ಗದಗ: ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿ ₹2.47 ಕೋಟಿ ಹಣ ಅಕ್ರಮ ವರ್ಗಾವಣೆಯಾಗಿರುವ ಕುರಿತು ಈಗಾಗಲೇ ನಮ್ಮ ಇಲಾಖೆಯಿಂದ ದೂರು ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಸಂಗ್ರಹಿಸಲು ತಿಳಿಸಲಾಗಿದೆ. ಈ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರು ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ರಾಜ್ಯ ಸರ್ಕಾರಿ ಸ್ವಾಮ್ಯದ ನಿಗಮ ಮತ್ತು ಮಂಡಳಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹಣಕಾಸು ಅಶಿಸ್ತಿನ ವರದಿಗಳ ಹಿನ್ನೆಲೆಯಲ್ಲಿ ನಮ್ಮ ಇಲಾಖೆಯ ನಿಗಮಗಳಾದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಮೂಲಸೌಕರ್ಯ ನಿಗಮ ಮತ್ತು ಇಲಾಖೆಯ ಪ್ರವಾಸೋದ್ಯಮ ನಿರ್ದೇಶನಾಲಯ, ಪುರಾತತ್ವ ಮತ್ತು ಸಂಗ್ರಹಾಲಯಗಳ ಇಲಾಖೆ ಹಾಗೂ ಇತರೆ ಅಂಗ-ಸಂಸ್ಥೆಗಳಲ್ಲಿ ಹಣಕಾಸು ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಲವಾರು ಮಹತ್ವದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಿಗಮ ಹಾಗೂ ಮಂಡಳಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳು ಕಾರ್ಯ ಮಾಡುತ್ತಿರುವ ಬಗ್ಗೆ ಹಲವಾರು ಮಾಹಿತಿಗಳು ಲಭ್ಯವಾಗಿವೆ. 22 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಲ್ಲಿ ವ್ಯವಹರಿಸಲಾಗುತ್ತಿರುವ ಬಗ್ಗೆಯೂ ಇಲಾಖೆಗೆ ಮಾಹಿತಿ ಬಂದಿದೆ. ಇದರೊಟ್ಟಿಗೆ ಇಲಾಖೆಗೆ ಸಂಬಂಧಿಸಿದ ಕೆಲವು ಖಾತೆಗಳನ್ನು ಬಹುವರ್ಷಗಳಿಂದ ವ್ಯವಹರಿಸದೇ ಹಾಗೆಯೇ ಬಿಡಲಾಗಿದೆ ಎನ್ನುವುದು ಕೂಡಾ ಈಗಾಗಲೇ ತಿಳಿದಿದೆ. ಹಲವಾರು ಕಡೆಗಳಲ್ಲಿ ಅತ್ಯಂತ ಪ್ರಮುಖ ಹಣಕಾಸಿನ ವರ್ಗಾವಣೆ ಮತ್ತು ವ್ಯವಹಾರಗಳನ್ನು ಯಾವುದೇ ಜವಾಬ್ದಾರಿಯಿಲ್ಲದ ಹೊರಗುತ್ತಿಗೆ ಸಿಬ್ಬಂದಿ ನಿರ್ವಹಿಸುತ್ತಿರುವ ಬಗ್ಗೆಯೂ ಮಾಹಿತಿಯಿದೆ. ಹಣಕಾಸು ಇಲಾಖೆಯ ಮಾರ್ಗಸೂಚಿ ಸೂತ್ರ ಉಲ್ಲಂಘಿಸುವುದನ್ನು ತಡೆಗಟ್ಟಲು ವಿಶೇಷ ಗಮನ ನೀಡಲಾಗುವುದು. ಈ ಕುರಿತು ವಿವರವಾದ ವರದಿಯನ್ನು 72 ಗಂಟೆಗಳಲ್ಲಿ ಇಲಾಖಾ ಕಾರ್ಯದರ್ಶಿಯಲ್ಲಿ ಸಲ್ಲಿಸಲು ಸೂಚಿಸಲಾಗಿದೆ ಎಂದರು.ಹಣಕಾಸಿನ ವರ್ಗಾವಣೆ ಮತ್ತು ವ್ಯವಹರಣೆಗಳನ್ನು ಕೇವಲ ಖಾಯಂ ಸಿಬ್ಬಂದಿ ಮಾತ್ರ ನಿರ್ವಹಿಸಬೇಕು. ಹಣಕಾಸಿನ ಎಲ್ಲ ವ್ಯವಹಾರಗಳನ್ನು ಡಿಜಿಟಲ್, ಆನ್‌ಲೈನ್ ಪಾವತಿ ಆಧಾರದ ತಂತ್ರಜ್ಞಾನ ಬಳಕೆ ಮಾಡಬೇಕು. ಪ್ರತಿಯೊಂದು ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಒಂದೇ ಖಾತೆಗೆ ವರ್ಗಾಯಿಸಿ ಕಾಯಂ ಸಿಬ್ಬಂದಿಯ ಮೂಲಕ ನಿರ್ವಹಣೆ ಮಾಡುವಂತೆ ಸೂಚನೆ ನೀಡಲಾಗಿದೆ. ಯಾವುದೇ ಲೋಪ-ದೋಷಗಳ ಕುರಿತು ತಕ್ಷಣ ವ್ಯವಸ್ಥಾಪಕ ನಿರ್ದೇಶಕರು ಅಥವಾ ಹಣಕಾಸು ಮುಖ್ಯಸ್ಥರು ಇಲಾಖಾ ಕಾರ್ಯದರ್ಶಿಯವರಿಗೆ ವರದಿ ಮಾಡಬೇಕು ಎಂದು ಈಗಾಗಲೇ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಮಾಹಿತಿ ನೀಡಿದರು.