28 ಪದಕ ಬಾಚಿಕೊಂಡ ಮೈಸೂರಿನ ಜಿಎಸ್.ಎ ರುತ್ವಗೆ 6 ಚಿನ್ನ, ಚಾಂಪಿಯನ್ ಶಿಪ್

KannadaprabhaNewsNetwork | Published : Jul 14, 2024 1:36 AM

ಸಾರಾಂಶ

ಜಿಎಸ್.ಎಯಲ್ಲಿ ತರಬೇತುದಾರ ಪವನ್ ಕುಮಾರ್ ಅವರು ಅನೇಕ ಅಂತಾರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಸ್ಪರ್ಧಿಗಳಿಗೆ ತರಬೇತಿ ನೀಡಿದ್ದು, ಕ್ರೀಡಾ ಪ್ರತಿಭೆಗಳನ್ನು ಹೊರತರುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಇತಿಹಾಸದಲ್ಲೇ ಮೊದಲ ಬಾರಿಗೆ ಈಜು ಸ್ಪರ್ಧೆಯಲ್ಲಿ ಜೆ.ಪಿ. ನಗರದ ಗ್ಲೋಬಲ್ ಸ್ಪೋರ್ಟ್ಸ್ ಅಸೋಸಿಯೇಷನ್ 28 ಪದಕಗಳನ್ನು ಬಾಚಿಕೊಂಡಿದೆ.

ಕರ್ನಾಟಕ ಈಜು ಸಂಸ್ಥೆ ಬೆಂಗಳೂರಿನ ಬಸವನಗುಡಿಯಲ್ಲಿ ನಡೆದ ಎನ್.ಆರ್.ಜೆ. ರಾಜ್ಯಮಟ್ಟದ ಸಬ್ ಜೂನಿಯರ್ ಹಾಗೂ ಜೂನಿಯರ್ ಈಜು ಸ್ಪರ್ಧೆಯಲ್ಲಿ ಮೈಸೂರಿನ ಗ್ಲೋಬಲ್ ಸ್ಪೋರ್ಟ್ಸ್ ಅಸೋಸಿಯೇಷನ್ ನ 7 ಕ್ರೀಡಾಪಟುಗಳು 28 ಪದಕ ಪಡೆದು, ಅತ್ಯುತ್ತಮ ಸಾಧನೆಗೈದು, ಮೈಸೂರಿನ ಕೀರ್ತಿಯನ್ನು ಮೆರೆದಿದ್ದಾರೆ.

ಚಾಂಪಿಯನ್ ಶಿಪ್ : ಎಸ್. ರುತ್ವ - 6 ಚಿನ್ನ ಹಾಗೂ 1 ಬೆಳ್ಳಿ ಪದಕದೊಂದಿಗೆ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದಿದ್ದಾರೆ. ಸುಬ್ರಮಣ್ಯ ಜೀವಾಂಶ್ - 2 ಚಿನ್ನ, 4 ಬೆಳ್ಳಿ ಮತ್ತು 1 ಕಂಚು. ಎ. ಸಮೃದ್ - 1ಚಿನ್ನ, 2 ಬೆಳ್ಳಿ ಮತ್ತು 1 ಕಂಚು ಪಡೆದಿದ್ದಾರೆ. ಈ ಮೂವರು ಒರಿಸ್ಸಾದ ಭುವನೇಶ್ವರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಎನ್. ಹಾರಿಕ - 1 ಚಿನ್ನ, 1 ಬೆಳ್ಳಿ, ಆರ್. ಸಾನ್ವಿ - 6 ಬೆಳ್ಳಿ ಹಾಗೂ ಎ. ಅದ್ರಿತ್ - 2 ಕಂಚಿನ ಪದಕ ಪಡೆದಿದ್ದು, ಜಿಎಸ್.ಎ ತಂಡ ಒಟ್ಟು 28 ಪದಕಗಳನ್ನು ಗಳಿಸಿದೆ.

ಜಿಎಸ್.ಎಯಲ್ಲಿ ತರಬೇತುದಾರ ಪವನ್ ಕುಮಾರ್ ಅವರು ಅನೇಕ ಅಂತಾರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಸ್ಪರ್ಧಿಗಳಿಗೆ ತರಬೇತಿ ನೀಡಿದ್ದು, ಕ್ರೀಡಾ ಪ್ರತಿಭೆಗಳನ್ನು ಹೊರತರುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಇವರ ಸತತ ಪರಿಶ್ರಮ, ಸ್ಪರ್ಧಿಗಳನ್ನು ಉತ್ತೇಜಿಸಿ, ಅವರಲ್ಲಿ ಆತ್ಮಸ್ಥೈರ್ಯ ತುಂಬುವ ರೀತಿ ಇಂದಿನ ಈ ಸಾಧನೆಗೆ ಕಾರಣ. ಇವರ ಕಾರ್ಯವೈಖರಿಯನ್ನು ಜಿಎಸ್.ಎ ತಂಡ, ಕ್ರೀಡಾಪಟುಗಳು ಹಾಗೂ ಪೋಷಕರು ಅಭಿನಂದಿಸಿದ್ದಾರೆ.

Share this article