ಕರ್ನಾಟಕ ಖಾಸಗಿ ನರ್ಸಿಂಗ್ ನಿಯಂತ್ರಣ ಕಾಯಿದೆ (ಕೆಪಿಎಂಇ) ನಿಯಮಗಳನ್ನು ಉಲ್ಲಂಘಿಸಿದ 4 ಖಾಸಗಿ ವೈದ್ಯಕೀಯ ಸಂಸ್ಥೆ, ಆಸ್ಪತ್ರೆಗಳು, ಕ್ಲಿನಿಕ್‌ಗಳಿಗೆ ದಂಡ ವಿಧಿಸಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ, ಮೂರು ಸಂಸ್ಥೆಗಳ ಪರವಾನಗಿಗಳನ್ನು ರದ್ದುಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ಖಾಸಗಿ ನರ್ಸಿಂಗ್ ನಿಯಂತ್ರಣ ಕಾಯಿದೆ (ಕೆಪಿಎಂಇ) ನಿಯಮಗಳನ್ನು ಉಲ್ಲಂಘಿಸಿದ 4 ಖಾಸಗಿ ವೈದ್ಯಕೀಯ ಸಂಸ್ಥೆ, ಆಸ್ಪತ್ರೆಗಳು, ಕ್ಲಿನಿಕ್‌ಗಳಿಗೆ ದಂಡ ವಿಧಿಸಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ, ಮೂರು ಸಂಸ್ಥೆಗಳ ಪರವಾನಗಿಗಳನ್ನು ರದ್ದುಪಡಿಸಿದ್ದಾರೆ.ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಪಿಎಂಇ ಮತ್ತು ಕುಂದು ಕೊರತೆ ಪ್ರಾಧಿಕಾರದ ಸಭೆ ನಡೆಸಿದ ಜಿಲ್ಲಾಧಿಕಾರಿ ಕಾಂತರಾಜು ಅವರು ನಿಯಮ ಉಲ್ಲಂಘಿಸಿರುವ ಆಸ್ಪತ್ರೆಗಳು, ಕ್ಲಿನಿಕ್‌ಗಳ ಪ್ರತಿನಿಧಿಗಳನ್ನು ವಿಚಾರಣೆ ನಡೆಸಿ ಎಚ್ಚರಿಕೆ ನೀಡಿ, ಮುಂದಿನ ದಿನಗಳಲ್ಲಿ ಯಾವುದೇ ನ್ಯೂನತೆ ಆಗದಂತೆ ಮುಚ್ಚಳಿಕೆ ಪತ್ರ ನೀಡುವಂತೆ ಸೂಚಿಸಿದರು.
ಎಚ್ಎಎಲ್ ರಸ್ತೆಯ ಕ್ಲೌಡ್‌ನೈನ್ ಆಸ್ಪತ್ರೆಗೆ 50,000 ರು., ಮುನೇಶ್ವರ ಲೇಔಟ್ ಇಕ್ಷಾ ಕ್ಲಿನಿಕ್ 10,000 ರು., ರಾಜಾಜಿ ನಗರ ಎನ್‌ಯು ಹಾಸ್ಪಿಟಲ್ಸ್ ಪ್ರೈವೇಟ್ ಲಿಮಿಟೆಡ್, 10,000 ರು., ಹುಲ್ಲಹಳ್ಳಿಯ ಆರ್.ವಿ. ಕ್ಲಿನಿಕ್‌ಗೆ 1 ಲಕ್ಷ ರು. ದಂಡ ವಿಧಿಸಲಾಗಿದೆ.ಪರವಾನಗಿ ರದ್ದು:
ಟಿ.ದಾಸರಹಳ್ಳಿಯ ಶ್ರೀ ಅಯ್ಯಪ್ಪ ಟೆಂಪಲ್ ಮೆಡಿಕಲ್ ಸೆಂಟರ್ 50,000 ರು., ಜಿಗಣಿಯ ಶ್ರೀ ಪದ್ಮಗಿರಿ ಕ್ಲಿನಿಕ್‌ಗೆ 1 ಲಕ್ಷ ರು., ಹಾಗೂ ಬಿ.ಜಿ ರಸ್ತೆಯ ಶ್ರೀ ಹರ್ಷವರ್ಧನ್ ಆಸ್ಪತ್ರೆಗೆ 20,000 ರು. ದಂಡ ವಿಧಿಸಿ ಕೆ.ಪಿ.ಎಂ.ಇ ಪರವಾನಗಿ ರದ್ದುಪಡಿಸಲಾಗಿದೆ. ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮದಿನಿ ಮತ್ತಿತರ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.