ಸ್ವಾವಲಂಬಿ ಜೀವನಕ್ಕೆ ಹೈನುಗಾರಿಕೆ ಸಹಕಾರಿ: ಶಿವಾನಂದ ಬೀಳಗಿಮಠ

KannadaprabhaNewsNetwork | Published : Dec 7, 2024 12:31 AM

ಸಾರಾಂಶ

ರೈತರು ವೈಜ್ಞಾನಿಕವಾಗಿ ಕೃಷಿ ಚಟುವಟಿಕೆಯತ್ತ ಹೆಚ್ಚು ಆಸಕ್ತಿ ಬೆಳೆಸಿಕೊಂಡು ಕೃಷಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಮುಂದಾಗಬೇಕು.

ಕೃಷಿ ವಿಸ್ತರಣಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ರೈತರು ವೈಜ್ಞಾನಿಕವಾಗಿ ಕೃಷಿ ಚಟುವಟಿಕೆಯತ್ತ ಹೆಚ್ಚು ಆಸಕ್ತಿ ಬೆಳೆಸಿಕೊಂಡು ಕೃಷಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ನಿವೃತ್ತ ಉಪನ್ಯಾಸಕ ಶಿವಾನಂದ ಬೀಳಗಿಮಠ ಹೇಳಿದರು.

ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಶ್ರೀ ಸಿದ್ದಾರೂಢರ ಮ್ಯಾಗಳಮಠದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕೃಷಿ ವಿಸ್ತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಜತೆ ಹೈನುಗಾರಿಕೆ ಮಾಡುವುದರಿಂದ ಅತಿ ಕಡಿಮೆ ಅವಧಿಯಲ್ಲಿ ಆದಾಯ ಹೆಚ್ಚಿಸಿಕೊಂಡು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.

ಅಮೇರಿಕ ದೇಶದ ಎಚ್.ಎಫ್. ತಳಿಯ ಹಸು ಸುಮಾರು ೧೮ ಲೀಟರ್‌ಗಿಂತ ಹೆಚ್ಚು ಹಾಲನ್ನು ಕೊಡುತ್ತವೆ. ಆದರೆ ನಮ್ಮ ವಾತಾವರಣಕ್ಕೆ ಹೊಂದಿಕೊಳ್ಳುವ ಹಸುಗಳನ್ನು ಸಾಕುವುದರಿಂದ ಹೆಚ್ಚು ಹಾಲು ಉತ್ಪಾದನೆ ಮಾಡುವ ಮೂಲಕ ಹೆಚ್ಚೆಚ್ಚು ಆದಾಯ ಗಳಿಸಬಹುದು. ರೈತರ ಆರ್ಥಿಕತೆಗೆ ಬೆನ್ನೆಲಬು ಅಂದರೆ ಹೈನುಗಾರಿಕೆಯಾಗಿದೆ. ಹೈನುಗಾರಿಕೆ ಸುಧಾರಿಸಲು ಹಸುಗಳಿಗೆ ಪಶು ಆಹಾರ, ಹುಲ್ಲು ಬೆಳೆಸಿ, ಮೇಯಿಸುವುದು ಅಧಿಕ ಹಾಲು ಉತ್ಪಾದನೆಗೆ ಹೆಚ್ಚು ಅನುಕೂಲಕರವಾಗಿದೆ. ಹಸುಗಳನ್ನು ಸಾಕುವವರು ಸೂಕ್ತ ಸಮಯಕ್ಕೆ ಸೂಕ್ತ ಚಿಕಿತ್ಸೆ ಅಥವಾ ಲಸಿಕೆ ಹಾಕಿಸಬೇಕು. ಇದರಿಂದ ರಾಸುಗಳ ಆರೋಗ್ಯ ಕಾಪಾಡುವುದರ ಜೊತೆಗೆ ಹೆಚ್ಚೆಚ್ಚು ಹೈನುಗಾರಿಕೆ ಮಾಡಲು ಹೆಚ್ಚು ಸಹಕಾರಿಯಾಗಲಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಶರಣಕುಮಾರ ಅಮರಗಟ್ಟಿ ಮಾತನಾಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತನ್ನ ಅಧೀನದಲ್ಲಿ ಬರುವ ಸಂಘಗಳಿಗೆ ಸಾಲ ನೀಡಿ, ಮರು ಪಾವತಿ ಮಾಡಿಕೊಳ್ಳಲು ಮಾತ್ರ ಶ್ರಮಿಸುತ್ತಿಲ್ಲ. ಯೋಜನೆಯಿಂದ ಪಡೆದ ಸಾಲವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಸಮಯಕ್ಕನುಸಾರವಾಗಿ ತಮಗೆ ಮಾಹಿತಿ ನೀಡುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ಮಹಿಳೆಯರ ಸ್ವಾವಲಂಬಿ ಬದುಕನ್ನು ಡಾ. ವೀರೇಂದ್ರ ಹೆಗ್ಗಡೆ ದಂಪತಿಗಳು ಸದಾ ಬಯಸುತ್ತಿದ್ದಾರೆ ಎಂದರು.

ಒಕ್ಕೂಟದ ಅಧ್ಯಕ್ಷೆ ಗೀತಾ ಕೀರ್ದಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಮೇಲ್ವಿಚಾರಕ ಟಿ. ಪ್ರಸನ್ನ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಗೀತಾ ನಂದಿಹಳ್ಳಿ, ವಲಯ ಮೇಲ್ವಿಚಾರಕಿ ಚನ್ನಮ್ಮ ಗೌಡ್ರ, ಸೇವಾ ಪ್ರತಿನಿಧಿ ಸಂಗನಗೌಡ ರಾಮಡಗಿ, ವಿವಿಧ ಸಂಘಗಳ ಪದಾಧಿಕಾರಿಗಳು ಇದ್ದರು.

Share this article