ಕನ್ನಡಪ್ರಭ ವಾರ್ತೆ ಅಥಣಿ ವಿಶ್ವಗುರು ಬಸವಣ್ಣನವರ ವಚನ ಸಂದೇಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬಸವ ತತ್ವದಂತೆ ಬದುಕಿ ನಾಡಿಗೆ ಬೆಳಕಾದವರು ಅಥಣಿಯ ಮುರುಘೇಂದ್ರ ಶಿವಯೋಗಿಗಳು. ಅವರ ದಿವ್ಯಶಕ್ತಿಯಿಂದಲೇ ಗಚ್ಚಿನಮಠವು ನಾಡಿಗೆ ಪ್ರಸಿದ್ಧಿಯಾಗಿದೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು

ಕನ್ನಡಪ್ರಭ ವಾರ್ತೆ ಅಥಣಿ

ವಿಶ್ವಗುರು ಬಸವಣ್ಣನವರ ವಚನ ಸಂದೇಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬಸವ ತತ್ವದಂತೆ ಬದುಕಿ ನಾಡಿಗೆ ಬೆಳಕಾದವರು ಅಥಣಿಯ ಮುರುಘೇಂದ್ರ ಶಿವಯೋಗಿಗಳು. ಅವರ ದಿವ್ಯಶಕ್ತಿಯಿಂದಲೇ ಗಚ್ಚಿನಮಠವು ನಾಡಿಗೆ ಪ್ರಸಿದ್ಧಿಯಾಗಿದೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.

ಇಲ್ಲಿನ ಗಚ್ಚಿನಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಬಸವ ಸಂಸ್ಕೃತಿ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅನೇಕ ಮಹಾತ್ಮರು, ಸಂತರು, ಬಸವಾದಿ ಶಿವಶರಣರು ಸತ್ಯದ ಮಾರ್ಗದಲ್ಲಿ ನಡೆದು ನಾಡಿಗೆ ಬೆಳಕಾಗಿದ್ದಾರೆ. ಅಂತವರಲ್ಲಿ ಅಥಣಿಯ ಶಿವಯೋಗಿಗಳು ಕೂಡ ಒಬ್ಬರು. ಶಿವಯೋಗದ ಸಾಧನೆಯ ಮೂಲಕ ನಾಡಿಗೆ ಹೆಸರಾದವರು. ಬಸವಣ್ಣನವರ ವಚನಗಳನ್ನು ತಮ್ಮ ಬದುಕಿನಲ್ಲಿ ಮೈಗೂಡಿಸಿಕೊಂಡು, ನಾಡಿನಲ್ಲಿ ಬಸವ ಜಯಂತಿಯನ್ನು ಪ್ರಥಮ ಬಾರಿಗೆ ಆರಂಭಿಸಿದ ಕೀರ್ತಿ ಅವರದ್ದಾಗಿದೆ. ಅವರ ದಿವ್ಯಶಕ್ತಿಯಿಂದಲೇ ಸುಕ್ಷೇತ್ರ ಗಚ್ಚಿನ ಮಠವು ನಾಡಿಗೆ ಪ್ರಸಿದ್ಧಿ ಮತ್ತು ಮಾದರಿಯಾಗಿದೆ. ಶ್ರೀಮಠದಲ್ಲಿ ಕಾಯಕ, ದಾಸೋಹ, ಅರಿವು, ಆಶ್ರಯ ಜತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಅನುಭಾವದ ಜ್ಞಾನಪ್ರಸಾರ ನಡೆಯುತ್ತಲಿದೆ. ಶ್ರಾವಣ ಮಾಸದ ನಮಿತ್ತ ಆರಂಭವಾಗಿರುವ ಬಸವ ಸಂಸ್ಕೃತಿ ಪ್ರವಚನ ಕಾರ್ಯಕ್ರಮದಲ್ಲಿ ಸದ್ಭಕ್ತರು ದಿನನಿತ್ಯ ಪಾಲ್ಗೊಂಡು ಶ್ರೀಗಳ ಅಮೃತವಾಣಿಯನ್ನು ಆಲಿಸಬೇಕೆಂದು ತಿಳಿಸಿದರು.

ಪ್ರವಚನಕಾರರಾದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಭಾರತೀಯರಿಗೆ ಶ್ರಾವಣ ಮಾಸ ಅತ್ಯಂತ ಪವಿತ್ರವಾದ ತಿಂಗಳು. ಎಲ್ಲಡೆ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವಚನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ಮಹಾತ್ಮರ, ಸಂತರ ಮತ್ತು ಬಸವಾದಿ ಶಿವ ಶರಣರ ಪ್ರವಚನಗಳನ್ನು ಆಲಿಸುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕುತ್ತದೆ. ಮಹಾತ್ಮರ ಚಿಂತನೆಗಳನ್ನ ಕೇಳುವುದರಿಂದ ನಮ್ಮಲ್ಲಿನ ಚಿಂತೆಗಳು ಕೂಡ ದೂರಾಗುತ್ತವೆ. ಗಚ್ಚಿನಮಠದಲ್ಲಿ ಬಸವ ಸಂಸ್ಕೃತಿಯ ಪ್ರವಚನ ಆರಂಭಗೊಂಡಿದ್ದು, ಬಸವ ತತ್ವವನ್ನ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವ ಮೂಲಕ ಆದರ್ಶ ಬದುಕು ಕಂಡುಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಹಿರಿಯರಾದ ಪ್ರಕಾಶ್ ಮಹಾಜನ, ಮುರಿಗೆಪ್ಪ ತೊದಲಬಾಗಿ, ಅರುಣ ಯಲಗುದ್ರಿ, ಚಂದ್ರಶೇಖರ ಯಲ್ಲಟ್ಟಿ ಮಾತನಾಡಿದರು. ಸಮಾರಂಭದಲ್ಲಿ ಈರಯ್ಯ ಜಗದಾಳಮಠ, ರಾಮನಗೌಡ ಪಾಟೀಲ, ರಾಜು ಬಿಳ್ಳೂರ, ಈರನಗೌಡ ಪಾಟೀಲ, ರಮೇಶ ಪಾಟೀಲ, ಅಶೋಕ ಹೊಸೂರ, ಗಿರೀಶ್ ದಿವಾನಮಳ, ಸೋಮು ವಾಂಗಿ, ಶೇಖರ್ ಕೋಲಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.