ಮಂಗಳೂರು: ಮಂಗಳೂರು ನಗರದ ಹೊರವಲಯದ ಪ್ರಮುಖ ಹೆದ್ದಾರಿ ಜಂಕ್ಷನ್‌ಗಳಾದ ಬೈಕಂಪಾಡಿ ಮತ್ತು ಕೂಳೂರು ಬಳಿ ಸುಗಮ ಸಂಚಾರ ಹಾಗೂ ಅಪಘಾತ ಮುಕ್ತ ವಲಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ರಾ.ಹೆ. 66ರಲ್ಲಿ ಬರುವ ಈ ಎರಡು ಪ್ರಮುಖ ಜಂಕ್ಷನ್‌ನಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ಅಂಡರ್‌ಪಾಸ್ ನಿರ್ಮಾಣಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಒಟ್ಟು 11.63 ಕೋಟಿ ರು. ಅಧಿಕ ಅನುದಾನ ಬಿಡುಗಡೆ ಮಾಡಿದೆ ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಕೂಳೂರು ಸೇತುವೆ ಬಳಿ ಅಂಡರ್‌ಪಾಸ್: ರಾಷ್ಟ್ರೀಯ ಹೆದ್ದಾರಿ-66ರ ಕೆ.ಐ.ಒ.ಸಿ.ಎಲ್ (KIOCL) ಜಂಕ್ಷನ್ ಮತ್ತು ಕೂಳೂರು ಸೇತುವೆ ಬಳಿ 4.54 ಕೋಟಿ ರೂ. ವೆಚ್ಚದಲ್ಲಿ ಅಂಡರ್ ಪಾಸ್ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಈ ಭಾಗದಲ್ಲಿ ಅಂಡರ್‌ಪಾಸ್ ನಿರ್ಮಿಸುವುದರಿಂದ ತಣ್ಣೀರುಬಾವಿ ಬೀಚ್ ಹಾಗೂ ಎಂ.ಎಸ್.ಇ.ಝೆಡ್ (MSEZ/SCZ) ಕಡೆಗೆ ಚಲಿಸುವ ವಾಹನಗಳ ದಟ್ಟಣೆಯನ್ನು ನಿವಾರಿಸಲು ಮತ್ತು ಸುಗಮ ಸಂಚಾರ ಕಲ್ಪಿಸಲು ಈ ಯೋಜನೆ ಅತ್ಯಂತ ಸಹಕಾರಿಯಾಗಲಿದೆ.ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಇದೀಗ ಕೂಳೂರು ಸೇತುವೆ ಬಳಿ ಅಂಡರ್‌ಪಾಸ್ ನಿರ್ಮಾಣವಾಗಲಿದೆ. ಅಲ್ಲದೆ, ಬ್ಲ್ಯಾಕ್ ಸ್ಪಾಟ್ ಆಗಿ ಬದಲಾಗಿದ್ದ ಬೈಕಂಪಾಡಿ ಜಂಕ್ಷನ್ ಬಳಿಯೂ ಕೆಳಸೇತುವೆ ನಿರ್ಮಾಣಕ್ಕೆ ಅನುಮೋದನೆ ದೊರಕಿರುವುದರಿಂದ ಮಂಗಳೂರು-ಉಡುಪಿ ನಡುವೆ ಸಂಚರಿಸುವ ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಸುಗಮ ಸಂಚಾರ ಸಾಧ್ಯವಾಗಲಿದೆ
- ಕ್ಯಾ.ಬ್ರಿಜೇಶ್ ಚೌಟ, ಸಂಸದರು ದಕ್ಷಿಣ ಕನ್ನಡ