ಬಳ್ಳಾರಿ: ಪತ್ರಿಕೋದ್ಯಮ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವವರು ಅದಕ್ಕೆ ಬದ್ಧರಾಗಿ ಒತ್ತಡ ನಿಭಾಯಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಪತ್ರಕರ್ತ ವೃತ್ತಿ ಆಯ್ಕೆ ಮಾಡಿಕೊಂಡವರು, ನಿರಂತರ ಅಧ್ಯಯನ, ಸಾಹಿತ್ಯ-ಕೃತಿ ಓದುವ ಹವ್ಯಾಸ, ವಿವಿಧ ಪತ್ರಿಕೆ ವಿಮರ್ಶಿಸುವ ಹಾಗೂ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುವ ಪ್ರವೃತ್ತಿ ಬೆಳಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಜಗನ್ನಾಥ ದೇಸಾಯಿ ಹೇಳಿದರು.
ಪತ್ರಿಕೋದ್ಯಮ ವೃತ್ತಿ ಮಾತ್ರವಲ್ಲದೆ ಸಮಾಜ ಸೇವೆಯೂ ಆಗಿದೆ. ಒಬ್ಬ ಉತ್ತಮ ಪತ್ರಕರ್ತ ಅಥವಾ ವರದಿಗಾರನು ಸಮಾಜಕ್ಕೆ ಉಪಯುಕ್ತವಾಗುವಂತಹ ನಿಖರ ಮತ್ತು ವಸ್ತುನಿಷ್ಠ ಸುದ್ದಿ ಒದಗಿಸಿಬೇಕು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪ್ರತಿನಿತ್ಯವೂ ವಿವಿಧ ಹೊಸ ವಿಷಯಗಳನ್ನು ಕಲಿಯುವ ಅವಕಾಶವಿದ್ದು, ಪತ್ರಕರ್ತರು ಚಾಣಾಕ್ಷತನದಿಂದ ಸುದ್ದಿ ವರದಿ ಮಾಡುವ ಕೆಲಸ ನಿರ್ವಹಿಸಬೇಕು, ಇದರ ಜೊತೆಗೆ ಬದಲಾಗುವ ತಂತ್ರಜ್ಞಾನಕ್ಕೆ ತಕ್ಕಂತೆ ಅದನ್ನು ಬಳಸಿಕೊಳ್ಳುವ ಹಾಗೂ ಅಳವಡಿಸಿಕೊಳ್ಳುವ ಕುಶಲತೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತಿಪ್ಪೇರುದ್ರಪ್ಪ, ವಿದ್ಯಾರ್ಥಿಗಳು ವೃತ್ತಿಪರ ಉತ್ತಮ ಪತ್ರಕರ್ತರಾಗಲು ಬರವಣಿಗೆ ಕೌಶಲ್ಯದೊಂದಿಗೆ ಭಾಷೆಯ ಜ್ಞಾನ ಹೊಂದುವುದು ಅಗತ್ಯ. ವಿದ್ಯಾರ್ಥಿಗಳು ಪದಗಳ ಸಂಗ್ರಹಣೆಗಾಗಿ ಹೆಚ್ಚಾಗಿ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಭಾಷೆಯ ಬಗ್ಗೆ ಜ್ಞಾನ ಹೊಂದಿದಾಗ ಮಾತ್ರ ಉತ್ತಮ ಪತ್ರಕರ್ತರಾಗಲು ಸಾಧ್ಯ ಎಂದರು.ಪತ್ರಿಕೋದ್ಯಮ ಸವಾಲಿನ ಕ್ಷೇತ್ರವಾಗಿದ್ದು, ಪತ್ರಕರ್ತನು ತಾಳ್ಮೆ ಮತ್ತು ನಿಷ್ಠೆಯಿಂದ ಕೆಲಸ ನಿರ್ವಹಿಸಿ, ಘಟನಾವಳಿಗಳ ಬಗ್ಗೆ ಎಚ್ಚರ ವಹಿಸಿ ನ್ಯಾಯಸಮ್ಮತವಾಗಿ ಸುದ್ದಿ ಮಾಡಬೇಕು ಎಂದು ಸಮಾರಂಭದ ಅತಿಥಿಯಾಗಿ ಪಾಲ್ಗೊಂಡಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ವಿ.ತುಕಾರಾಂ ರಾವ್ ಹೇಳಿದರು.
ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ರಾಕೇಶ್ ವಿ.ತಾಳಿಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಿಕೋದ್ಯಮಕ್ಕೂ ಮತ್ತು ಬಳ್ಳಾರಿಗೂ ಅವಿನಾಭಾವ ಸಂಬಂಧವಿದ್ದು, ರಾಜ್ಯದ ಮೊಟ್ಟ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ದಿನಪತ್ರಿಕೆಯು 1844 ರಲ್ಲಿ ಕಂನಡ ಸಮಾಚಾರ ಎಂದು ಮರುನಾಮಕರಣಗೊಂಡು ಇಲ್ಲಿಂದಲೇ ಮುದ್ರಣವಾಗಿದ್ದು ವಿಶೇಷ ಎಂದು ಸ್ಮರಿಸಿದರು.