ಯುವಸೇನೆಯ ರಾಜ್ಯಾಧ್ಯಕ್ಷ ನಾರಾಯಣ ಹಾದಿಮನಿ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಮೆಹಬೂಬ ನದಾಪ ಸ್ವಾಗತಿಸಿದರು. ದ.ರಾ.ಪುರೋಹಿತ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ಹಡಪದ ನಿರೂಪಿಸಿದರು. ಸಿಕಂದರ ಬಾವಾಖಾನ ವಂದಿಸಿದರು.

Share this article