ಹೈನುಗಾರಿಕೆ ರೈತಸ್ನೇಹಿ ಉದ್ಯಮ: ಡಿ.ಆರ್. ಪಾಟೀಲ

KannadaprabhaNewsNetwork |  
Published : Feb 06, 2026, 02:15 AM IST
ಕಾರ್ಯಕ್ರಮವನ್ನು ಡಿ.ಆರ್. ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಕಡಿಮೆ ವೆಚ್ಚದಲ್ಲಿ ಆರಂಭಿಸಬಹುದಾದ ಹೈನೋದ್ಯಮ, ಕೃಷಿಗೆ ಪೂರಕವಾಗಿದ್ದು, ಪರಿಸರ ಸಂರಕ್ಷಣೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ.

ಮುಳಗುಂದ: ಇತ್ತೀಚಿನ ದಿನಮಾನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಪರ್ಯಾಯ ಆದಾಯ ಮೂಲಗಳ ಅಗತ್ಯತೆ ಹೆಚ್ಚಾಗಿದೆ. ಹೈನೋದ್ಯಮ ರೈತರಿಗೆ ಉತ್ತಮ ಆದಾಯ ನೀಡುವ ಸಹಾಯಕ ಉದ್ಯಮವಾಗಿ ಬೆಳೆಯುತ್ತಿದೆ ಎಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್‌. ಪಾಟೀಲ ತಿಳಿಸಿದರು.

ಸಮೀಪದ ಕಣವಿ ಗ್ರಾಮದಲ್ಲಿ ಗುರುವಾರ ಜಿಪಂ, ಪಶುಪಾಲನಾ ಮತ್ತು ಪಶು ಸೇವಾ ಇಲಾಖೆ, ಸಹಕಾರಿ ಹಾಲಿ ಉತ್ಪಾದಕರ ಸಂಘಗಳ ಒಕ್ಕೂಟ, ಕೆಸಿಸಿ ಬ್ಯಾಂಕ್‌ ಹಾಗೂ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಮಿಶ್ರತಳಿ ಹಸುಗಳ ಅಧಿಕ ಹಾಲು ಇಳುವರಿ ಸ್ಪರ್ಧೆ, ಬೃಹತ್‌ ಜಾನುವಾರು ಪ್ರದರ್ಶನ ಹಾಗೂ ಸಾಮಾನ್ಯ ಸೇವಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಡಿಮೆ ವೆಚ್ಚದಲ್ಲಿ ಆರಂಭಿಸಬಹುದಾದ ಹೈನೋದ್ಯಮ, ಕೃಷಿಗೆ ಪೂರಕವಾಗಿದ್ದು, ಪರಿಸರ ಸಂರಕ್ಷಣೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ. ಹೈನೋದ್ಯಮವನ್ನು ಗ್ರಾಮೀಣ ಮಟ್ಟದಲ್ಲಿ ಉತ್ತೇಜಿಸಿದರೆ, ರೈತರ ಆದಾಯ ಹೆಚ್ಚುವುದರ ಜತೆಗೆ ಪರಿಸರ ಸಮತೋಲನ ಕಾಪಾಡಲು ಸಹ ಸಹಾಯವಾಗುತ್ತದೆ. ಆದ್ದರಿಂದ ರೈತರು ಹಾಗೂ ಯುವಕರು ಈ ಉದ್ಯಮದತ್ತ ಗಮನ ಹರಿಸುವುದು ಅಗತ್ಯವಾಗಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಕಪ್ಪತಗುಡ್ಡ ನಂದಿವೇರಿ ಮಠದ ಶಿವಕುಮಾರ ಶ್ರೀಗಳು ಮಾತನಾಡಿ, ಹಿಂದೆ ಪ್ರೀತಿ, ನಂಬಿಕೆ, ವಿಶ್ವಾಸದ ಮೇಲೆ ಮನುಷ್ಯನ ಜೀವನ ನಡೆಯುತ್ತಿತ್ತು. ಹಣದ ವ್ಯಾಮೋಹವೇ ಇರಲಿಲ್ಲ. ಇಂದಿನ ದಿನಮಾನಗಳಲ್ಲಿ ಎಲ್ಲವೂ ಬದಲಾಗಿ ಎಲ್ಲರೂ ನೌಕರಿ ಎಂದು ನಗರ ಪ್ರದೇಶಗಳಿಗೆ ಸೇರಿ ಹಳ್ಳಿಗಳು ಅನಾಥಾಶ್ರಮವಾಗಿವೆ ಎಂದರು.

ಮಕ್ಕಳನ್ನು ಒಕ್ಕಲುತನದಿಂದ ದೂರವಿಟ್ಟು, ಶಿಕ್ಷಣ, ನೌಕರಿ ಬಗ್ಗೆ ತಿಳಿಸಿದೇವು. ಒಕ್ಕುಲತನ ಶ್ರೇಷ್ಠ, ವ್ಯವಹಾರ ಮಧ್ಯಮ, ನೌಕರಿ ಕನಿಷ್ಠ ಎಂದು ಹಿಂದೆ ಹಿರಿಯರು ಹೇಳುತ್ತಿದ್ದರು. ನೌಕರಿ ಎನ್ನುವುದು ಗುಲಾಮಗಿರಿ, ಆದರೆ ಒಕ್ಕುಲತನದಲ್ಲಿ ಸ್ವಾತಂತ್ರ್ಯವಿದೆ ಎಂದು ತಿಳಿಸುತ್ತಾ ಸಾವಯವ ಕೃಷಿ ಕುರಿತು ಸುದೀರ್ಘವಾಗಿ ಮಾತನಾಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿ, ರೈತರು, ಯುವಕರು ಹೈನೋದ್ಯಮದಲ್ಲಿ ಆಸಕ್ತಿ ಹೊಂದಬೇಕು. ಇದರಿಂದ ಹಾಲಿನ ಕೊರತೆ ನೀಗುತ್ತದೆ. ಮಿಶ್ರ ತಳಿಗಳ ಹಸುಗಳ ಸಾಕಾಣಿಕೆ ಹೆಚ್ಚಾಗಿ, ಜವಾರಿ ಹಸುಗಳ ತಾತ್ಸಾರ ಭಾವನೆ ಮೂಡಿತು. ಹೊಲಗಳಿಗೆ ರಾಸಾಯನಿಕ ಗೊಬ್ಬರಕ್ಕೆ ಮಾರು ಹೋಗಿ ಭೂಮಿಯ ಫಲವತ್ತತೆ ಕಡಿಮೆಯಾಗುತ್ತ ಬಂದು, ಮತ್ತೆ ಸಾವಯವ ಕೃಷಿ ಕಡೆ ರೈತರ ಒಲವು ಹೆಚ್ಚಾಗಿ ಜವಾರಿ ರಾಸುಗಳ ಬೇಡಿಕೆ ಹೆಚ್ಚಾಗಿದೆ. ಆ ನಿಟ್ಟಿನಲ್ಲಿ ಈ ಒಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು, ರೈತರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಈ ವೇಳೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಎಚ್.ಬಿ. ಹುಲಗಣ್ಣವರ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಸೇರಿದಂತೆ ಇತರರು ಮಾತನಾಡಿದರು. ಮಿಶ್ರತಳಿ ಹಸುಗಳ ಅಧಿಕ ಹಾಲು ಸ್ಪರ್ಧೆಯಲ್ಲಿ ವಿಜೇತರಾದ ರೈತರಿಗೆ ಹಾಗೂ ಜಾನುವಾರು ಪ್ರದರ್ಶನದಲ್ಲಿ ವಿಜೇತರಾದ ರೈತರಿಗೆ ಬಹುಮಾನ ವಿತರಿಸಲಾಯಿತು.

ಪರಪ್ಪ ಕೋಳಿವಾಡ, ಎಂ.ಡಿ. ಬಟ್ಟೂರ, ಸಿ.ಬಿ. ದೊಡ್ಡಗೌಡ್ರ, ಎಸ್‌. ವೈಕೋರಿ, ಮಲಕಾಜಪ್ಪ ನವಲಗುಂದ, ಪ್ರಕಾಶ ಉಳವಿ, ಡಿ.ಟಿ. ಕಳಸದ, ಡಾ. ರಾಕೇಶ ತಲ್ಲೂರ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು, ರೈತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮ ಬಾಂಗ್ಲಾದೇಶಿಯರ ಪತ್ತೆಗೆ ರಾಜ್ಯಾದ್ಯಂತ ಬೇಟೆ
17ನೇ ಬಜೆಟ್‌ಗೆ ಸಿದ್ದರಾಮಯ್ಯ ಸಿದ್ಧತೆ : 10 ಇಲಾಖೆ ಸಭೆ