ಬಿಜೆಪಿಯಿಂದ ನಿತ್ಯ ಜನರ ಮೂರ್ಖರನ್ನಾಗಿಸುವ ಕೆಲಸ: ಬಿ.ಎನ್.ಚಂದ್ರಪ್ಪ

KannadaprabhaNewsNetwork |  
Published : Apr 02, 2024, 01:14 AM ISTUpdated : Apr 02, 2024, 07:40 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ದೇಶದಲ್ಲಿ ಬಿಜೆಪಿ ನಿತ್ಯ ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ನಾವು ಪ್ರಬುದ್ಧರು ಎಂಬುದನ್ನು ವಿಧಾನಸಭಾ ಚುನಾವಣಾ ಫಲಿತಾಂಶದಲ್ಲೇ ರಾಜ್ಯದ ಜನ ದೃಢ ಪಡಿಸಿದ್ದಾರೆ ಎಂದು ಬಿ.ಎನ್.ಚಂದ್ರಪ್ಪ ಹೇಳಿದರು.

 ಚಿತ್ರದುರ್ಗ : ಏಪ್ರಿಲ್ ಒಂದರ ಮೂರ್ಖರ ದಿನ ಎಂದು ವಿಶ್ವದಲ್ಲಿ ಆಚರಿಸಲಾಗುತ್ತದೆ. ಆದರೆ, ದೇಶದಲ್ಲಿ ಬಿಜೆಪಿ ಪಕ್ಷದವರು ನಿತ್ಯ ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಪ್ರಬುದ್ಧರು ಎಂಬುದನ್ನು ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಕರ್ನಾಟಕದ ಜನ ದೃಢ ಪಡಿಸಿದ್ದಾರೆ ಎಂದು ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಹೇಳಿದರು.

ರಾಜನಹಳ್ಳಿ ವಾಲ್ಮೀಕಿ ಗುರುಪೀಠ, ಬೆಳ್ಳೋಡಿ ಕಾಗಿನೆಲೆ ಗುರುಪೀಠಕ್ಕೆ ಸೋಮವಾರ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು ಏಪ್ರಿಲ್ ಒಂದರಂದು ನಡೆದಾಡುವ ದೇವರು ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಶ್ರೀಗಳು ಜನ್ಮ ತಾಳಿದ್ದಾರೆ. ಅವರ ಸಮಾಜಮುಖಿ ಚಿಂತನೆಗಳು ಎಲ್ಲರಿಗೂ ಮಾರ್ಗದರ್ಶಿಯಾಗಬೇಕೆಂದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದ ಜನೋಪಯೋಗಿ ಯೋಜನೆಗಳು ನಾಡಿನ ಸಮಗ್ರ ಅಭಿವೃದ್ಧಿಗೆ ಬುನಾದಿ ಆಗಲಿವೆ. ಈಗಾಗಲೇ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳು ಮಠಾಧೀಶರ ಆಶಯವನ್ನೇ ಹೊಂದಿದ್ದು, ಜನರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡಲಾಗುತ್ತಿದೆ. ಅನ್ನಭಾಗ್ಯ, ಸ್ತ್ರೀಶಕ್ತಿ, ಯುವನಿಧಿ, ಗೃಹಲಕ್ಷ್ಮಿ, ಗೃಹಜ್ಯೋತಿ ಗ್ಯಾರಂಟಿ ಯೋಜನೆಗಳು ಬಡ, ಮಧ್ಯಮ ವರ್ಗದ ಜನರ ಬಾಳಲ್ಲಿ ಬೆಳಕು ಮೂಡಿಸಿವೆ ಎಂದರು.

ವಾಲ್ಮಿಕಿ ನಾಯಕ, ಹಾಲುಮತ ಕುರುಬ ಸಮುದಾಯದ ಮಠಗಳಿಗೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದಿದ್ದೇನೆ. ಈ ಸಂದರ್ಭ ಗುರುಗಳು ಅತ್ಯಮೌಲ್ಯ ಸಲಹೆ, ಸೂಚನೆಗಳನ್ನು ಕೊಟ್ಟಿದ್ದಾರೆ. ಮುಖ್ಯವಾಗಿ ಜನಪಯೋಗಿ ಕಾರ್ಯಕ್ರಮಗಳನ್ನು ರೂಪಿಸಲು ಹಾಗೂ ಶಿಕ್ಷಣ, ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಆದ್ಯತೆ ನೀಡುವಂತೆ ತಿಳಿಸಿದ್ದಾರೆ. ಗುರುಗಳ ಸಲಹೆ ಉನ್ನತವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಶಪಥ ಮಾಡಿದ್ದೇನೆ ಎಂದರು.

ಸಂತರು, ಮಠಾಧೀಶರ ಆಶಯದಂತೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕಾಯಕ ತತ್ವದಡಿ ಆಡಳಿತ ನಡೆಸುತ್ತಿದೆ. ಮಾಡಿದಷ್ಟು ನೀಡು ಭೀಕ್ಷೆ ಎಂಬ ನಾಯಕನಹಟ್ಡಿ ತಿಪ್ಪೇರುದ್ರಸ್ವಾಮಿಗಳ ಚಿಂತನೆ ಉದ್ಯೋಗ ಖಾತ್ರಿ ಯೋಜನೆ ಹೊಂದಿದೆ. ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಬುದ್ಧ, ಬಸವಣ್ಣ ಸೇರಿದಂತೆ ಅನೇಕ ಮಹನೀಯರ ಆಶಯದಂತೆ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ ಎಂದು ಹೇಳಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆಗಿದ್ದು, ಕಳೆದ ಬಾರಿ ಸೋತ ಮರುದಿನದಿಂದಲೇ ಕ್ಷೇತ್ರದ ಜನರ ಜೊತೆ ಓಡಾಡಿದ್ದೇನೆ. ಭದ್ರಾ ಮೇಲ್ದಂಡೆ, ರೈಲ್ವೆ ಸೇರಿದಂತೆ ಅನೇಕ ಯೋಜನೆಗಳ ಜಾರಿಗೆ ಜನರ ಧ್ವನಿಯಾಗಿದ್ದೇನೆ. ನಾನು ಸಂಸದನಾಗಿದ್ದ ಸಂದರ್ಭ ಎಲ್ಲ ಶಾಸಕರನ್ನು ವಿಶ್ವಾಸಕ್ಜೆ ತೆಗೆದುಕೊಂಡು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ತೀವ್ರತೆ ನೀಡಲು ಶ್ರಮಿಸಿದ್ದೇನೆ. ಜೊತೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಹಣದ ಕೊರತೆ ಆಗದಂತೆ ಹೇರಳವಾಗಿ ಅನುದಾನ ನೀಡಿದ್ದರು. ಆದರೆ ಕಳೆದ ಐದು ವರ್ಷ ಕಾಮಗಾರಿ ಕುಂಠಿತವಾಗಿದೆ. ಬಿಜೆಪಿಯ ಶಾಸಕರು ಮತ್ತು ಸಂಸದರ ಮಧ್ಯೆ ಸಮನ್ವತೆ ಕೊರತೆ ಇದಕ್ಕೆ ಕಾರಣವಾಗಿದೆ ಎಂದರು.

ಕ್ಷೇತ್ರದಲ್ಲಿ ಏಳು ಮಂದಿ ಶಾಸಕರು, ಮಂಡಳಿ-ನಿಗಮದ ಅಧ್ಯಕ್ಷರು, ಜಿಲ್ಲಾ ಸಚಿವರು, ಹಾಲಿ-ಮಾಜಿ ಮಂತ್ರಿ ಹಾಗೂ ಸಾವಿರಾರು ಮುಖಂಡಯ, ಲಕ್ಷಾಂತರ ಸಂಖ್ಯೆಯ ಕಾರ್ಯಕರ್ತರು ಈಗಾಗಲೇ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಣ್ಣ ಅಪಸ್ವರ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವೆಲ್ಲ ಬೆಳವಣಿಗೆಗಳು ಲಕ್ಷಾಂತರ ಮತಗಳ ಅಂತರದಲ್ಲಿ ಪಕ್ಷದ ಗೆಲುವಿಗೆ ಸಹಕಾರಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಎಸ್‌ಟಿ ಸೆಲ್ ಜಿಲ್ಲಾಧ್ಯಕ್ಷ ಎಚ್.ಅಂಜಿನಪ್ಪ, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ನಗರಸಭಾ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ, ಸುರೇಶ್ , ಬಿ.ಟಿ ಜಗದೀಶ್, ಗ್ರಾಮ ಪಂಚಾಯತಿ ಅಧ್ಯಕ್ಷ ಗಣೇಶ್, ಕುರುಬ ಸಂಘದ ಜಿಲ್ಲಾಧ್ಯಕ್ಷ ಎಸ್.ಶ್ರೀರಾಮ್, ಮರುಳರಾದ್ಯ, ನಾಗರಾಜ್, ಮಂಜುನಾಥ್, ಬಸವರಾಜ್ ಉಪಸ್ಥಿತರಿದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ