ಹಿಂದೂ ಸಂಘಟನೆಯ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು 48 ಗಂಟೆಯೊಳಗೆ ಭೇದಿಸಿರುವ ಮಂಗಳೂರು ನಗರ ಪೊಲೀಸರು, 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರು : ಹಿಂದೂ ಸಂಘಟನೆಯ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು 48 ಗಂಟೆಯೊಳಗೆ ಭೇದಿಸಿರುವ ಮಂಗಳೂರು ನಗರ ಪೊಲೀಸರು, 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರು ಪೇಜಾವರ ಗ್ರಾಮದ ಶಾಂತಿಗುಡ್ಡೆ ನಿವಾಸಿ, ಬಜ್ಪೆ ಕಿನ್ನಿಪದವಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಅಬ್ದುಲ್ ಸಫ್ವಾನ್ (29), ಶಾಂತಿಗುಡ್ಡೆಯ ನಿಯಾಜ್ (28), ಬಜ್ಪೆ ಕೆಂಜಾರಿನ ಮೊಹಮ್ಮದ್ ಮುಝಮಿಲ್ (32), ಕಳವಾರು ಗ್ರಾಮದ ಕಲಂದರ್ ಶಾಫಿ (31), ಕಾಟಿಪಳ್ಳದ ಆದಿಲ್ ಮೆಹರೂಫ್, ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ರುದ್ರಪಾದ ನಿವಾಸಿ ರಂಜಿತ್ (19), ಕಳಸ ಕೋಟೆಹೊಳೆಯ ನಾಗರಾಜ್ (20), ಜೋಕಟ್ಟೆಯ ಮೊಹಮ್ಮದ್ ರಿಜ್ವಾನ್ (28) ಎಂಬುವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಪ್ರತೀಕಾರಕ್ಕೆ ಸುಪಾರಿ:
ಇದು ಮೇಲ್ನೋಟಕ್ಕೆ ಪ್ರತೀಕಾರ ಮತ್ತು ಪೂರ್ವದ್ವೇಷದ ಕೊಲೆ ಎಂದು ತಿಳಿದು ಬಂದಿದೆ. 2023ರಲ್ಲಿ ಸುರತ್ಕಲ್‌ನಲ್ಲಿ ನಡೆದಿದ್ದ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಸುಹಾಸ್ ಶೆಟ್ಟಿ ನೇರವಾಗಿ ಭಾಗಿಯಾಗಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಇದರ ಪ್ರತೀಕಾರ ತೀರಿಸಿಕೊಳ್ಳಲು ಫಾಜಿಲ್‌ನ ಸಹೋದರ ಆದಿಲ್, ಸುಪಾರಿ ನೀಡಿ ಸುಹಾಸ್ ಶೆಟ್ಟಿಯ ಹತ್ಯೆ ಮಾಡಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ಇನ್ನೊಂದೆಡೆ, ಹತ್ಯೆಯ ಪ್ರಮುಖ ಆರೋಪಿ ಸಫ್ವಾನ್ ಹಾಗೂ ಸುಹಾಸ್ ಶೆಟ್ಟಿ ನಡುವಿನ ದ್ವೇಷವೂ ಕೊಲೆಗೆ ಕಾರಣ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಸುಹಾಸ್ ಶೆಟ್ಟಿಯ ಸ್ನೇಹಿತರಾದ ಪ್ರಶಾಂತ್ ಮತ್ತು ಧನರಾಜ್ 2023ರ ಸೆಪ್ಟೆಂಬರ್‌ನಲ್ಲಿ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸಫ್ವಾನ್, ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಪ್ರಶಾಂತ್ ಮೇಲೆ ದಾಳಿಗೆ ಪ್ಲ್ಯಾನ್ ಮಾಡಿಕೊಂಡಿದ್ದ. ಸುಹಾಸ್ ಶೆಟ್ಟಿ, ಪ್ರಶಾಂತ್‌ನ ಆಪ್ತ ಸ್ನೇಹಿತನಾಗಿ ಆತನ ಬೆಂಬಲಕ್ಕೆ ನಿಂತಿದ್ದ. ಮಾತ್ರವಲ್ಲದೆ ಸಫ್ವಾನ್ ಹತ್ಯೆಗೂ ಸ್ಕೆಚ್ ಹಾಕಿಕೊಂಡಿದ್ದ. ಈ ಮಾಹಿತಿ ಸಫ್ವಾನ್‌ಗೆ ಗೊತ್ತಾಗಿತ್ತು. ಹಾಗಾಗಿ, ಸುಹಾಸ್ ಶೆಟ್ಟಿಯ ಕೊಲೆಗೆ ಸಫ್ವಾನ್ ಹೊಂಚು ಹಾಕಿದ್ದಾನೆ.
ಅದಕ್ಕಾಗಿ ಈ ಹಿಂದೆ ಸುಹಾಸ್ ಶೆಟ್ಟಿ ಕೈಯಿಂದ ಕೊಲೆಗೀಡಾದ ಫಾಝಿಲ್‌ನ ಸಹೋದರ ಆದಿಲ್‌ನನ್ನು ಸಫ್ವಾನ್ ಸಂಪರ್ಕಿಸಿದ್ದು, ಇಬ್ಬರೂ ಸುಹಾಸ್‌ನನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಈ ವೇಳೆ, ಸಹೋದರನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಆದಿಲ್ 5 ಲಕ್ಷ ರು.ಸುಪಾರಿ ನೀಡಿದ್ದು, ಅದರಲ್ಲಿ 3 ಲಕ್ಷ ರು.ಗಳನ್ನು ಸಫ್ವಾನ್‌ಗೆ ಮೊದಲೇ ಪಾವತಿಸಿದ್ದ. ಅಡ್ವಾನ್ಸ್ ಹಣ ಪಡೆದ ಸಫ್ವಾನ್, ಇತರ ಆರೋಪಿಗಳ ಜತೆ ಸೇರಿ ಕೊಲೆಗೆ ಪ್ಲ್ಯಾನ್ ರೂಪಿಸಿ ಕಾರ್ಯಗತಗೊಳಿಸಿದ್ದಾನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಕೊಲೆಗೆ ಸುಪಾರಿ ಪಡೆದುಕೊಂಡ ಬಳಿಕ ಸಫ್ವಾನ್ ಕಳಸದಿಂದ ನಾಗರಾಜ್ ಮತ್ತು ರಂಜಿತ್ ಎಂಬುವರನ್ನು 10 ದಿನಗಳ ಮೊದಲೇ ಕರೆಸಿಕೊಂಡು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ. ಇವರಿಬ್ಬರೂ ಆತನ ಸ್ನೇಹಿತರು, ಜೊತೆಗೆ, ಹಿಂದೂಗಳಾಗಿದ್ದರಿಂದ ಕೊಲೆಗೆ ಕೋಮು ಬಣ್ಣ ಬರಲಾರದು ಎಂಬುದು ಆತನ ಯೋಜನೆಯಾಗಿದ್ದಿರಬಹುದು. ಈ 10 ದಿನಗಳಲ್ಲಿ ಸುಹಾಸ್ ಶೆಟ್ಟಿ ಮೇಲೆ ಈ ತಂಡ ಎರಡು-ಮೂರು ಬಾರಿ ಕೊಲೆಗೆ ಪ್ರಯತ್ನ ನಡೆಸಿದ್ದರೂ ಸಫಲವಾಗಿರಲಿಲ್ಲ. ಕೊನೆಗೆ ಮೇ 1ರಂದು ರಾತ್ರಿ 8.30ರ ವೇಳೆಗೆ ಬಜ್ಪೆ ಸಮೀಪ ಸುಹಾಸ್ ಶೆಟ್ಟಿಯ ಕಾರನ್ನು ಅಡ್ಡಗಟ್ಟಿ ತಲವಾರುಗಳಿಂದ ಬರ್ಬರವಾಗಿ ಕಡಿದು ಕೊಲೆ ಮಾಡಿದ್ದಾರೆ ಎಂದರು.
ಕುಡುಪು ಗುಂಪು ಹತ್ಯೆಗೂ, ಶೆಟ್ಟಿ
ಹತ್ಯೆಗೂ ಸಂಬಂಧವಿಲ್ಲ: ಪೊಲೀಸ್
ಕಳೆದ ಭಾನುವಾರ ಕುಡುಪು ಬಳಿ ನಡೆದ ಗುಂಪು ಹತ್ಯೆಗೂ, ಸುಹಾಸ್ ಶೆಟ್ಟಿ ಹತ್ಯೆಗೂ ಯಾವುದೇ ಸಂಬಂಧ ಇಲ್ಲ. ಕುಡುಪು ಹತ್ಯೆಯಲ್ಲಿ ಮುಸ್ಲಿಂ (ಅಶ್ರಫ್) ವ್ಯಕ್ತಿ ಸಾವಿಗೀಡಾದ ಬಳಿಕ ಹಿಂದೂ (ಸುಹಾಸ್) ಹತ್ಯೆ ನಡೆದಿದ್ದರಿಂದ ಅದಕ್ಕೂ, ಇದಕ್ಕೂ ಕಾಕತಾಳೀಯವಾಗಿ ಲಿಂಕ್ ಆಗಿ ಕೋಮು ಕೊಲೆಯಾಗಿ ಬಿಂಬಿಸಲ್ಪಟ್ಟಿತ್ತು. ಆದರೆ, ಸುಹಾಸ್ ಹತ್ಯೆ ಪೂರ್ವ ದ್ವೇಷದಿಂದ ಯೋಜಿತ ರೀತಿಯ ಕೊಲೆಯಾಗಿದೆ. ಕೊಲೆಯ ಯೋಜನೆ 10-15 ದಿನಗಳ ಮೊದಲೇ ರೂಪುಗೊಂಡಿತ್ತು. ಅದೇ ಹೊತ್ತಿಗೆ ಅಶ್ರಫ್ ಕೂಡ ಕೊಲೆಯಾಗಿದ್ದರಿಂದ ಜಿಲ್ಲೆಯ ಪರಿಸ್ಥಿತಿ ಕೋಮು ಸಂದಿಗ್ಧತೆಗೆ ಸಿಲುಕಿತ್ತು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.